ನವದೆಹಲಿ: ಜಗತ್ತಿನ ಎಲ್ಲ ಕಡೆ ವ್ಯಾಪಕವಾಗಿ ಹರಡಿರುವ ಕೋವಿಡ್ 19 ವಿರುದ್ಧ ಸೆಣಸಲು ಭಾರತೀಯ ವಿಮಾ ನಿಯಂತ್ರಣ ಪ್ರಾಧಿಕಾರ (ಐಆರ್‌ಡಿಎಐ) ನಿರ್ಧರಿಸಿದೆ.
ಅದು ಎಲ್ಲ ವಿಮಾ ಕಂಪನಿಗಳಿಗೆ ಕೋವಿಡ್ 19 ಕವಚ್ ವಿಮೆ ಬಿಡುಗಡೆ ಮಾಡುವುದನ್ನು ಕಡ್ಡಾಯಗೊಳಿಸಲಿದೆ. ಈ ರೀತಿಯ ವಿಮೆಗಳು 2021 ಮಾರ್ಚ್ 31ರವರೆಗೆ ಮೌಲ್ಯ ಹೊಂದಿರುತ್ತವೆ.
ಈ ವಿಮೆಯಲ್ಲಿ ಎರಡು ರೀತಿಯಿರುತ್ತದೆ. ಮೂಲ ಭೂತವ್ಯಾಪ್ತಿ ಹೊಂದಿರುವ ಒಂದು ಕಡ್ಡಾಯ ವಿಮೆ, ಇನ್ನೊಂದು ಐಚ್ಛಿಕ ವಿಮೆ. ಕಡ್ಡಾಯ ವಿಮೆ ನಷ್ಟ ಪರಿಹಾರಕ್ಕೆ ಸಂಬಂಧಿಸಿರುತ್ತದೆ. ಐಚ್ಛಿಕ ವಿಮೆ ಲಾಭವನ್ನಾಧರಿಸಿರುತ್ತದೆ.
ಐಚ್ಛಿಕಕ್ಕೆ ಸಂಬಂಧಿಸಿದಂತೆ ಕಂತುಗಳು ಹೇಗಿರುತ್ತವೆ ಎನ್ನುವುದನ್ನು ಕಂಪನಿಗಳು ಮೊದಲೇ ಸ್ಪಷ್ಟಪಡಿಸಿಬೇಕು. ಗ್ರಾಹಕ ಇದನ್ನು ಆಯ್ಕೆ ಮಾಡಿಕೊಳ್ಳಬೇಕೆ, ಬೇಡವೇ ಎನ್ನುವುದು ಖಚಿತವಾಗಲಿ ಎನ್ನುವ ದೃಷ್ಟಿಯಿಂದ ಐಆರ್‌ಡಿಎಐ ಇದನ್ನು ಸೂಚಿಸಿದೆ.
ಕನಿಷ್ಠ 50,000 ರೂ.ನಿಂದ ಗರಿಷ್ಠ 5 ಲಕ್ಷ ರೂ.ವರೆಗೆ ಪರಿಹಾರ ನೀಡುವ ವಿಮೆಗಳನ್ನು ಪ್ರಕಟಿಸಬಹುದು. ವಿಮೆಗಳು ಕಾಯುವ ಅವಧಿಯೂ ಸೇರಿದಂತೆ ಮೂರೂವರೆ, ಆರೂವರೆ, ಒಂಬತ್ತೂವರೆ ತಿಂಗಳ ಅವಧಿ ಹೊಂದಿರುತ್ತವೆ. ಖಾಸಗಿಯಾಗಿಯೂ ವಿಮೆ ಮಾಡಿಸಬಹುದು, ಇಡೀ ಕುಟುಂಬಕ್ಕೂ ಮಾಡಿಸಬಹುದು.