ಟೆಹ್ರಾನ್: ಮುಂದಿನ 48 ಗಂಟೆಗಳಲ್ಲಿ ಇಸ್ರೇಲ್ ಮೇಲೆ ಇರಾನ್ ನೇರ ದಾಳಿ ನಡೆಸುವ ಸಾಧ್ಯತೆ ಇದ್ದು, ಯಹೂದಿ ರಾಷ್ಟ್ರ ಅದನ್ನು ಎದುರಿಸಲು ಸಿದ್ಧತೆ ನಡೆಸುತ್ತಿದೆ ಎಂದು ವಾಲ್ ಸ್ಟ್ರೀಟ್ ಜರ್ನಲ್ ಶುಕ್ರವಾರ ವರದಿ ಮಾಡಿದೆ, ಇರಾನ್ ನಾಯಕತ್ವದಿಂದ ಮಾಹಿತಿ ಪಡೆದ ವ್ಯಕ್ತಿಯನ್ನು ಉಲ್ಲೇಖಿಸಿ ಈ ವರದಿ ಮಾಡಲಾಗಿದೆ.
ಇಸ್ರೇಲ್‌ನ ಹಳೆಯ ವೈರಿ ಇರಾನ್‌ನೊಂದಿಗಿನ ಮುಖಾಮುಖಿಯು ಗಾಜಾದಲ್ಲಿ ಹಮಾಸ್‌ನೊಂದಿಗೆ ಯುದ್ಧ ನಡೆಯುತ್ತಿರುವಾಗಲೇ ನಡೆದ ಬೆಳವಣಿಗೆಯಾಗಿದೆ. ಇರಾನ್ ಇನ್ನೂ ಇಸ್ರೇಲ್ ಮೇಲೆ ನೇರ ದಾಳಿಯ ರಾಜಕೀಯ ಅಪಾಯಗಳನ್ನು ಲೆಕ್ಕಾಚಾರ ಮಾಡುತ್ತಿದೆ ಎಂದೂ ವರದಿಯಲ್ಲಿ ಹೇಳಲಾಗಿದೆ.
“ಭಾರಿ ದಾಳಿ ನಡೆಸುವ ಯೋಜನೆಗಳು ಇರಾನ್ ಉನ್ನತ ನಾಯಕ ಅಯತೊಲ್ಲಾ ಅಲಿ ಖಮೇನಿ ಮುಂದೆ ಇವೆ, ಮತ್ತು ಅವರು ಇನ್ನೂ ರಾಜಕೀಯ ಅಪಾಯವನ್ನು ತೂಗುತ್ತಿದ್ದಾರೆ” ಎಂದು ಅವರ ಸಲಹೆಗಾರ ಹೇಳಿರುವುದಾಗಿ ವರದಿಯಾಗಿದೆ.
ಸಿರಿಯಾದ ಡಮಾಸ್ಕಸ್‌ನಲ್ಲಿರುವ ಇರಾನ್ ಕಾನ್ಸುಲೇಟ್‌ನ ಮೇಲಿನ ಇಸ್ರೇಲ್ ನಡೆಸಿದ ದಾಳಿಗೆ ಪ್ರತೀಕಾರ ತೀರಿಸಿಕೊಳ್ಳಲು ಇರಾನ್ ಪ್ರತಿಜ್ಞೆ ಮಾಡಿದ್ದು, ರಂಜಾನ್ ಬಳಿಕ ದಾಳಿ ನಡೆಸಲು ಮುಂದಾಗಿದೆ. ಇರಾನ್‌ನ ಉನ್ನತ ಜನರಲ್ ಮತ್ತು ಇತರ ಆರು ಮಿಲಿಟರಿ ಅಧಿಕಾರಿಗಳು ಹತ್ಯೆಗೀಡಾದ ಬಳಿಕ ಇರಾನ್ ನ ಸಹನೆಯ ಕಟ್ಟೆ ಒಡೆದಿದೆ.
ಯುದ್ಧದ ಸ್ಥಿತಿ ನಿರ್ಮಾಣವಾದಲ್ಲಿ ಅಮೆರಿಕ ಮತ್ತು ಯುಕೆ ಅಂತರ ಕಾಯ್ದುಕೊಳ್ಳಲಿವೆ ಎಂದೂ ಮಾಧ್ಯಮಗಳಲ್ಲಿ ವರದಿಯಾಗಿದೆ.