Advertisement

ನಿರುದ್ಯೋಗಿಗಳಿಗೆ “ಐರಾವತ್‌’ಯೋಜನೆ 

06:00 AM Sep 26, 2018 | |

ಕಲಬುರಗಿ: ಟ್ಯಾಕ್ಸಿ ನೀಡಿ ಉದ್ಯೋಗಕ್ಕೆ ದಾರಿ ಕಲ್ಪಿಸುವ ಬದಲು ಉದ್ಯೋಗವನ್ನೇ ನೀಡಿ ಟ್ಯಾಕ್ಸಿ ಕಲ್ಪಿಸುವ ಹೊಸ ಆಯಾಮಕ್ಕೆ ಸಮಾಜ ಕಲ್ಯಾಣ ಇಲಾಖೆ ಮುಂದಾಗಿದ್ದು, ಇದಕ್ಕಾಗಿ ಈಗ 225 ಕೋಟಿ ರೂ. ವಿನಿಯೋಗಿಸಲು ನಿರ್ಧರಿಸಿದೆ. ಐರಾವತ್‌ ಎನ್ನುವ ಹೊಸ ಆಯಾಮದ ಉದ್ಯೋಗ ಆಧಾರಿತ ಟ್ಯಾಕ್ಸಿ ಯೋಜನೆಗೆ ಎರಡು ದಿನಗಳ ಹಿಂದೆ ಉಬರ್‌ ಟ್ಯಾಕ್ಸಿ ಕಂಪನಿಯೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ಪ್ರಾಯೋಗಿಕ
ಹಾಗೂ ಮೊದಲ ಹಂತವಾಗಿ ಬೆಂಗಳೂರು, ಮೈಸೂರು, ಮಂಗಳೂರು ಮಹಾನಗರಗಳಲ್ಲಿ ಕಾರ್ಯಾನುಷ್ಠಾನಕ್ಕೆ ತರಲಾಗುತ್ತಿದೆ. ಈ ಸಂಬಂಧ ಮೊದಲ ಕಂತಾಗಿ 500 ಟ್ಯಾಕ್ಸಿಗಳನ್ನು ಉಬರ್‌ ಟ್ಯಾಕ್ಸಿ ಕಂಪನಿಯೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. 

Advertisement

ಈ ಮುಂಚೆಯೂ ಸಮಾಜ ಕಲ್ಯಾಣ ಇಲಾಖೆಯಲ್ಲಿ ಟ್ಯಾಕ್ಸಿಗೆ ಆರ್ಥಿಕ ಸಹಾಯ ಕಲ್ಪಿಸುವ ಯೋಜನೆ ಇತ್ತಾದರೂ ಅದು ಸಮರ್ಪಕ ಕಾರ್ಯಾನುಷ್ಠಗೊಳ್ಳುತ್ತಿಲ್ಲವೆಂಬ ಆರೋಪದ ಹಿನ್ನೆಲೆಯಲ್ಲಿ ಈಗ ಅಮೂಲಾಗ್ರ ಬದಲಾವಣೆ ಮಾಡಲಾಗಿದೆ. ಅಲ್ಲದೇ ಹೊಸ ಸ್ವರೂಪ ನೀಡಲಾಗಿದೆ. ಇದೇ  ಮೊದಲ ಬಾರಿಗೆ ಟ್ಯಾಕ್ಸಿ ಸಬ್ಸಿಡಿ ಸಹಾಯಧನ 5 ಲಕ್ಷ ರೂ. ಗೆ ಏರಿಸಲಾಗಿದೆ. 

ದಲ್ಲಾಳಿ ಹಾವಳಿಗೆ ತಡೆ: ಮುಂಚೆ ಟ್ಯಾಕ್ಸಿ ಯೋಜನೆಯಲ್ಲಿ ದಲ್ಲಾಳಿಗಳ ಹಾವಳಿಯದ್ದೇ ಕಾರಬಾರು ಕಂಡು ಬರುತ್ತಿತ್ತು. ಮುಖ್ಯವಾಗಿ ಸಬ್ಸಿಡಿ ಹಣ ಮಾತ್ರ ಪಡೆದು ಟ್ಯಾಕ್ಸಿಯನ್ನೇ ಪಡೆಯುತ್ತಿಲ್ಲವೆಂಬ ಆಪಾದನೆಗಳು ವ್ಯಾಪಕವಾಗಿ ಕೇಳಿ ಬರುತ್ತಿದ್ದವು. ಕೆಲವೊಬ್ಬರು ಟ್ಯಾಕ್ಸಿ ಪಡೆದಿದ್ದರೂ ಬೇರೆಯವರಿಗೆ ಮಾರಾಟ ಮಾಡಿದ್ದರೆಂದು ತಿಳಿದು ಬಂದಿತ್ತು. ಇನ್ನು ಕೆಲವರು ಟ್ಯಾಕ್ಸಿ ಓಡಿಸುತ್ತಿದ್ದರೂ ಬ್ಯಾಂಕ್‌ನ ಸಾಲದ ಕಂತು ಕಟ್ಟಲಾಗದೇ ತೀವ್ರ ತೊಂದರೆ ಎದುರಿಸಿದ ಪ್ರಸಂಗಗಳೂ ಇವೆ. ಇವೆಲ್ಲದಕ್ಕೂ ತಡೆ ಹಾಕಲು ಐರಾವತ್‌ ಟ್ಯಾಕ್ಸಿ ಯೋಜನೆ ಜಾರಿಗೆ ತರಲಾಗಿದೆ.
ಫಲಾನುಭವಿ ಹೆಸರಿಗೆ ಒಮ್ಮೆಲೆ ಟ್ಯಾಕ್ಸಿ ನೋಂದಣಿ ಆಗುವುದಿಲ್ಲ. ಒಂದು ವೇಳೆ ಪೂರ್ಣ ಹಣ ಕಟ್ಟಿದ್ದರೂ ಅದರ ನಿರ್ವಹಣೆ ಜವಾಬ್ದಾರಿ ಕಂಪನಿ ಹೊಂದಿರು ತ್ತದೆ. ಒಟ್ಟಾರೆ ಟ್ಯಾಕ್ಸಿ ಬಂದ ದಿನದಿಂದಲೇ ಕಂಪನಿಯು ಟ್ಯಾಕ್ಸಿ ಓಡಾಡುವಂತೆ ಕ್ರಮ ಕೈಗೊಳ್ಳುತ್ತದೆ. ಹೀಗಾಗಿ ಟ್ಯಾಕ್ಸಿ ಪಡೆದವರು ಉದ್ಯೋಗದ ಜತೆಗೆ ಆರ್ಥಿಕ ಸ್ವಾವಲಂಬನೆ ಹೊಂದಲು ಸಾಧ್ಯವಾಗುತ್ತದೆ. ಅ.2ರಿಂದ ಅರ್ಜಿ ಸಲ್ಲಿಕೆ ಆರಂಭ: ಅ.2ರಿಂದ ಈ ಯೋಜನೆ ಅಡಿ ಟ್ಯಾಕ್ಸಿ ಪಡೆಯುವ ಅರ್ಹ ಉದ್ಯೋಗಾಂಕ್ಷಿಗಳಿಂದ ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನಿಸಲಾಗುತ್ತದೆ. ಬಂದಿರುವ ಅರ್ಜಿಗಳ ಪರಿಶೀಲನೆ ಹಾಗೂ ಅಂತಿಮಗೊಳಿಸಲು ಸಮಿತಿ ಯೊಂದನ್ನು ರಚಿಸಲಾಗಿದೆ. ಅರ್ಜಿ ಜತೆಗೆ ಆಧಾರ್‌ ಕಾರ್ಡ್‌ ಸೇರಿ ಇತರ ಮಾಹಿತಿ ಪಡೆಯಲಾಗುತ್ತದೆ. ಒಮ್ಮೆ ಯೋಜನೆ ಲಾಭ ಪಡೆದವರು ಮತ್ತೂಮ್ಮೆ ಪಡೆಯುವಂತಿಲ್ಲ ಎನ್ನುತ್ತಾರೆ ಅಧಿಕಾರಿಗಳು.

ಸಚಿವ ಪ್ರಿಯಾಂಕ್‌ ಟ್ವಿಟ್‌: ಐರಾವತ್‌ ಟ್ಯಾಕ್ಸಿ ಯೋಜನೆ ಕುರಿತು ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್‌ ಖರ್ಗೆ ಟ್ವಿಟ್‌ ಮಾಡಿದ್ದಾರೆ. ಈ
ಯೋಜನೆಗೆ ಪ್ರಸಕ್ತವಾಗಿ 225 ಕೋಟಿ ರೂ. ತೆಗೆದಿರಿಸಲಾಗಿದೆ. ಒಟ್ಟಾರೆ 4700 ಟ್ಯಾಕ್ಸಿಗಳನ್ನು ನೀಡಲು ಉದ್ದೇಶಿಸಲಾಗಿದೆ. ಬೆಂಗಳೂರು,
ಮೈಸೂರು ಹಾಗೂ ಮಂಗಳೂರಿನಲ್ಲಿ ಕಾರ್ಯಾನುಷ್ಠಾನಕ್ಕೆ ತರಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಇತರ ನಗರಗಳಿಗೂ ವಿಸ್ತರಿಸಲಾಗುತ್ತಿದೆ.
ಈ ಕುರಿತು ವಿವಿಧ ಕಂಪನಿಗಳೊಂದಿಗೆ ಒಡಂಬಡಿಕೆ ನಡೆದಿದೆ ಎಂಬುದಾಗಿ ತಿಳಿಸಿದ್ದಾರೆ. 5 ಲಕ್ಷ ರೂ. ಸಬ್ಸಿಡಿ ಎಸ್ಸಿ , ಎಸ್ಟಿ ನಿರುದ್ಯೋಗಿ ಯುವಕರಿಗೆ ಮಾತ್ರ ಈ ಯೋಜನೆಯಾಗಿದ್ದು, 5 ಲಕ್ಷ ರೂ.ಗಿಂತ ಹೆಚ್ಚಿನ ಹಣದ ವಾಹನ (ಟ್ಯಾಕ್ಸಿ) ಪಡೆದರೆ ಉಳಿದ ಹಣದ ಬ್ಯಾಂಕ್‌ ಸಾಲಕ್ಕೆ ಉಬರ್‌ ಕಂಪನಿಯೇ ಜವಾಬ್ದಾರಿ ವಹಿಸುತ್ತದೆ. ಪ್ರತಿ ತಿಂಗಳು ಆರ್ಥಿಕ ಸಹಾಯವನ್ನು ಕಡಿತ ಮಾಡಿಕೊಳ್ಳಲಾಗುತ್ತದೆ. ಒಟ್ಟಾರೆ ಟ್ಯಾಕ್ಸಿ ಪಡೆದು ಆರ್ಥಿಕವಾಗಿ ಸದೃಢವಾಗಲು ಕ್ರಮ ಕೈಗೊಳ್ಳಲಾಗಿದ್ದು, ಸಹಾಯ ಮಾಡಲು ನಾವು ಸಿದ್ಧ-ಟ್ಯಾಕ್ಸಿ ಓಡಿಸಿ ಆರ್ಥಿಕ ಸ್ವಾವಲಂಬನೆ ಸಾಧಿಸಲು ನೀವೂ ಸಿದ್ಧರಾಗಿರಿ ಎಂಬ ಘೋಷ ವಾಕ್ಯ ಹೊಂದಲಾಗಿದೆ. ಹೆಚ್ಚಿನ ವಿವರ ಹಾಗೂ ಆನ್‌ಲೈನ್‌ ಅರ್ಜಿಗಾಗಿ www.kalyanakendra.com ಮತ್ತು www.adcl.karnatak.gov.in ಸಂಪರ್ಕಿಸಬಹುದಾಗಿದೆ.

ಹಣಮಂತರಾವ ಭೈರಾಮಡಗಿ

Advertisement
Advertisement

Udayavani is now on Telegram. Click here to join our channel and stay updated with the latest news.

Next