Advertisement

IPS: ನಿವೃತ್ತಿಗೆ 2 ತಿಂಗಳು ಇರುವಾಗಲೇ ಐಪಿಎಸ್‌ ಅಧಿಕಾರಿ ಪ್ರತಾಪ್‌ ರೆಡ್ಡಿ ರಾಜೀನಾಮೆ

08:29 PM Feb 09, 2024 | Pranav MS |

ಬೆಂಗಳೂರು: ಕರ್ನಾಟಕದ ಆಂತರಿಕ ಭದ್ರತೆ ವಿಭಾಗದ ಡಿಜಿಪಿ ಸಿ.ಎಚ್‌.ಪ್ರತಾಪ್‌ ರೆಡ್ಡಿ ಅವರು ಸೇವಾ ನಿವೃತ್ತಿಗೆ ಎರಡು ತಿಂಗಳು ಬಾಕಿ ಇರುವಾಗಲೇ ಸ್ವಯಂ ನಿವೃತ್ತಿ ಕೋರಿ ಸರಕಾರಕ್ಕೆ ಪತ್ರ ಬರೆದಿದ್ದಾರೆ. ಪ್ರತಾಪ್‌ ರೆಡ್ಡಿ ವೈಯಕ್ತಿಕ ಕಾರಣ ನೀಡಿ ರಾಜೀನಾಮೆ ಸಲ್ಲಿಸಿದ್ದಾರೆಂದು ತಿಳಿದು ಬಂದಿದೆ. ಎ.30ಕ್ಕೆ ತನ್ನನ್ನು ಸೇವೆಯಿಂದ ಬಿಡುಗಡೆ ಮಾಡುವಂತೆ ಸರಕಾರಕ್ಕೆ ಮನವಿ ಸಲ್ಲಿಸಿದ್ದಾರೆ. ಇವರು ಮುಂದಿನ ಮೇ ತಿಂಗಳು ನಿವೃತ್ತಿಯಾಗುವವರಿದ್ದರು. ಇದು ರಾಜ್ಯ ಪೊಲೀಸ್‌ ವಲಯದಲ್ಲಿ ಹಲವು ಕುತೂಹಲಗಳಿಗೆ ಎಡೆಮಾಡಿಕೊಟ್ಟಿದೆ.

Advertisement

ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯವರಾಗಿರುವ ಪ್ರತಾಪ್‌ ರೆಡ್ಡಿ ಬಿ.ಟೆಕ್‌. ಪದವೀಧರರಾಗಿದ್ದು, 1991ರಲ್ಲಿ ಕರ್ನಾಟಕ ಕೆಡರ್‌ನ ಐಪಿಎಸ್‌ ಅಧಿಕಾರಿಯಾಗಿ ಸೇವೆಗೆ ಸೇರಿದ್ದರು. ಸಿಬಿಐನ ಭ್ರಷ್ಟಾಚಾರ ನಿಗ್ರಹ ದಳದ ಮುಂಬಯಿ ಮತ್ತು ಬೆಂಗಳೂರು ವಿಭಾಗದಲ್ಲೂ ಸೇವೆ ಸಲ್ಲಿಸಿದ್ದಾರೆ. ಬ್ಯಾಂಕಿಂಗ್‌ ಮತ್ತು ಸೈಬರ್‌ ಸೆಕ್ಯುರಿಟಿ ವಿಭಾಗದ ಅಪರಾಧ ಪ್ರಕರಣಗಳನ್ನು ಪತ್ತೆ ಹಚ್ಚುವ ಮೂಲಕ ರಾಷ್ಟ್ರೀಯ ಮಟ್ಟದಲ್ಲೂ ಪ್ರಸಿದ್ಧಿ ಪಡೆದಿದ್ದರು. ಬೆಂಗಳೂರು ನಗರ ಪೊಲೀಸ್‌ ಆಯುಕ್ತರಾಗಿಯೂ ಸೇವೆ ಸಲ್ಲಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next