ವಿಶ್ವವಿಡೀ ಈಗ ಎರಡು ಯುದ್ಧಗಳಿಗೆ ಸಾಕ್ಷಿಯಾಗಿರುವಂತೆಯೇ ಮತ್ತೂಂದು ಯುದ್ಧದ ಭೀತಿ ತಲೆದೋರಿದೆ. ಕಳೆದ ಏಳು ತಿಂಗಳುಗಳಿಂದ ಹಮಾಸ್ ಉಗ್ರರು ಮತ್ತು ಇಸ್ರೇಲ್ ನಡುವೆ ನಡೆಯುತ್ತಿರುವ ಯುದ್ಧದ ಪಶ್ಚಾತ್ ಪರಿಣಾಮವೋ ಎಂಬಂತೆ ಇರಾನ್ ಮತ್ತು ಇಸ್ರೇಲ್ ನಡುವಣ ಸಂಘರ್ಷ ಭುಗಿಲೆದ್ದಿದೆ.
ಎಪ್ರಿಲ್ ಆರಂಭದಲ್ಲಿ ಸಿರಿಯಾದ ಡಮಾಸ್ಕಸ್‌ನಲ್ಲಿನ ಇರಾನ್ ರಾಯಭಾರ ಕಚೇರಿ ಮೇಲೆ ನಡೆದ ದಾಳಿಯಲ್ಲಿ ಇಬ್ಬರು ಜನರಲ್‌ಗಳ ಸಹಿತ ಇರಾನಿನ ಅಧಿಕಾರಿಗಳು ಸಾವನ್ನಪ್ಪಿದ ಘಟನೆಗೆ ಪ್ರತೀಕಾರವಾಗಿ ಇರಾನ್, ಇಸ್ರೇಲ್ ಮೇಲೆ ಶನಿವಾರ ಮತ್ತು ರವಿವಾರದಂದು ವಾಯುದಾಳಿಗಳನ್ನು ನಡೆಸಿದ್ದು ಎರಡೂ ರಾಷ್ಟ್ರಗಳ ನಡುವೆ ಯುದ್ಧದ ಪರಿಸ್ಥಿತಿ ನಿರ್ಮಾಣವಾಗಿದೆ. ವಿಶ್ವ ರಾಷ್ಟ್ರಗಳು ಶಾಂತಿ ಮಂತ್ರವನ್ನು ಜಪಿಸುತ್ತಲೇ ಯುದ್ಧಕ್ಕೆ ಸನ್ನದ್ಧವಾಗುತ್ತಿದ್ದರೆ, ಜಗತ್ತಿನಲ್ಲಿ ಶಾಂತಿ ಕಾಪಾಡುವ ಉದ್ದೇಶದಿಂದ ರಚನೆಯಾದ ವಿಶ್ವ ಸಂಸ್ಥೆ ಈ ಎಲ್ಲ ಬೆಳವಣಿಗೆಗಳಿಗೆ ಪ್ರೇಕ್ಷಕನಾಗಿರುವುದು ವಿಶ್ವದ ಜನತೆಯನ್ನು ಅಚ್ಚರಿಯಲ್ಲಿ ಕೆಡವಿದೆ.
ಇರಾನ್-ಇಸ್ರೇಲ್ ಸಂಘರ್ಷಕ್ಕೆ ನಾಲ್ಕೂವರೆ ದಶಕಗಳ ಇತಿಹಾಸವಿದೆ ಯಾ ದರೂ ಈವರೆಗೆ ಈ ಎರಡು ರಾಷ್ಟ್ರಗಳು ನೇರ ಹಣಾಹಣಿಗೆ ಇಳಿದಿರುವುದು ಇದೇ ಮೊದಲು. 1979ರಲ್ಲಿ ಇಸ್ಲಾಮಿಕ್ ಕ್ರಾಂತಿ ನಡೆದಾಗಿನಿಂದ ಎರಡೂ ರಾಷ್ಟ್ರಗಳ ನಡುವೆ ವೈರತ್ವ ಸೃಷ್ಟಿಯಾಗಿತ್ತು. ಇಸ್ರೇಲ್-ಇರಾನ್ ಸಂಘರ್ಷ ತಾರಕಕ್ಕೇರಿರುವಂತೆಯೇ ವಿಶ್ವದ ಬಹುತೇಕ ದೇಶಗಳು ಈ ಎರಡೂ ರಾಷ್ಟ್ರಗಳಿಗೂ ಸಂಯಮ ವಹಿಸಿ, ಶಾಂತಿ ಕಾಪಾಡುವಂತೆ ಸಲಹೆ ನೀಡಿವೆಯಲ್ಲದೆ ಎಲ್ಲ ವಿವಾದಗಳಿಗೆ ರಾಜತಾಂತ್ರಿಕ ಮಾರ್ಗದಲ್ಲಿ ಪರಿಹಾರ ಕಂಡುಕೊಳ್ಳುವಂತೆ ಕಿವಿಮಾತು ಹೇಳಿವೆ. ವಿಶ್ವಸಂಸ್ಥೆ ಕೂಡ ಶಾಂತಿ ಮಂತ್ರ ಜಪಿಸಿದೆ.
ರಷ್ಯಾ-ಉಕ್ರೇನ್ ನಡುವೆ ಕಳೆದ 26 ತಿಂಗಳುಗಳಿಂದ ಯುದ್ಧ ನಡೆಯುತ್ತಿದ್ದರೆ, ಇಸ್ರೇಲ್-ಹಮಾಸ್ ನಡುವೆ ಏಳು ತಿಂಗಳುಗಳಿಂದ ಯುದ್ಧ ನಡೆಯುತ್ತಿದೆ. ಈ ಎರಡೂ ಯುದ್ಧಗಳು ಇಷ್ಟೊಂದು ಸುದೀರ್ಘಾವಧಿಯಿಂದ ನಡೆಯುತ್ತಿದ್ದರೂ ವಿಶ್ವಸಂಸ್ಥೆ ಮತ್ತು ಜಾಗತಿಕವಾಗಿ ಬಲಾಡ್ಯವಾಗಿರುವ ರಾಷ್ಟ್ರಗಳು ಶಾಂತಿ ಮಂತ್ರ ಬೋಧನೆಗೆ ಸೀಮಿತವಾಗಿವೆಯೇ ವಿನಾ ಇದನ್ನು ಅಂತ್ಯ ಗೊಳಿಸಲು ಪ್ರಾಮಾಣಿಕ ಪ್ರಯತ್ನ ನಡೆಸದಿರುವುದು ತೀರಾ ವಿಪರ್ಯಾಸ. ಜಾಗತಿಕ ರಾಷ್ಟ್ರಗಳು ಮತ್ತು ವಿಶ್ವಸಂಸ್ಥೆಯ ಮೃದು ಧೋರಣೆಯಿಂದಾಗಿಯೇ ಈಗ ಮಧ್ಯಪ್ರಾಚ್ಯದಲ್ಲಿನ ಬಿಕ್ಕಟ್ಟು ಮತ್ತೂಮ್ಮೆ ಉಲ್ಬಣಿಸಿದ್ದು ಇನ್ನೊಂದು ಯುದ್ಧಕ್ಕೆ ಇಡೀ ವಿಶ್ವ ಸಾಕ್ಷಿಯಾಗಬೇಕಾದ ಪರಿಸ್ಥಿತಿಯನ್ನು ಸೃಷ್ಟಿಸಿದೆ.
ಜಾಗತಿಕ ನಾಯಕರ ಹೇಳಿಕೆ ಮತ್ತವರ ವರ್ತನೆಗಳ ನಡುವಣ ವಿರೋಧಾ ಭಾಸ, ವಿಶ್ವದ ಮೇಲೆ ಪಾರಮ್ಯ ಸಾಧಿಸುವ ಹಪಾಹಪಿ, ಭಯೋತ್ಪಾದನೆಗೆ ಬೆಂಬಲ, ವಿಸ್ತರಣಾವಾದ, ಪ್ರಾದೇಶಿಕತಾವಾದ, ವಾಣಿಜ್ಯ-ವ್ಯಾಪಾರ ಕ್ಷೇತ್ರದಲ್ಲಿನ ಸ್ಪರ್ಧೆ, ಶಸ್ತ್ರಾಸ್ತ್ರ ಪೈಪೋಟಿ, ದೂರದೃಷ್ಟಿ ಮತ್ತು ವಿವೇಚನಾರಹಿತ ನಾಯಕತ್ವ, ಧರ್ಮಾಂಧತೆ ಇವೇ ಮೊದಲಾದ ಕಾರಣಗಳಿಂದಾಗಿ ಇಡೀ ವಿಶ್ವ ಪದೇಪದೆ ಯುದ್ಧಾತಂಕವನ್ನು ಎದುರಿಸಬೇಕಾದ ಸನ್ನಿವೇಶ ಸೃಷ್ಟಿಯಾಗಿದೆ.
ಹಾಲಿ ನಡೆಯುತ್ತಿರುವ ಯುದ್ಧಗಳ ಪರಿಣಾಮವನ್ನು ಇಡೀ ವಿಶ್ವ ಸಮು ದಾಯ ಎದುರಿಸುತ್ತಿದ್ದರೂ ಇದರಿಂದ ಇನ್ನೂ ಪಾಠ ಕಲಿಯದ ರಾಷ್ಟ್ರಗಳ ಯುದ್ಧದಾಹ ಕಡಿಮೆಯಾಗಿಲ್ಲ. ಯಾವುದೇ ಪರಿಸ್ಥಿತಿಯಲ್ಲೂ ಯುದ್ಧ, ಎಂಥಾ ಸಮಸ್ಯೆಗೂ ಶಾಶ್ವತ ಪರಿಹಾರವಾಗಲಾರದು ಎಂಬ ವಾಸ್ತವ ಎಲ್ಲ ರಾಷ್ಟ್ರಗಳಿಗೂ ಅರಿವಿದ್ದರೂ ವಿಶ್ವದ ಒಂದಲ್ಲ ಒಂದು ಭಾಗದಲ್ಲಿ ಸಮರ ಸನ್ನಿವೇಶ ಸೃಷ್ಟಿ ಯಾಗುತ್ತಲೇ ಇದೆ. ಪ್ರತೀ ಬಾರಿಯೂ ಯುದ್ಧದ ಸನ್ನಿವೇಶ ಸೃಷ್ಟಿಯಾದಾಗಲೆಲ್ಲ ವಿಶ್ವ ರಾಷ್ಟ್ರಗಳು ತಾತ್ಕಾಲಿಕ ಪರಿಹಾರಕ್ಕೆ ಆದ್ಯತೆ ನೀಡುವುದರ ಫಲವನ್ನು ಈಗ ಇಡೀ ವಿಶ್ವ ಉಣ್ಣುವಂತಾಗಿದೆ. ಜಾಗತಿಕ ನಾಶಕ್ಕೆ ಕಾರಣವಾಗಬಲ್ಲ ಇಂತಹ ಯುದೊœàನ್ಮಾದಕ್ಕೆ ಮದ್ದರೆಯಲು ವಿಶ್ವ ರಾಷ್ಟ್ರಗಳು ಒಗ್ಗೂಡಬೇಕು. ಪರಿಸ್ಥಿತಿಗೆ ಅನುಗುಣವಾಗಿ ಶಾಂತಿ ಮಂತ್ರ ಜಪಿಸುವುದರ ಬದಲಾಗಿ ಅದು ವಿಶ್ವದ ಎಲ್ಲ ರಾಷ್ಟ್ರಗಳ ದಿನಚರಿಯಾಗಬೇಕು. ಈ ನಿಟ್ಟಿನಲ್ಲಿ ವಿಶ್ವಸಂಸ್ಥೆ ಮುಂದಡಿ ಇಡಲು ಇದು ಸಕಾಲ.