ಡಬ್ಲಿನ್: ಮೇ 11ರ ಶುಕ್ರವಾರ ಅಯರ್‌ಲ್ಯಾಂಡ್ ಪಾಲಿಗೆ ಸ್ಮರಣೀಯ ದಿನವಾಗಿದ್ದು, ಅದು ಟೆಸ್ಟ್ ಕ್ರಿಕೆಟಿಗೆ ಅಡಿಯಿರಿಸಲಿದೆ. ಪ್ರವಾಸಿ ಪಾಕಿಸ್ಥಾನ ವಿರುದ್ಧದ ಈ ಪಂದ್ಯ ಡಬ್ಲಿನ್‌ನಲ್ಲಿ ಆರಂಭವಾಗಲಿದ್ದು, ಐರಿಷ್ ಕ್ರಿಕೆಟ್ ಅಭಿಮಾನಿಗಳು ವಿಶೇಷ ಉತ್ಸಾಹದಲ್ಲಿದ್ದಾರೆ.
ಇದೇ ವೇಳೆ ಪಾಕಿಸ್ಥಾನದ ಯುವ ಬ್ಯಾಟ್ಸ್‌ಮನ್, ಮಾಜಿ ಕ್ರಿಕೆಟಿಗ ಹಾಗೂ ಹಾಲಿ ಆಯ್ಕೆ ಸಮಿತಿ ಅಧ್ಯಕ್ಷ ಇಂಝಮಾಮ್ ಉಲ್ ಹಕ್ ಅವರ ಸಂಬಂಧಿ ಇಮಾಮ್ ಉಲ್ ಹಕ್ ಟೆಸ್ಟ್ ಪಾದಾರ್ಪಣೆಯ ನಿರೀಕ್ಷೆಯಲ್ಲಿದ್ದಾರೆ.
22ರ ಹರೆಯದ ಇಮಾಮ್ ಕೆಂಟ್ ಹಾಗೂ ನಾರ್ತಂಪ್ಟನ್‌ಶೈರ್ ವಿರುದ್ಧದ 2 ಅಭ್ಯಾಸ ಪಂದ್ಯಗಳಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಹೀಗಾಗಿ ಅಯರ್‌ಲ್ಯಾಂಡ್ ವಿರುದ್ಧ ಐತಿಹಾಸಿಕ ಟೆಸ್ಟ್ ಆಡುವ ನಿರೀಕ್ಷೆ ಇಮಾಮ್ ಅವರದು. ಈಗಾಗಲೇ ಯೂನಿಸ್ ಖಾನ್, ಮಿಸ್ಬಾ ಉಲ್ ಹಕ್ ಅವರೆಲ್ಲ ವಿದಾಯ ಹೇಳಿದ್ದರಿಂದ ಯುವ ಬ್ಯಾಟ್ಸ್‌ಮನ್‌ಗಳೇ ಪಾಕಿಸ್ಥಾನದ ಸರದಿಯನ್ನು ಆಧರಿಸಬೇಕಿದೆ. ಪ್ರತಿಭಾನ್ವಿತ ಕ್ರಿಕೆಟಿಗ ಇಮಾಮ್ ಉಲ್ ಹಕ್ ಅವರಲ್ಲಿ ಇಂಥದೊಂದು ಸಾಮರ್ಥ್ಯ ಇದೆ ಎಂಬುದಾಗಿ ಪಾಕ್ ಆಯ್ಕೆ ಸಮಿತಿ ಅಭಿಪ್ರಾಯಪಟ್ಟಿದೆ.
ಪಾಕಿಸ್ಥಾನ-ಆಯರ್‌ಲ್ಯಾಂಡ್ ನಡುವಿನ ಈ ಪಂದ್ಯ ಸಹಜವಾಗಿಯೇ 2007ರ ವಿಶ್ವಕಪ್ ಕಹಿಯನ್ನು ನೆನಪಿಸುತ್ತಿದೆ. ಅಂದು ಅಯರ್‌ಲ್ಯಾಂಡಿಗೆ ಸೋತ ಪಾಕಿಸ್ಥಾನ ಬಹಳ ಬೇಗ ಕೂಟದಿಂದ ನಿರ್ಗಮಿಸಿತ್ತು. ಇದಕ್ಕೆ ಸೇಡು ತೀರಿಸಿಕೊಳ್ಳುವುದು ಪಾಕ್ ಯೋಜನೆ ಆಗಿದ್ದರೆ ಅಚ್ಚರಿ ಇಲ್ಲ.