ಟೆಹ್ರಾನ್: ಇರಾನ್ ನಲ್ಲಿ ಹಿಜಾಬ್ ವಿರೋಧಿ ಪ್ರತಿಭಟನೆಗಳು ದೇಶವ್ಯಾಪಿಯಾಗಿದೆ. ಈ ಮಧ್ಯೆ ಸಾರ್ವಜನಿಕವಾಗಿ ವೀಡಿಯೊದಲ್ಲಿ ತಲೆಯ ಸ್ಕಾರ್ಫ್ ಅನ್ನು ತೆಗೆದ ಪ್ರಮುಖ ನಟಿಯನ್ನು ಇರಾನ್ ಸರ್ಕಾರ ಬಂಧಿಸಿದೆ ಎಂದು ಮಾಧ್ಯಮವು ಭಾನುವಾರ ವರದಿ ಮಾಡಿದೆ.
ಇಸ್ಲಾಮಿಕ್ ಗಣರಾಜ್ಯದ ಅಧಿಕಾರಿಗಳು ಈ ಪ್ರತಿಭಟನೆಗಳನ್ನು “ಗಲಭೆಗಳು” ಎಂದು ಕರೆಯುತ್ತಿದ್ದಾರೆ. ದೇಶದ ಪಾಶ್ಚಿಮಾತ್ಯ ವೈರಿಗಳು ಅವುಗಳನ್ನು ಪ್ರಚೋದಿಸುತ್ತಿದ್ದಾರೆ ಎಂದೂ ಇರಾನ್ ಆರೋಪಿಸಿದೆ.
ಇದೀಗ ನಟಿ ಹೆಂಗಮೆಹ್ ಘಜಿಯಾನಿ ಅವರನ್ನು ಬಂಧಿಸಲಾಗಿದೆ. ಹೆಂಗಮೆಹ್ ಘಜಿಯಾನಿ ಅವರು ‘ಗಲಭೆಗಳನ್ನು’ ಪ್ರಚೋದಿಸುತ್ತಿದ್ದಾರೆ ಮತ್ತು ವಿರೋಧಿಗಳೊಂದಿಗೆ ಸಂವಹನ ಮಾಡಿದ್ದಕ್ಕಾಗಿ ಬಂಧಿಸಲಾಗಿದೆ ಎಂದು ಅಧಿಕೃತ ಸುದ್ದಿ ಸಂಸ್ಥೆ ಐಆರ್ ಎನ್ ಎ ತಿಳಿಸಿದೆ.
ಇದನ್ನೂ ಓದಿ:ರಾಜ್ಯದಲ್ಲೂ ‘ಲವ್ ಜಿಹಾದ್ ನಿಷೇಧ ಕಾಯಿದೆ’ ಜಾರಿ? ಬೆಳಗಾವಿ ಅಧಿವೇಶನದಲ್ಲಿ ಮಂಡನೆಗೆ ಚಿಂತನೆ
52 ವರ್ಷದ ಚಲನಚಿತ್ರ ತಾರೆ ಹೆಂಗಮೆಹ್ ಘಜಿಯಾನಿ ಈಗಾಗಲೇ ನ್ಯಾಯಾಂಗದಿಂದ ತನಗೆ ಸಮನ್ಸ್ ನೀಡಲಾಗಿದೆ ಎಂದು ಸೂಚಿಸಿದ್ದರು. ನಂತರ ಹಿಜಾಬ್ ಅನ್ನು ತೆಗೆಯುವ ವೀಡಿಯೊವನ್ನು ಇನ್ಸ್ಟಾಗ್ರಾಮ್ ನಲ್ಲಿ ಪ್ರಕಟಿಸಿದರು. ಅಲ್ಲದೆ “ಬಹುಶಃ ಇದು ನನ್ನ ಕೊನೆಯ ಪೋಸ್ಟ್ ಆಗಿರಬಹುದು” ಎಂದು ಅವರು ಬರೆದಿದ್ದಾರೆ.
“ಈ ಕ್ಷಣದಿಂದ, ನನಗೆ ಏನೇ ಆದರೂ, ನನ್ನ ಕೊನೆಯ ಉಸಿರು ಇರುವವರೆಗೂ ನಾನು ಇರಾನ್ ಜನರೊಂದಿಗೆ ಇರುತ್ತೇನೆ ಎಂದು ತಿಳಿಯಿರಿ” ಎಂದು ನಟಿ ಹೆಂಗಮೆಹ್ ಘಜಿಯಾನಿ ಹೇಳಿದ್ದಾರೆ.