Advertisement
ಆಹಾರ ವಿತರಣೆ ಹೊಣೆ ಹೊತ್ತಿರುವ ಇಲಾಖೆಯ ಐ.ಆರ್.ಸಿ.ಟಿ.ಸಿ.ಯ 16 ಕೇಂದ್ರೀಯ ಪಾಕಶಾಲೆಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಕೆ, 24 ಗಂಟೆಗಳ ಸತತ ನಿಗ್ರಹಣೆಯಂಥ ಹೊಸ ವ್ಯವಸ್ಥೆಗಳು ಜಾರಿಗೆ ಬರಲಿವೆ. ಜತೆಗೆ, ಒಬೊಟ್ಸ್ ಹೆಸರಿನ ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನದ ಮೂಲಕ, ಬಾಣಸಿಗರು ಸಮವಸ್ತ್ರ ಮತ್ತು ತಲೆಗೆ ಕ್ಯಾಪ್ ಧರಿಸಿದ್ದಾರೆಯೇ ಇಲ್ಲವೇ, ಅವರ ಬಟ್ಟೆಗಳು ಶುಚಿಯಾಗಿವೆಯೇ ಇಲ್ಲವೇ ಎಂಬ ವಿಚಾರಗಳೂ ಸೇರಿ ಅಡುಗೆ ಮನೆಯ ವಾತಾವರಣದ ಬಗ್ಗೆಯೂ ಐಆರ್‌ಸಿಟಿಸಿ ಸಂಬಂಧಿಸಿದ ಅಧಿಕಾರಿಗಳಿಗೆ ಮಾಹಿತಿ ರವಾನೆಯಾಗಲಿದೆ.
ಪ್ರತಿ ರೈಲಿನಲ್ಲಿ ಕನಿಷ್ಠ 10 ಪಾಯಿಂಟ್ ಆಫ್ ಸೇಲ್ (ಪಿಒಎಸ್) ಯಂತ್ರಗಳನ್ನು ಅಳವಡಿಸುವಂತೆ ರೈಲ್ವೇ ಇಲಾಖೆ ತನ್ನ ಅಧೀನದಲ್ಲಿರುವ ಎಲ್ಲಾ ವಲಯಗಳಿಗೆ ಸೂಚನೆ ನೀಡಿದೆ. ಈ ಮೂಲಕ ಪ್ರಯಾಣಿಕರಿಗೆ ನಗದು ರಹಿತ ಆಹಾರ ಖರೀದಿಗೆ ಅನುಕೂಲ ಕಲ್ಪಿಸಬೇಕೆಂದು ಅದು ತಾಕೀತು ಮಾಡಿದೆ. ಪರವಾನಗಿ ಪಡೆದ ಆಹಾರ ಮಾರಾಟಗಾರರು ಪ್ರಯಾಣಿಕರಿಂದ ಹೆಚ್ಚು ಹಣ ಸುಲಿಗೆ ಮಾಡುವುದನ್ನು ತಪ್ಪಿಸಲು ಈ ಕ್ರಮ ಕೈಗೊಳ್ಳಲಾಗಿದೆ.