ಲಕ್ನೋ: ಆಲ್ ರೌಂಡರ್ ತನುಷ್ ಕೋಟ್ಯಾನ್ (Tanush Kotian) ಅವರ ದಿಟ್ಟ ಹೋರಾಟದ ಫಲವಾಗಿ ಮುಂಬೈ ತಂಡವು 27 ವರ್ಷಗಳ ಬಳಿಕ ಇರಾನಿ ಕಪ್ (Irani Cup) ಗೆದ್ದ ಸಾಧನೆ ಮಾಡಿದೆ. ಶೇಷ ಭಾರತ ವಿರುದ್ದದ ಪಂದ್ಯವು ಡ್ರಾ ಆದರೂ ಮೊದಲ ಇನ್ನಿಂಗ್ಸ್ ಮುನ್ನಡೆಯ ಕಾರಣದಿಂದ ಮುಂಬೈ ವಿಜಯಿಯಾಯಿತು.
ಎರಡನೇ ಇನ್ನಿಂಗ್ಸ್ ನಲ್ಲಿ ಮುಂಬೈ ಬ್ಯಾಟಿಂಗ್ ಕುಸಿತ ಕಂಡರೂ ಗಟ್ಟಿಯಾಗಿ ನಿಂತ ತನುಷ್ ಕೋಟ್ಯಾನ್ ಅಜೇಯ ಶತಕ ಬಾರಿಸಿ ಮಿಂಚಿದರು. 150 ಎಸೆತ ಎದುರಿಸಿದ ತನುಷ್ 114 ರನ್ ಬಾರಿಸಿ ಔಟಾಗದೆ ಉಳಿದರು.
ಅವರು ತಮ್ಮ ಚೊಚ್ಚಲ ಪ್ರಥಮ ದರ್ಜೆ ಶತಕವನ್ನು ಹೊಡೆದು ಮುಂಬೈಗೆ ಅಂತಿಮ ದಿನದಂದು ಕಠಿಣ ಪರಿಸ್ಥಿತಿಯನ್ನು ತಪ್ಪಿಸಲು ಸಹಾಯ ಮಾಡಿದರು. ಕೋಟ್ಯಾನ್ ಮತ್ತು ಮೋಹಿತ್ ಅವಸ್ಥಿ ಒಂಬತ್ತನೇ ವಿಕೆಟ್ ಗೆ 158 ರನ್ ಕಲೆ ಹಾಕಿದರು.
ಮುಂಬೈ ತನ್ನ ಇನ್ನಿಂಗ್ಸ್ ಡಿಕ್ಲೇರ್ ಮಾಡುವ ಅಪಾಯವನ್ನು ತಂದುಕೊಳಲಿಲ್ಲ. ಇರಾನಿ ಕಪ್ ಅನ್ನು ಭದ್ರಪಡಿಸಿಕೊಳ್ಳಲು ಮೊದಲ ಇನ್ನಿಂಗ್ಸ್ ಮುನ್ನಡೆ ಸಾಕು ಎಂದು ಗೊತ್ತಿದ್ದ ಮುಂಬೈ ನಾಯಕ ರಹಾನೆ, ರೆಸ್ಟ್ ಆಫ್ ಇಂಡಿಯಾವನ್ನು ಬ್ಯಾಟಿಂಗ್ ಮಾಡಲು ಅವಕಾಶ ಮಾಡಿಕೊಡಲಿಲ್ಲ.
ಅಜಿಂಕ್ಯ ರಹಾನೆ ಅವರ ಮುಂಬೈ ತಂಡವು ರಣಜಿ ಟ್ರೋಫಿ-ಇರಾನಿ ಕಪ್ ಡಬಲ್ ಅನ್ನು ಪೂರ್ಣಗೊಳಿಸಿತು.
ಸಂಕ್ಷಿಪ್ತ ಸ್ಕೋರ್: ಮುಂಬೈ 537 ಮತ್ತು 329ಕ್ಕೆ 8, ರೆಸ್ಟ್ ಆಫ್ ಇಂಡಿಯಾ: 416