Advertisement

ಇರ್ಫಾನ್‌ಖಾನ್‌ ಮೈಸೂರಿನ ನಂಟು

03:06 PM Apr 30, 2020 | mahesh |

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರು ಹಾಗೂ ನಿಧನರಾದ ಖ್ಯಾತ ಬಾಲಿವುಡ್‌ ನಟ ಇರ್ಫಾನ್‌ ಖಾನ್‌ಗೆ ಮೈಸೂರಿನ ಜೊತೆ ಉತ್ತಮ ನಂಟು ಇತ್ತು. ಇದಕ್ಕೆ ಸಾಕ್ಷಿಯಂತೆ ಮೈಸೂರಿಗೆ ಹಲವು ಬಾರಿ ಬಂದಿದ್ದರು. ಚಿತ್ರನಟ, ರಂಗ ಕಲಾವಿದರಾಗಿ ಗುರುತಿಸಿಕೊಂಡಿದ್ದ ಇರ್ಫಾನ್‌ ಖಾನ್‌ 2015ರಲ್ಲಿ ರಾಷ್ಟ್ರಾದ್ಯಂತ ಚರ್ಚೆಗೆ ಕಾರಣವಾಗಿದ್ದ ಬದನವಾಳು ಸುಸ್ಥಿರ ಬದುಕಿನ ರಾಷ್ಟ್ರೀಯ ಸಮಾವೇಶಕ್ಕೆ ಹಿರಿಯ ರಂಗಕರ್ಮಿ ಪ್ರಸನ್ನ ಜೊತೆಗೆ ಆಗಮಿಸಿ, ಒಂದು ರಾತ್ರಿ ತಂಗಿದ್ದರು.

Advertisement

2015 ಏ.19ರಂದು ನಂಜನಗೂಡಿನ ಬದನವಾಳು ಗ್ರಾಮದಲ್ಲಿ ನಡೆದಿದ್ದ ಸುಸ್ಥಿರ ಬದುಕಿನ ರಾಷ್ಟ್ರೀಯ ಸಮಾವೇಶಕ್ಕೆ ಹೋರಾಟಗಾರರು, ಕಲಾವಿದರು, ರೈತ ಸಂಘಟನೆಗಳು ಬೆಂಬಲ ಸೂಚಿಸಿದ್ದವು. ಮೈಸೂರಿಂದ ಸಾಮಾಜಿಕ ಹೋರಾಟಗಾರರು, ಕಲಾವಿದರು, ಗಾಂಧಿ ವಾದಿಗಳು ಬದನವಾಳು ಗ್ರಾಮಕ್ಕೆ ಕಾಲ್ನಡಿಗೆಯ ಮೂಲಕ ತೆರಳಿ ಸಮಾವೇಶಕ್ಕೆ ಮತ್ತಷ್ಟು ಹುರುಪು ತಂದಿದ್ದರು. ಈ ಸಮಾವೆಶಕ್ಕೆ ನಟ ಇರ್ಫಾನ್‌ ಖಾನ್‌ ತನ್ನ ಪತ್ನಿಯೊಂದಿಗೆ, ಗುರುಗಳಾದ ಪ್ರಸನ್ನ ಜೊತೆಗೆ ಆಗಮಿಸಿ ಹೋರಾಟಕ್ಕೆ ಮತ್ತಷ್ಟು ಪುಷ್ಠಿ ನೀಡಿದ್ದರು. ಬಳಿಕ ಮಾರ ನೇಯ ದಿನ ಮೈಸೂರು ರಂಗಾಯಣದಲ್ಲಿ ನಡೆಯುತ್ತಿದ್ದ ಬೇಸಿಗೆ ಚಿನ್ನರ ಶಿಬಿರಕ್ಕೆ ಭೇಟಿ ನೀಡಿ ಒಂದಷ್ಟು ಸಮಯ ಮಕ್ಕಳೊಂದಿಗೆ ಕಳೆದಿದ್ದು, ಈಗ ನೆನಪುಮಾತ್ರ. ಬದನವಾಳು ಗ್ರಾಮದಲ್ಲಿ ತಂಗಿದ್ದ ಅವರು, ತಮ್ಮ ಗುರುಗಳಾದ ಪ್ರಸನ್ನ ಜೊತೆಗೆ ಖಾದಿ ಗ್ರಾಮೋದ್ಯೋಗ ಕೈಮಗ್ಗ ಮತ್ತು ಕರಕುಶಲ ವಸ್ತುಗಳ ತಯಾರಿಸುವ ಗುಡಿಕೈಗಾರಿಕೆಗಳನ್ನು ದೇಶಾದ್ಯಂತ ಕಟ್ಟುವ ಕನಸನ್ನು ಹರಿಬಿಟ್ಟಿದ್ದರು.

ಬಹುರೂಪಿಗೂ ಬಂದಿದ್ದರು: 2016ರ ಆರಂಭದಲ್ಲಿ ಮೈಸೂರು ರಂಗಾಯಣದಲ್ಲಿ ನಡೆದ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವದ ಸಮಾರೋಪದಲ್ಲಿ ಭಾಗವಹಿಸಿದ್ದ ಅವರು, ಸಂವಾದ  ಕಾರ್ಯಕ್ರಮ ನಡೆಸಿಕೊಟ್ಟು ಹಲವು ವಿಚಾರಧಾರೆಗಳನ್ನು ಹರಿಬಿಟ್ಟಿದ್ದರು. ರಂಗಾಯಣದ ಆಗಿನ ನಿರ್ದೇಶಕರಾಗಿದ್ದ ಜನಾರ್ದನ (ಜನ್ನಿ)ಅವರ ಒಡನಾಟ ಹೊಂದಿದ್ದ ಇರ್ಫಾನ್‌ ಮೈಸೂರಿಗೆ ಮತ್ತೂಮ್ಮೆ ಬರಲು ಕಾರಣವಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next