ಕಲಬುರಗಿ: ನೌಕರರ ಕಾರ್ಯಕ್ಷಮತೆ ಕಾಯ್ದುಕೊಳ್ಳುವ ಸಲುವಾಗಿ ಮಹಾನಗರ ಪಾಲಿಕೆ ಬಯೋಮೆಟ್ರಿಕ್ ಜತೆಗೆ ಐರಿಸ್ ಸ್ಕ್ಯಾನಿಂಗ್ (ಕಣ್ಣಿನ ದೃಷ್ಟಿ ಗುರುತಿಸುವಿಕೆ) ವ್ಯವಸ್ಥೆ ಜಾರಿಗೆ ತರುತ್ತಿದೆ. ಇದು ಮೈಗಳ್ಳ ಸಿಬ್ಬಂದಿಯನ್ನು ಸರಿ ದಾರಿಗೆ ತರುವುದರೊಂದಿಗೆ ಅವರ ಸುರಕ್ಷತೆ ಮತ್ತು ಹಾಜರಾತಿಗೂ ಅಭಯ ನೀಡಲಿದೆ.
ಈಗಾಗಲೇ ಮಹಾನಗರ ಪಾಲಿಕೆಯಲ್ಲಿ ಬಯೋಮೆಟ್ರಿಕ್ (ಬೆರಳಚ್ಚು) ಹಾಜರಾತಿ ವ್ಯವಸ್ಥೆ ಜಾರಿಯಲ್ಲಿದೆ. ಕೊರೊನಾ ಕಾರಣ ಕಳೆದ ಒಂದು ವರ್ಷದಿಂದ ಬಯೋಮೆಟ್ರಿಕ್ ಸ್ಥಗಿತಗೊಳಿಸಲಾಗಿದೆ. ಮಷಿನ್ ಮೇಲೆ ಎಲ್ಲರೂ ಬೆರಳಿಟ್ಟು ಬಳಕೆ ಮಾಡುವುದರಿಂದ ಸೋಂಕು ಹರಡುವ ಭೀತಿಯಿಂದ ಇದನ್ನು ರದ್ದು ಮಾಡಲಾಗಿದೆ. ಈಗ ಮತ್ತೆ ಬಯೋಮೆಟ್ರಿಕ್ ಹಾಜರಾತಿ ಪುನಾರಂಭಿಸಲಾಗುತ್ತಿದೆ. ಇದರ ಜತೆಗೆ ನೂತನವಾದ ಐರಿಸ್ ಸ್ಕ್ಯಾನರ್‌ಗಳನ್ನು ಅಳವಡಿಸಲು ಪಾಲಿಕೆ ಮುಂದಾಗಿದೆ.
ಪೌರ ಕಾರ್ಮಿಕರಿಗೆ ಅಭಯ: ಮಹಾ ನಗರವನ್ನು ಸುಂದರ ಮತ್ತು ಸ್ವತ್ಛವಾಗಿ ನೋಡಿಕೊಳ್ಳುವುದು ಪಾಲಿಕೆ ಹೊಣೆ. ಈ ಹೊಣೆಯನ್ನು ಬಹುಪಾಲು ನಿಭಾಯಿಸುವುದೇ ಪೌರ ಕಾರ್ಮಿಕರು. ನಿತ್ಯ ನಗರ ಸ್ವತ್ಛತೆಗೆ ಪೌರ ಕಾರ್ಮಿಕರು ತಮ್ಮ ಕೈಗಳನ್ನು ಸವೆಸುತ್ತಾರೆ. ಹೀಗೆ ದಿನ ಸವೆಯುವ ಕೈಗಳಲ್ಲಿ ಗೆರೆಗಳು ಮಾಸುತ್ತಾ ಹೋಗುತ್ತದೆ. ಇದರಿಂದ ಬಯೋಮೆಟ್ರಿಕ್ ಹಾಜರಾತಿ ನೀಡಲು ಪಡಿಪಾಟಲು ಪಡಬೇಕಾಗುತ್ತದೆ.
ಕೆಲವೊಮ್ಮೆ ಯಂತ್ರದಲ್ಲಿ ಬೆರಳಚ್ಚು ಬೀಳದೆ ಕೆಲಸ ಮಾಡಿದರೂ ಗೈರು ಎಂದು ದಾಖಲಾಗಿದ್ದು ಇದೆ. ಇಂತಹ ತಾಪತ್ರಯವನ್ನೂ ಐರಿಸ್ ಸ್ಕ್ಯಾನಿಂಗ್ ವ್ಯವಸ್ಥೆ ತಪ್ಪಿಸಲಿದೆ. ಅಧಿಕಾರಿಗಳು ಮತ್ತು ಸಿಬ್ಬಂದಿಯ ಅನಗತ್ಯ, ಅನಧಿಕೃತ ರಜೆಗಳನ್ನು ತಪ್ಪಿಸಲು ಆಧುನಿಕ ಹಾಜರಾತಿ ವ್ಯವಸ್ಥೆಗೆ ಹೆಚ್ಚು ಒತ್ತು ಕೊಡಲಾಗುತ್ತಿದೆ. ಈ ನಿಟ್ಟಿನಲ್ಲಿ ಬಯೋಮೆಟ್ರಿಕ್ ಜತೆಗೆ ಐರಿಸ್ ಸ್ಕ್ಯಾನಿಂಗ್ ವ್ಯವಸ್ಥೆ ಅನುಷ್ಠಾನ ಮಾಡಲಾಗುತ್ತಿದೆ.
ನಿತ್ಯದ ಹಾಜರಾತಿಗೆ ಬೆರಳಚ್ಚು ನೀಡಲು ಸಾಧ್ಯವಾಗದ ನೌಕರರು ಮತ್ತು ಸಿಬ್ಬಂದಿ ಐರಿಸ್ ಬಳಸಬಹುದು. ಮುಖ್ಯವಾಗಿ ಈ ಐರಿಸ್ ಸ್ಕ್ಯಾನಿಂಗ್ ವ್ಯವಸ್ಥೆಯು ಪೌರ ಕಾರ್ಮಿಕರಿಗೆ ಹಾಜರಾತಿ ಅಭಯ ನೀಡಲಿದೆ. ಅವರ ಹಿತದೃಷ್ಟಿಯಿಂದಲೇ ಐರಿಸ್ ಯಂತ್ರಗಳನ್ನು ಅಳವಡಿಕೆ ಮಾಡಲಾಗುತ್ತದೆ ಎಂದು ಎನ್ನುತ್ತಾರೆ ಪಾಲಿಕೆ ಅಧಿಕಾರಿಗಳು.
ಸುರಕ್ಷತೆ ಹೇಗೆ?: ಬಯೋಮೆಟ್ರಿಕ್ ಹಾಜರಾತಿ ಕೊಡುವಾಗ ಯಂತ್ರದ ಮೇಲೆ ಬೆರಳಿನ ಸ್ಪರ್ಶ ಆಗಿಯೇ ಆಗುತ್ತದೆ. ಸ್ಪರ್ಶ ಮಾಡದೆ ಹಾಜರಿಯೇ ಬೀಳುವುದಿಲ್ಲ. ಈ ವ್ಯವಸ್ಥೆಯಿಂದ ಕೊರೊನಾ ಹರಡುವ ಸಂಭವ ಹೆಚ್ಚು. ಇದೇ ಕಾರಣಕ್ಕಾಗಿ ಬಯೋಮೆಟ್ರಿಕ್ ಹಾಜರಾತಿ ಬಂದ್ ಮಾಡಲಾಗಿತ್ತು. ಆದರೆ, ಐರಿಸ್ ವ್ಯವಸ್ಥೆ ಇಂತಹ ಯಾವ ಭೀತಿಗೆ ಆಸ್ಪದ ಕೊಡುವುದಿಲ್ಲ. ಐರಿಸ್ ಸ್ಕ್ಯಾನರ್ ಯಂತ್ರದ ಎದುರು ನಿಂತರೆ ಸಾಕು ಕಣ್ಣಿನ ಗೆರೆ ಗುರುತಿಸುತ್ತದೆ. ಯಂತ್ರಕ್ಕೆ ಶಾರೀರಿಕ ಸಂಪರ್ಕದ ಅವಶ್ಯಕತೆ ಬೀಳುವುದಿಲ್ಲ. ಯಾವುದೇ ಸ್ಪರ್ಶ ಇಲ್ಲದೇ ಹಾಜರಾತಿ ನೀಡಬಹುದಾಗಿದೆ. ದೂರದಿಂದಲೇ ಕಣ್ಣಿನ ಸ್ಕ್ಯಾನ್ ಮಾಡುವ ಮೂಲಕವೇ ನೌಕರರ ಹಾಜರಿ ದಾಖಲಾಗುತ್ತದೆ. ಇದು ಹಾಜರಿ ಸಮಯದಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಸುರಕ್ಷತೆ ಒದಗಿಸುತ್ತದೆ ಎನ್ನುವುದು ಅಧಿಕಾರಿಗಳ ವಿವರಣೆ.
ರಂಗಪ್ಪ ಗಧಾರ