ಟೆಹರಾನ್: ಪಾಕಿಸ್ತಾನದ ಪ್ರದೇಶದೊಳಗೆ ನುಗ್ಗಿ ಇರಾನ್ ಸೇನಾ ಪಡೆ ಜೈಶ್ ಅಲ್ ಅದ್ಲ್ ಭಯೋತ್ಪಾದಕ ಸಂಘಟನೆಯ ಕಮಾಂಡರ್ ಇಸ್ಮಾಯಿಲ್ ಶಹಬಕ್ಷ್ ಮತ್ತು ಆತನ ಕೆಲವು ಸಹಚರರನ್ನು ಹತ್ಯೆಗೈದಿರುವುದಾಗಿ ಎಎನ್ ಐ ನ್ಯೂಸ್ ಏಜೆನ್ಸಿ ವರದಿ ಮಾಡಿದೆ.
ಇದನ್ನೂ ಓದಿ:Road mishap: ನೈಸ್ ರಸ್ತೆಯಲ್ಲಿ ಸರಣಿ ಅಪಘಾತ: ತುಂಡಾದ ಲಾರಿ ಚಾಲಕನ ಕಾಲು
ಇರಾನ್ ಇಂಟರ್ ನ್ಯಾಶನಲ್ ಇಂಗ್ಲಿಷ್ ಸುದ್ದಿಯ ಮಾಹಿತಿಯಂತೆ, ಉಭಯ ದೇಶಗಳ ನಡುವೆ ವೈಮಾನಿಕ ದಾಳಿ ನಡೆದ ಒಂದು ತಿಂಗಳ ಬಳಿಕ ಈ ಹೊಸ ಬೆಳವಣಿಗೆ ನಡೆದಿರುವುದಾಗಿ ವಿವರಿಸಿದೆ.
ಇರಾನ್ ನ ದಕ್ಷಿಣ ಪ್ರಾಂತ್ಯವಾದ ಸಿಸ್ತಾನ್ ಮತ್ತು ಬಲೂಚಿಸ್ತಾನ್ ಪ್ರದೇಶದಲ್ಲಿ ಕಾರ್ಯಾಚರಿಸುತ್ತಿದ್ದ ಸುನ್ನಿ ಭಯೋತ್ಪಾದಕ ಸಂಘಟನೆಯನ್ನು ಉಗ್ರಗಾಮಿ ಸಂಘಟನೆ ಎಂದು ಇರಾನ್ ಘೋಷಿಸಿತ್ತು.
ವರ್ಷಗಳ ಕಾಲ ಜೈಶ್ ಅಲ್ ಅದ್ಲ್ ಸಂಘಟನೆ ಇರಾನ್ ಸೈನಿಕರ ಮೇಲೆ ಹಲವಾರು ಬಾರಿ ದಾಳಿ ನಡೆಸಿತ್ತು. ಕಳೆದ ಡಿಸೆಂಬರ್ ನಲ್ಲಿಯೂ ದಾಳಿ ನಡೆಸಿ ಅದರ ಹೊಣೆಯನ್ನು ಹೊತ್ತುಕೊಂಡಿತ್ತು. ಈ ದಾಳಿಯಲ್ಲಿ ಇರಾನ್ 11 ಮಂದಿ ಪೊಲೀಸರು ಹತ್ಯೆಗೀಡಾಗಿದ್ದರು.
ಏತನ್ಮಧ್ಯೆ ಪಾಕಿಸ್ತಾನ ಮತ್ತು ಇರಾನ್ ಭದ್ರತಾ ಸಹಕಾರವನ್ನು ವೃದ್ಧಿಸಿಕೊಳ್ಳಲು ಒಪ್ಪಿಕೊಂಡಿರುವುದಾಗಿ ದ ನ್ಯೂಸ್ ಇಂಟರ್ ನ್ಯಾಶನಲ್ ವರದಿ ಮಾಡಿದೆ. ಆಯಾ ಕಟ್ಟಿನ ಸ್ಥಳದಲ್ಲಿನ ಭಯೋತ್ಪಾದಕ ಕೃತ್ಯವನ್ನು ಮಟ್ಟಹಾಕುವ ನಿಟ್ಟಿನಲ್ಲಿ ಇರಾನ್ ಮತ್ತು ಪಾಕಿಸ್ತಾನ ಒಪ್ಪಿಕೊಂಡಿರುವುದಾಗಿ ಪಾಕ್ ವಿದೇಶಾಂಗ ಸಚಿವ ಜಲೀಲ್ ಅಬ್ಬಾಸ್ ಜಿಲಾನಿ ತಿಳಿಸಿದ್ದಾರೆ.