ನವದೆಹಲಿ: ಐಆರ್ ಸಿಟಿಸಿ ಹೋಟೆಲ್ ಹಗರಣಕ್ಕೆ ಸಂಬಂಧಪಟ್ಟಂತೆ ಸಿಬಿಐ ಗುರುವಾರ ರಾಷ್ಟ್ರೀಯ ಜನತಾದಳ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಹಾಗೂ ಯಾದವ್ ಪುತ್ರ ತೇಜಸ್ವಿ ಗೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಿದೆ.
ಸೆಪ್ಟೆಂಬರ್ 11ರಂದು ಲಾಲು ಪ್ರಸಾದ್ ಯಾದವ್ ಹಾಗೂ ಸೆಪ್ಟೆಂಬರ್ 12ರಂದು ತೇಜಸ್ವಿ ಯಾದವ್ ವಿಚಾರಣೆಗೆ ಹಾಜರಾಗಬೇಕೆಂದು ಸಿಬಿಐ ಸೂಚನೆ ನೀಡಿದೆ ಎಂದು ಮಾಧ್ಯಮದ ವರದಿ ತಿಳಿಸಿದೆ.
2006ರಲ್ಲಿ ಲಾಲು ಪ್ರಸಾದ್ ಯಾದವ್ ರೈಲ್ವೆ ಸಚಿವರಾಗಿದ್ದಾಗ, 2 ಐಆರ್ ಸಿಟಿಸಿ ಹೋಟೆಲ್ ಗಳ ನಿರ್ವಹಣೆಯ ಗುತ್ತಿಗೆಯನ್ನು ಭಾರೀ ಪ್ರಮಾಣದ ಲಂಚ ಪಡೆದು ಖಾಸಗಿ ಹೋಟೆಲ್ ಗೆ ನೀಡಿರುವ ಆರೋಪ ಎದುರಿಸುತ್ತಿದ್ದಾರೆ.
ಪಾಟ್ನಾದಲ್ಲಿ ಸುಮಾರು 3 ಎಕರೆ ಜಾಗವನ್ನು ಲಂಚವಾಗಿ ಸ್ವೀಕರಿಸಿ ಖಾಸಗಿ ಕಂಪನಿಯ ಹೋಟೆಲ್ ಗಳಿಗೆ ರೈಲ್ವೆ ಹೋಟೆಲ್ ನಿರ್ವಹಣೆಯ ಗುತ್ತಿಗೆ ನೀಡಿರುವುದಾಗಿ ವರದಿ ವಿವರಿಸಿದೆ. ಲಾಲು ಯಾದವ್ ಮತ್ತು ಸರಳಾ ಗುಪ್ತಾ ಒಡೆತನದ ಸುಜಾತಾ ಹೋಟೆಲ್ ನಡುವಿನ ಸಂಚು ಇದಾಗಿದೆ ಎಂದು ಸಿಬಿಐ ಆರೋಪಿಸಿದೆ. ಸರಳಾ ಗುಪ್ತಾ ಲಾಲು ಯಾದವ್ ಪಕ್ಷದ ಸಂಸದನ ಪತ್ನಿ ಹಾಗೂ ಪ್ರೇಮ್ ಗುಪ್ತಾ ಅವರ ನಿಕಟವರ್ತಿಯಾಗಿರುವುದಾಗಿ ವರದಿ ತಿಳಿಸಿದೆ.
ಬೃಹತ್ ಮಾಲ್ ನಿರ್ಮಾಣಗೊಂಡಿರುವ ಈ ಭೂಮಿಯ ಮಾಲೀಕತ್ವವನ್ನು ತೇಜಸ್ವಿ ಯಾದವ್ ಕೂಡಾ ಹೊಂದಿದ್ದಾರೆ ಎಂದು ಸಿಬಿಐ ಹೇಳಿದೆ.