Advertisement

ಇರಾನ್‌ ದೇಶದ‌ ಕತೆ: ದಾನಕ್ಕೆ ಬಂದ ಪ್ರತಿಫ‌ಲ

07:06 PM Apr 27, 2019 | mahesh |

ಅಬ್ದುಲ್‌ ಕರೀಮ್‌ ಎಂಬ ಬಡ ಕೂಲಿಕಾರನಿದ್ದ. ಅವನು ದೂರ ದೇಶದಲ್ಲಿದ್ದ ಒಬ್ಬ ಜಮೀನುದಾರನ ಕೃಷಿಭೂಮಿಯಲ್ಲಿ ತುಂಬ ವರ್ಷಗಳ ಕಾಲ ನಿಷ್ಠೆಯಿಂದ ಕೆಲಸ ಮಾಡಿದ. ದ್ರಾಕ್ಷೆ, ಲೀಚಿ ಮೊದಲಾದ ಹಣ್ಣುಗಳನ್ನು ಸಮೃದ್ಧವಾಗಿ ಬೆಳೆದ. ಬಹುಕಾಲದ ಮೇಲೆ ಜಮೀನಾªರ ತನ್ನ ಭೂಮಿಯನ್ನು ನೋಡಲು ಬಂದ. ಅಲ್ಲಿ ಬೆಳೆದಿರುವ ಗಿಡಗಳಲ್ಲಿರುವ ಫ‌ಸಲನ್ನು ಕಂಡು ಅವನಿಗೆ ಬಹಳ ಸಂತೋಷವಾಯಿತು. “”ನಾನು ತುಂಬ ಸಮಯದಿಂದ ನಿನಗೆ ಕೂಲಿ ಎಂದು ಬಿಡಿಗಾಸನ್ನೂ ನೀಡಿಲ್ಲ. ಆದರೂ ನೀನು ಶ್ರಮವಹಿಸಿ ಕೆಲಸ ಮಾಡಿ ಹಸಿರಿನ ನಂದನವನವನ್ನು ನೆಲೆಗೊಳಿಸಿರುವೆ. ಇದಕ್ಕಾಗಿ ನಿನಗೆ ಹತ್ತು ಸಾವಿರ ನಾಣ್ಯಗಳನ್ನು ಇನಾಮಾಗಿ ಕೊಡುತ್ತೇನೆ” ಎಂದು ಹೇಳಿ ಹಣ ತುಂಬಿದ ಥೈಲಿಯನ್ನು ನೀಡಿದ.

Advertisement

ಹಣದ ಥೈಲಿಯೊಂದಿಗೆ ಅಬ್ದುಲ್‌ ಕರೀಮ್‌ ಮನೆಗೆ ಬಂದ. ಹೆಂಡತಿ, ಮಕ್ಕಳ ಜೊತೆಗೆ ತನ್ನ ಸಂತಸವನ್ನು ಹಂಚಿಕೊಂಡ. “”ಇಷ್ಟು ಕಾಲದ ಬಳಿಕ ನಮಗೆ ಹಣ ಕೈಸೇರಿ, ಸುಖಪಡುವ ಅದೃಷ್ಟ ಬಂದಿದೆ. ನಾನು ನಾಳೆ ನಗರಕ್ಕೆ ಹೋಗುತ್ತೇನೆ. ಮೊದಲು ಅಲ್ಲಿರುವ ದೇವರಿಗೆ ಹರಕೆ ಸಲ್ಲಿಸುತ್ತೇನೆ. ಮರಳಿ ಬರುವಾಗ ನಿಮಗೆಲ್ಲ ಏನು ತರಬೇಕೋ ಕೋರಿಕೊಳ್ಳಿ, ತಂದುಕೊಡುತ್ತೇನೆ” ಎಂದು ಹೇಳಿದ. ಹೆಂಡತಿ, “”ನನಗೆ ರೇಷ್ಮೆಯ ನಿಲುವಂಗಿ ಧರಿಸುವ ಆಶೆಯಿದೆ, ತಂದುಕೊಡುತ್ತೀರಾ?” ಕೇಳಿದಳು. ಮಗ, “”ಒಂದು ಕುದುರೆ ಮತ್ತು ಕತ್ತಿ ತಂದುಕೊಟ್ಟರೆ ಸವಾರಿಗೆ ಅನುಕೂಲವಾಗುತ್ತದೆ” ಎಂದು ಆಶೆಪಟ್ಟ. ಮಗಳಿಗೆ ಚಿನ್ನದ ರೇಖುಗಳಿರುವ ಚಪ್ಪಲಿಗಳೆಂದರೆ ಇಷ್ಟ. ಅದನ್ನು ತರಲು ಕೋರಿದಳು.

ಅಬ್ದುಲ್‌ ಕರೀಮ್‌ ಮರುದಿನ ಹಣದೊಂದಿಗೆ ಕಾಲ್ನಡಿಗೆಯಲ್ಲಿ ಸಾಗುತ್ತ ನಗರವನ್ನು ತಲುಪಿದ. ಅಲ್ಲಿ ಪ್ರಾರ್ಥನಾ ಮಂದಿರಕ್ಕೆ ಹೋಗಿ ದೇವರಿಗೆ ಹರಕೆಯ ನ್ನೊಪ್ಪಿಸಿದ. ಆಗ ಒಬ್ಬ ಕಡು ಬಡವ ಅವನೆದುರಿಗೆ ಬಂದ. “”ಅಣ್ಣ, ನೋಡಿದರೆ ತುಂಬ ದಯಾಳುವಿನಂತೆ ಕಾಣಿಸುತ್ತಿರುವೆ. ನನ್ನ ಮಗಳಿಗೆ ಮದುವೆ ನಿಶ್ಚಯವಾಗಿದೆ. ಆದರೆ, ಖರ್ಚಿಗೆ ಹಣ ಇಲ್ಲ. ಮದುವೆ ನಿಂತುಹೋದರೆ ಅವಳ ಬಾಳು ಹಾಳಾಗುತ್ತದೆ. ದಯವಿಟ್ಟು ನನಗೆ ಐದು ಸಾವಿರ ನಾಣ್ಯಗಳನ್ನು ಕೊಡಬಲ್ಲೆಯಾ?” ಎಂದು ಕೇಳಿದ. ಕರೀಂ ಯೋಚನೆ ಮಾಡಿದ. ಬಡವನ ಮೇಲೆ ಅವನಿಗೆ ಕನಿಕರ ಮೂಡಿತು. “”ನನ್ನ ಬಳಿ ಹಣವೇನೋ ಇದೆ. ಆದರೆ ಇದರಿಂದ ತುಂಬ ಜನರ ಇಷ್ಟಾರ್ಥಗಳನ್ನು ನೆರವೇರಿಸಬೇಕಾಗಿದೆ. ಹೇಗೆ ಕೊಡಲಿ?” ಎಂದು ಅಸಹಾಯನಾಗಿ ಕೇಳಿದ.

ಬಡವ, “”ಅಣ್ಣ, ಬೇರೆಯವರಿಗೆ ದಾನ ಮಾಡಿದರೆ ಪುಣ್ಯ ಎಲ್ಲಿಗೂ ಹೋಗುವುದಿಲ್ಲ. ಪ್ರತಿಫ‌ಲ ಸಿಗುವುದು ಖಂಡಿತ. ನನ್ನ ಮಗಳ ಮದುವೆಗೆ ನೆರವು ನೀಡು” ಎಂದು ಗೋಗರೆದ. ಕರೀಮ್‌ ಅವನಿಗೆ ತನ್ನಲ್ಲಿರುವ ಹಣದಲ್ಲಿ ಅರ್ಧವನ್ನು ನೀಡಿ ಸರಕುಗಳು ಸಿಗುವ ಮಾರುಕಟ್ಟೆಗೆ ಹೋದ. ಅಲ್ಲಿ ರೇಷ್ಮೆ ಬಟ್ಟೆಗಳ ಅಂಗಡಿಗೆ ಹೋಗಿ ಒಂದು ನಿಲುವಂಗಿಯನ್ನು ಖರೀದಿ ಮಾಡಿ ಬೆಲೆಯನ್ನು ವಿಚಾರಿಸಿದ. ಅಂಗಡಿಯವನು, “”ನೀನು ಈಗ ಧರಿಸಿರುವ ಉಡುಪುಗಳನ್ನು ಕಂಡರೆ ಇದನ್ನು ಕೊಳ್ಳಲು ಶಕ್ತನಲ್ಲ ಅನಿಸುತ್ತದೆ. ಈ ನಿಲುವಂಗಿಗೆ ಆರು ಸಾವಿರ ನಾಣ್ಯಗಳಾಗುತ್ತವೆ, ನಿನ್ನಲ್ಲಿದೆಯೆ?” ಎಂದು ಕೇಳಿದ.

ಅಷ್ಟು ಹಣ ಕರೀಮ್‌ ಬಳಿ ಇರಲಿಲ್ಲ. ನಿರಾಶನಾಗಿ ಹೊರಗೆ ಬಂದ. ಮಗನ ಕೋರಿಕೆಯನ್ನಾದರೂ ನೆರವೇರಿಸಬೇಕು ಎಂದು ನಿರ್ಧರಿಸಿ ಕುದುರೆಗಳು ದೊರೆಯುವ ಮಾರುಕಟ್ಟೆಗೆ ಹೆಜ್ಜೆ ಹಾಕಿದ. ಮಾರಾಟಗಾರನೊಡನೆ, “”ಒಂದು ಕುದುರೆ ಮತ್ತು ಕತ್ತಿಗೆ ಎಷ್ಟು ಬೆಲೆ ಕೊಡಬೇಕು?” ಎಂದು ವಿಚಾರಿಸಿದ. ಮಾರಾಟಗಾರನು ಅವನನ್ನು ನೋಡಿ ವಿಚಿತ್ರವಾಗಿ ನಕ್ಕ. “”ಹೆಚ್ಚು ಕನಸುಗಳನ್ನು ಕಟ್ಟಿಕೊಳ್ಳಬೇಡ. ಸಾಮಾನ್ಯವಾದ ಒಂದು ಕುದುರೆಯ ಬೆಲೆ ಎಂಟು ಸಾವಿರ ನಾಣ್ಯಗಳಾಗುತ್ತವೆ. ನಿನ್ನ ಬಳಿ ಎಂಟು ನಾಣ್ಯಗಳು ಇರುವುದೂ ಅನುಮಾನ. ವ್ಯರ್ಥ ನನ್ನ ಸಮಯ ಹಾಳು ಮಾಡದೆ ಇಲ್ಲಿಂದ ‘ ಎಂದು ಮೂದಲಿಸಿದ.

Advertisement

ಮಗಳಿಗೆ ಬೇಕಾದ ವಸ್ತುವನ್ನಾದರೂ ಕೊಳ್ಳಲು ಸಾಧ್ಯವೇ ಎಂದು ಕರೀಮ್‌ ಪಾದರಕ್ಷೆಗಳನ್ನು ಮಾರಾಟ ಮಾಡುವ ವ್ಯಾಪಾರಿಯ ಬಳಿಗೆ ಹೋದ. “”ನನ್ನ ಬಳಿ ಐದು ಸಾವಿರ ನಾಣ್ಯಗಳಿವೆ. ಚಿನ್ನದ ರೇಖುಗಳಿರುವ ಒಂದು ಜೊತೆ ಚಪ್ಪಲಿಗಳನ್ನು ಕೊಡಬಹುದೆ?” ಎಂದು ಕೇಳಿದ. ವ್ಯಾಪಾರಿ ಅವನತ್ತ ತಿರಸ್ಕಾರದ ದೃಷ್ಟಿ ಬೀರಿದ. “”ಆಶೆಗಳಿರಬೇಕಾದುದು ಸಹಜ. ಆದರೆ ಇಷ್ಟೊಂದು ಇರಬಾರದು. ಐದು ಸಾವಿರ ನಾಣ್ಯಗಳಿಗೆ ಜೊತೆ ಚಪ್ಪಲಿ ಹಾಗಿರಲಿ, ಒಂದು ಚಪ್ಪಲಿಯಾದರೂ ಸಿಗಬಹುದೆಂದು ಎಣಿಸಬೇಡ. ಯಾಕೆಂದರೆ ಇಂತಹ ಚಪ್ಪಲಿಗಳನ್ನು ಧರಿಸುವವರು ಅರಮನೆಯ ಪರಿವಾರದವರು, ನಿನ್ನಂಥವರು ಖಂಡಿತ ಅಲ್ಲ” ಎಂದು ಹೇಳಿದ.

ಕರೀಮ್‌ ಅಲ್ಲಿಂದ ಹೊರಟ. ತನ್ನ ಬಳಿ ಹಣವಿಲ್ಲದಿದ್ದರೇನು, ತೋಳುಗಳಲ್ಲಿ ಬಲವಿದೆ. ಎಲ್ಲಿಯಾದರೂ ಚೆನ್ನಾಗಿ ಕೆಲಸ ಮಾಡಿ ಹಣ ಸಂಪಾದಿಸಬೇಕು. ಅದುವರೆಗೂ ಮನೆಗೆ ಹೋಗಬಾರದು. ಆ ಹಣದಿಂದ ಮನೆಯವರು ಕೇಳಿದ ಎಲ್ಲ ವಸ್ತುಗಳನ್ನು ಖರೀದಿಸಿ ತೆಗೆದುಕೊಂಡು ಹೋಗಿ ಕೊಡಬೇಕು. ಇಲ್ಲವಾದರೆ ಹೆಂಡತಿ, ಮಕ್ಕಳು ಬಡವನ ಮಗಳ ಮದುವೆಗೆ ನೆರವಾಗಲು ಹೋಗಿ ತಮ್ಮ ಬೇಡಿಕೆಯನ್ನು ಈಡೇರಿಸಲಿಲ್ಲವೆಂದು ಕೋಪಗೊಳ್ಳಬಹುದು, ಹಾಗಾಗಬಾರದು ಎಂದು ನಿರ್ಧರಿಸಿ ಕೆಲಸ ಕೊಡುವವರನ್ನು ಹುಡುಕಿಕೊಂಡು ಹೋದ.

ಆಗ ಒಬ್ಬ ಶ್ರೀಮಂತ ಜಮೀನ್ದಾರ ಭೇಟಿಯಾದ. “”ನನಗೆ ಪ್ರಾಮಾಣಿಕವಾಗಿ ದುಡಿಯುವ ಒಬ್ಬ ಕೆಲಸದವನು ಬೇಕು. ನನ್ನ ಬಳಿ ಹತ್ತಾರು ಎಕರೆ ಖಾಲಿ ಭೂಮಿಯಿದೆ. ಅದರಲ್ಲಿ ಖರ್ಜೂರದ ತೋಟ ಮಾಡುವ ಬಯಕೆಯಿದೆ. ಗಿಡಗಳನ್ನು ನೆಡಲು ಯೋಗ್ಯವಾದ ಹೊಂಡಗಳನ್ನು ತೆಗೆದು ಕೊಡಬಲ್ಲೆಯಾ? ಎಲ್ಲ ಕೆಲಸ ಪೂರೈಸಿದರೆ ಯೋಗ್ಯವಾದ ಸಂಬಳವನ್ನೇ ಕೊಡುತ್ತೇನೆ” ಎಂದು ಹೇಳಿದ.

ಕರೀಮ್‌, “”ದುಡಿಯುವವನಿಗೆ ಯಾವ ಕೆಲಸವಾದರೇನು, ನಾನು ಅದನ್ನು ಮಾಡುತ್ತೇನೆ” ಎಂದು ಹೇಳಿದ. ಹಾರೆ, ಗುದ್ದಲಿ ಹಿಡಿದುಕೊಂಡು ಸುಡುವ ಬಿಸಿಲಿನಲ್ಲಿ ನಿಷ್ಠೆಯಿಂದ ಕೆಲಸ ಮಾಡಿದ. ಆಗ ಒಂದೆಡೆ ಗುದ್ದಲಿಯ ಮೊನೆಗೆ ಒಂದು ದೊಡ್ಡ ಕಲ್ಲು ತಗುಲಿತು. ಕರೀಮ್‌ ಕಲ್ಲನ್ನು ಸರಿಸಿ ನೋಡಿದಾಗ ಅವನ ಕಣ್ಣುಗಳನ್ನೇ ನಂಬಲಾಗದಂತಹ ಆಶ್ಚರ್ಯವೊಂದು ಕಾದಿತ್ತು. ಯಾವುದೋ ಕಾಲದಲ್ಲಿ ಹೂಳಿಟ್ಟ ಚಿನ್ನದ ಒಡವೆಗಳು, ಮುತ್ತು, ರತ್ನಗಳು ಅದರ ಕೆಳಗೆ ರಾಶಿ ಬಿದ್ದಿರುವುದನ್ನು ನೋಡಿದ. ಈ ಐಶ್ವರ್ಯವನ್ನು ನೋಡುತ್ತ ಅವನು ಮೈಮರೆತಿರುವಾಗ ದೇಶವನ್ನಾಳುವ ರಾಜನ ಸೈನಿಕರು ಕುದುರೆಯೇರಿಕೊಂಡು ಅದೇ ಮಾರ್ಗವಾಗಿ ಬಂದರು. ಸೂರ್ಯನ ಬಿಸಿಲಿಗೆ ಫ‌ಳಫ‌ಳ ಹೊಳೆಯುತ್ತಿರುವ ಸಂಪತ್ತು ಅವರ ಕಣ್ಣಿಗೆ ಕಾಣಿಸಿತು. ಅವರು ಕರೀಮನ ಬಳಿಗೆ ಬಂದು, “”ಭೂಮಿಯೊಳಗಿನ ಸಂಪತ್ತನ್ನು ಮುಟ್ಟುವ ಅಧಿಕಾರ ಕೂಡ ನಿನಗಿಲ್ಲ. ಅದೆಲ್ಲವೂ ಆಳುವ ದೊರೆಗೆ ಸೇರಬೇಕಾದದ್ದು. ನೀನು ಇಲ್ಲಿಯೇ ನಿಂತಿರಬೇಕು. ನಮ್ಮಲ್ಲಿ ಒಬ್ಬನು ಹೋಗಿ ದೊರೆಯನ್ನು ಇಲ್ಲಿಗೆ ಕರೆತರುತ್ತಾನೆ, ಬಳಿಕ ಸಂಪತ್ತನ್ನು ಅರಮನೆಗೆ ಸಾಗಿಸುತ್ತೇವೆ” ಎಂದು ಹೇಳಿದ.

ಸೈನಿಕನೊಬ್ಬನು ಬಂದು ನಿಧಿ ಸಿಕ್ಕಿದ ವಿಷಯವನ್ನು ಹೇಳಿದ ಕೂಡಲೇ ರಾಜನು ಒಂಟೆಯ ಮೇಲೇರಿಕೊಂಡು ಅಲ್ಲಿಗೆ ಹೋಗಲು ಸಿದ್ಧನಾದ. ಆಗ ಒಬ್ಬ ಪ್ರವಾದಿಯು ರಾಜನ ಮುಂದೆ ಕಾಣಿಸಿಕೊಂಡ. “”ದೊರೆಯೇ, ನಿನ್ನ ರಾಜ್ಯದ ಪ್ರಜೆಯೊಬ್ಬ ದೇವರು ಮೆಚ್ಚಿದ ಕೆಲಸವನ್ನು ಮಾಡಿದರೆ ಅವನನ್ನು ಗೌರವಿಸುತ್ತೀಯಾ, ಅಲ್ಲ ದಂಡಿಸುತ್ತೀಯಾ?” ಎಂದು ಕೇಳಿದ.

ರಾಜನು, “”ದೇವರಿಗೆ ಇಷ್ಟವಾಗುವ ಕೆಲಸ ಮಾಡಿದ ವನನ್ನು ದಂಡಿಸುವುದುಂಟೆ? ಅಂಥವನಿಗೆ ಹೊರಲಾಗದಷ್ಟು ಸಂಪತ್ತು ನೀಡಿ ಅಭಿನಂದಿಸುತ್ತೇನೆ” ಎಂದು ಹೇಳಿದ. ಪ್ರವಾದಿಯು, “”ಹಾಗಿದ್ದರೆ ನೀನು ಈಗ ಭೂಮಿಯಲ್ಲಿರುವ ನಿಧಿಯನ್ನು ಹೊರತೆಗೆದಿರುವ ವ್ಯಕ್ತಿಯನ್ನು ನೋಡಲು ಹೋಗುತ್ತಿರುವೆಯಲ್ಲವೆ? ಅವನು ಕಷ್ಟಾರ್ಜಿತದ ಹಣವನ್ನು ಒಬ್ಬ ಬಡವನ ಮಗಳ ಮದುವೆಗೆ ಸಹಾಯ ಮಾಡಿ ತನ್ನ ಹೆಂಡತಿ, ಮಕ್ಕಳ ಆಶೆಗಳನ್ನು ನೆರವೇರಿಸಲಾಗದ ಅಸಹಾಯ ಸ್ಥಿತಿಯಲ್ಲಿದ್ದಾನೆ. ಅವನಿಗೆ ನಿನ್ನ ಕರುಣೆ ಬೇಕಾಗಿದೆ. ಬಡವನಾಗಿ ಅವನ ಬಳಿಗೆ ಹೋದವನು ನಾನೇ. ನಿಧಿಯನ್ನು ಅವನಿಗಾಗಿ ಸೃಷ್ಟಿಸಿರುವವನೂ ನಾನೇ” ಎಂದು ಹೇಳಿ ಪ್ರವಾದಿಯು ಮಾಯವಾದ.

ರಾಜನು ಕರೀಮ್‌ ಕೆಲಸ ಮಾಡುವ ಸ್ಥಳಕ್ಕೆ ಬಂದ. ಅವನನ್ನು ಆಲಿಂಗಿಸಿಕೊಂಡು, “”ನೀನು ಒಳ್ಳೆಯ ಗುಣದಿಂದ ದೇವರು ಮೆಚ್ಚುವಂತಹ ದಾನವನ್ನು ಮಾಡಿರುವೆ. ಇದಕ್ಕಾಗಿ ಪ್ರತಿಫ‌ಲವೆಂದು ನಿನಗೆ ಇಲ್ಲಿ ದೊರಕಿದ ಭೂಗತ ಸಂಪತ್ತನ್ನು ನೀನೇ ತೆಗೆದುಕೊಂಡು ಹೋಗಿ ಸುಖದಿಂದ ಜೀವನ ಮಾಡು” ಎಂದು ಹೇಳಿದ. ಕರೀಮ್‌ ಸಂಪತ್ತನ್ನು ಮನೆಗೆ ಸಾಗಿಸಿ ಹೆಂಡತಿ, ಮಕ್ಕಳೊಂದಿಗೆ ನೆಮ್ಮದಿಯಾಗಿ ಬದುಕಿದ.

ಪ. ರಾಮಕೃಷ್ಣ ಶಾಸ್ತ್ರಿ

Advertisement

Udayavani is now on Telegram. Click here to join our channel and stay updated with the latest news.

Next