ಹೈದರಾಬಾದ್ : ವಿಭಿನ್ನ ಜನಾಂಗೀಯ ಮತ್ತು ಮತ ಧರ್ಮಗಳ ಜನರ ಶಾಂತಿಯುತ ಸಹಬಾಳ್ವೆಗೆ ಭಾರತ ಒಂದು ಅತ್ಯುತ್ತಮ ನಿದರ್ಶನವಾಗಿದೆ ಎಂದು ಹೇಳಿರುವ ಇರಾನ್ ಅಧ್ಯಕ್ಷ ಹಸನ್ ರೊಹಾನಿ ಅವರು ದೇಶದಲ್ಲಿನ ಶಿಯಾ ಮತ್ತು ಸುನ್ನಿ ಸಮುದಾಯದವರ ನಡುವೆ ಏಕತೆ ಮತ್ತು ಒಗ್ಗಟ್ಟಿಗೆ ಕರೆ ನೀಡಿದರು.
ಯಾವುದೆ ಭೌಗೋಳಿಕ ವಿವಾದಗಳಿಗೆ ಮಿಲಿಟರಿ ಪರಿಹಾರ ಇರುವುದಿಲ್ಲ ಎಂದು ಹೇಳಿದ ಟೆಹರಾನ್ ನಾಯಕ, ಭಾರತ ಸೇರಿದಂತೆ ಮುಸ್ಲಿಂ ರಾಷ್ಟ್ರಗಳು ಮತ್ತು ಪ್ರಾದೇಶಿಕ ದೇಶಗಳ ನಡುವೆ ಉತ್ತಮ ಸಹೋದರ ಸಂಬಂಧಗಳು ಏರ್ಪಡುವುದು ಅಗತ್ಯ ಎಂದು ಹೇಳಿದರು.
ನಿನ್ನೆ ಗುರುವಾರ ತಮ್ಮ ಮೂರು ದಿನಗಳ ಭಾರತ ಭೇಟಿಯ ಮೊದಲ ದಿನದಂದು ಇಲ್ಲಿ ವಿವಿಧ ಇಸ್ಲಾಮಿಕ್ ಚಿಂತನ ಸಮುದಾಯಗಳ ಮತ ಪಂಡಿತರನ್ನು ಉದ್ದೇಶಿಸಿ ಮಾತನಾಡಿದ ರೊಹಾನಿ ಅವರು “ಭಾರತದಲ್ಲಿನ ಶಿಯಾ ಮತ್ತು ಸುನ್ನಿ ಸಮುದಾಯದವರಲ್ಲಿ ಏಕತೆ ಮತ್ತು ಒಗ್ಗಟ್ಟು ಏರ್ಪಡುವುದು ಅಗತ್ಯ’ ಎಂದು ಕರೆ ನೀಡಿದರು.
ಮುಸ್ಲಿಮರ ವಿವಿಧ ಪಂಗಡ, ಪಂಥಗಳ ನಡುವೆ ಹೊಂದಾಣಿಕೆ ಇಲ್ಲದಂತಾಗಲು ಪಾಶ್ಚಾತ್ಯ ದೇಶಗಳೇಕ ಕಾರಣ; ಇದನ್ನು ಅರಿತುಕೊಂಡು ಮುಸ್ಲಿಮರು ಒಂದಾಗಬೇಕು ಎಂದು ಹೇಳಿದರು.
ಸಮರ ತ್ರಸ್ತ ಅಫ್ಘಾನಿಸ್ಥಾನ, ಇರಾಕ್, ಸಿರಿಯಾ ಮತ್ತು ಯೆಮೆನ್ ದೇಶಗಳಿಗೆ ನೆರವಾಗಲು ಇರಾನ್ ಸಿದ್ಧವಿದೆ ಎಂದು ರೊಹಾನಿ ಹೇಳಿದರು.