ಮುಂಬೈ: ಇಸ್ರೇಲ್ (Israel) ಮತ್ತು ಇರಾನ್ (Iran) ನಡುವಿನ ಕದನ ತಾರಕಕ್ಕೇರಿರುವ ಬೆನ್ನಲ್ಲೇ ಗುರುವಾರ(ಅ.03) ಬಾಂಬೆ ಷೇರುಪೇಟೆ ವಹಿವಾಟಿನ ಮೇಲೂ ಪರಿಣಾಮ ಬೀರಿದ್ದು, ಸಂವೇದಿ ಸೂಚ್ಯಂಕ ಸೆನ್ಸೆ*ಕ್ಸ್ ಬರೋಬ್ಬರಿ 1,305 ಅಂಕಗಳಷ್ಟು ಕುಸಿತ ಕಂಡಿದೆ.
ಷೇರುಪೇಟೆ ಸಂವೇದಿ ಸೂಚ್ಯಂಕ 1,305 ಅಂಕ ಕುಸಿತ ಕಂಡು 82,900.43 ಅಂಕಗಳಲ್ಲಿ ವಹಿವಾಟು ಮುಂದುವರಿದಿದೆ. ಎನ್ ಎಸ್ ಇ (NSE) ನಿಫ್ಟಿ 297.50 ಅಂಕ ಇಳಿಕೆಯೊಂದಿಗೆ 25,499.40 ಅಂಕಗಳ ಮಟ್ಟಕ್ಕೆ ಕುಸಿದಿದೆ.
ಮಧ್ಯಪ್ರಾಚ್ಯದಲ್ಲಿನ ಯುದ್ದೋನ್ಮಾದಿಂದಾಗಿ ತೈಲ ಬೆಲೆ ಏರಿಕೆ ಕಂಡಿದ್ದು, ಇದರ ಪರಿಣಾಮ ಭಾರತದ ಷೇರುಪೇಟೆ ಕುಸಿತ ಕಾಣಲು ಕಾರಣವಾಗಿದೆ ಎಂದು ವರದಿ ತಿಳಿಸಿದೆ. ಇಸ್ರೇಲ್, ಇರಾನ್ ನಡುವಿನ ಸಂಘರ್ಷ ಜಾಗತಿಕ ಮಾರುಕಟ್ಟೆ ಮೇಲೂ ಪರಿಣಾಮ ಬೀರಿದ್ದು, ಮಧ್ಯಪ್ರಾಚ್ಯದ ತೈಲ ಸರಬರಾಜು ಸ್ಥಗಿತಗೊಂಡಿರುವುದು ತೈಲ ಬೆಲೆ ಏರಿಕೆಯಾಗಲು ಕಾರಣವಾಗಿದೆ.
ಇರಾನ್ ಇಸ್ರೇಲ್ ಮೇಲೆ ದಾಳಿ ನಡೆಸಿದ್ದಕ್ಕೆ ಪ್ರತೀಕಾರವಾಗಿ ಇಸ್ರೇಲ್ ಕೂಡಾ ಕ್ಷಿಪಣಿ ದಾಳಿ ನಡೆಸಿದ್ದು, ಉಭಯ ದೇಶಗಳ ನಡುವಿನ ಯುದ್ಧ ಮುಂದುವರಿದರೆ ಆರ್ಥಿಕತೆಯ ಮೇಲೂ ಪರಿಣಾಮ ಬೀರಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಒಂದು ವೇಳೆ ಇಸ್ರೇಲ್ ಇರಾನ್ ನ ತೈಲಾಗಾರದ ಮೇಲೆ ದಾಳಿ ನಡೆಸಿದಲ್ಲಿ, ಕಚ್ಛಾ ತೈಲದ ಬೆಲೆ ಭಾರೀ ಪ್ರಮಾಣದಲ್ಲಿ ಏರಿಕೆಯಾಗಲಿದೆ. ಇದರಿಂದ ಭಾರತದಂತಹ ತೈಲ ಆಮದು ದೇಶಗಳ ಮೇಲೆ ದೊಡ್ಡ ಹೊಡೆತ ಬೀಳಲಿದೆ ಎಂದು ಜಿಯೋಜಿಟ್ ಫೈನಾಶ್ಶಿಯಲ್ ಸರ್ವೀಸಸ್ ನ ಡಾ.ವಿ.ಕೆ.ವಿಜಯ್ ಕುಮಾರ್ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.