ಅಬುಧಾಬಿ: ಐಸಿಸಿ ಟಿ20 ವಿಶ್ವಕಪ್ ಕೂಟದ ಎರಡನೇ ದಿನದಾಟದಲ್ಲಿ ಹೊಸ ದಾಖಲೆಯೊಂದು ಬರೆಯಲಾಗಿದೆ. ಐರ್ಲೆಂಡ್ ಬೌಲರ್ ಕರ್ಟಿಸ್ ಕ್ಯಾಂಫರ್ ಸತತ ನಾಲ್ಕು ಎಸೆತದಲ್ಲಿ ನಾಲ್ಕು ವಿಕೆಟ್ ಕಿತ್ತು ಮೆರೆದಾಡಿದ್ದಾರೆ.
ಇಲ್ಲಿನ ಶೇಕ್ ಝಯೀದ್ ಮೈದಾನದಲ್ಲಿ ನೆದರ್ಲಾಂಡ್ ವಿರುದ್ಧದ ಪಂದ್ಯದಲ್ಲಿ ಕ್ಯಾಂಫರ್ ಈ ದಾಖಲೆ ಬರೆದಿದ್ದಾರೆ.
10ನೇ ಓವರ್ ನ ಎರಡನೇ ಎಸೆತದಲ್ಲಿ ಏಕರ್ ಮನ್ ಅವರು ಕ್ಯಾಚ್ ಔಟಾದರು. ಮೂರನೇ ಎಸೆತದಲ್ಲಿ ಟೆನ್ ಡೆಷ್ಕೋಟ್ ಎಲ್ ಬಿಡಬ್ಲ್ಯೂ ಔಟಾದರು. ನಾಲ್ಕನೇ ಎಸೆತದಲ್ಲಿ ಬಲಗೈ ಆಟಗಾರ ಸ್ಕಾಟ್ ಎಡ್ವರ್ಡ್ಸ್ ಎಲ್ ಬಿಡಬ್ಲ್ಯೂ ರೂಪದಲ್ಲಿ ಔಟಾದರು. ಈ ಮೂಲಕ ಕ್ಯಾಂಫರ್ ಹ್ಯಾಟ್ರಿಕ್ ಸಾಧಿಸಿದರು. ಮುಂದಿನ ಎಸೆತದಲ್ಲಿ ವಾನ್ ಡರ್ ಮರ್ವ್ ರನ್ನು ಕ್ಲೀನ್ ಬೌಲ್ಡ್ ಮಾಡಿದ ಕರ್ಟಿಸ್ ಕ್ಯಾಂಫರ್ ಸತತ ನಾಲ್ಕು ಎಸೆತದಲ್ಲಿ ನಾಲ್ಕು ವಿಕೆಟ್ ಪಡೆದು ಮಿಂಚಿದರು.
ಇದನ್ನೂ ಓದಿ:ಎನ್ ಸಿಎ ಮುಖ್ಯಸ್ಥ ಸ್ಥಾನದ ಆಫರ್ ನಿರಾಕರಿಸಿದ ವಿವಿಎಸ್ ಲಕ್ಷ್ಮಣ್
ಹೀಗೆ ಸತತ ನಾಲ್ಕು ಎಸೆತಗಳಲ್ಲಿ ನಾಲ್ಕು ವಿಕೆಟ್ ಕಬಳಿಸಿದ ಮೂರನೇ ಬೌಲರ್ ಆಗಿ ಕರ್ಟಿಸ್ ಕ್ಯಾಂಫರ್ ಮೂಡಿಬಂದರು. 2019ರಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ಲಸಿತ್ ಮಾಲಿಂಗ ಮತ್ತು ಅದೇ ವರ್ಷ ಐರ್ಲೆಂಡ್ ವಿರುದ್ಧ ರಶೀದ್ ಖಾನ್ ಈ ದಾಖಲೆ ಮಾಡಿದ್ದರು. ಈ ಸಾಲಿಗೆ ಇದೀಗ ಕರ್ಟಿಸ್ ಕ್ಯಾಂಫರ್ ಸೇರಿದ್ದಾರೆ.