Advertisement
ಮೊದಲು ಬ್ಯಾಟಿಂಗ್ ನಡೆಸುವ ನಿರ್ಧಾರ ಕೈಗೊಂಡ ಕೆಕೆಆರ್ 8 ವಿಕೆಟಿಗೆ ಬರೀ 84 ರನ್ ಗಳಿಸಿತು. ಇದು ಐಪಿಎಲ್‌ನಲ್ಲಿ ಕೋಲ್ಕತಾ ತಂಡದ ದ್ವಿತೀಯ ಕನಿಷ್ಠ ಗಳಿಕೆಯಾಗದೆ. ಜವಾಬಿತ್ತ ಆರ್‌ಸಿಬಿ 13.3 ಓವರ್‌ಗಳಲ್ಲಿ 2 ವಿಕೆಟಿಗೆ 85 ರನ್ ಬಾರಿಸಿ ಜಯಭೇರಿ ಮೊಳಗಿಸಿತು.
Related Articles
ಶಾಬಾಜ್ ಅಹ್ಮದ್ ಬದಲು ಆಡಲಿಳಿದ ಮಧ್ಯಮ ವೇಗಿ ಮೊಹಮ್ಮದ್ ಸಿರಾಜ್ ಘಾತಕ ಬೌಲಿಂಗ್ ದಾಳಿ ಮೂಲಕ ಕೆಕೆಆರ್ ಪಾಳೆಯದಲ್ಲಿ ನಡುಕ ಹುಟ್ಟಿಸಿದರು. ದ್ವಿತೀಯ ಓವರ್‌ನ ಸತತ ಎಸೆತಗಳಲ್ಲಿ ರಾಹುಲ್ ತ್ರಿಪಾಠಿ (1) ಮತ್ತು ನಿತೀಶ್ ರಾಣಾ (0) ಅವರನ್ನು ಪೆವಿಲಿಯನ್ನಿಗೆ ರವಾನಿಸಿದರು. ಆಗ ಕೆಕೆಆರ್ ಕೇವಲ 3 ರನ್ ಮಾಡಿತ್ತು.
Advertisement
ಮುಂದಿನ ಓವರಿನಲ್ಲಿ ಸಿರಾಜ್ ಮತ್ತೂಂದು ಬೇಟೆಯಾಡಿದರು. ಅಪಾಯಕಾರಿ ಟಾಮ್ ಬ್ಯಾಂಟನ್ (10) ಅವರ ಆಟಕ್ಕೆ ತೆರೆ ಎಳೆದರು. ಸಿರಾಜ್ ಅವರ ಈ ಎರಡೂ ಓವರ್ ಮೇಡನ್ ಆಗಿತ್ತೆಂಬುದು ವಿಶೇಷ. ಇದರೊಂದಿಗೆ ಐಪಿಎಲ್ ಪಂದ್ಯವೊಂದರಲ್ಲಿ 2 ಮೇಡನ್ ಓವರ್ ಎಸೆದ ಪ್ರಥಮ ಬೌಲರ್ ಎಂಬ ವಿಶಿಷ್ಟ ಸಾಧನೆ ಸಿರಾಜ್ ಅವರದಾಯಿತು. 3ನೇ ಓವರ್ ಮುಗಿಸಿದಾಗ ಸಿರಾಜ್ ಅವರ ಬೌಲಿಂಗ್ ಫಿಗರ್ ಇಷ್ಟೊಂದು ಆಕರ್ಷಕವಾಗಿತ್ತು: 3-2-2-3. ಅಂತಿಮವಾಗಿ ಅವರು 8 ರನ್ನಿತ್ತು 3 ವಿಕೆಟ್ ಉರುಳಿಸಿದ ಸಾಧನೆಗೈದರು.
ಸಿರಾಜ್ ದಾಳಿಯ ನಡುವೆ ನವದೀಪ್ ಸೈನಿ ಕೂಡ ಅಪಾಯಕಾರಿಯಾಗಿ ಗೋಚರಿಸಿದರು. ಪಂದ್ಯದ ಮೂರನೇ ಓವರಿನಲ್ಲಿ ಆರಂಭಕಾರ ಶುಭಮನ್ ಗಿಲ್ (1) ವಿಕೆಟ್ ಉಡಾಯಿಸಿದರು. ಮೂರಕ್ಕೆ 3 ವಿಕೆಟ್ ಕಳೆದುಕೊಂಡ ಕೆಕೆಆರ್, 14 ರನ್ ಮಾಡಿದ ವೇಳೆ 4ನೇ ವಿಕೆಟ್ ಉದುರಿಸಿಕೊಂಡಿತು.
ಐಪಿಎಲ್‌ನಲ್ಲಿ ತಂಡವೊಂದು 3 ರನ್ನಿಗೆ 3 ವಿಕೆಟ್ ಉದುರಿಸಿಕೊಂಡ 3ನೇ ನಿದರ್ಶನ ಇದಾಗಿದೆ. ಕೆಕೆಆರ್ ಇಂಥದೊಂದು ಸಂಕಟಕ್ಕೆ ಸಿಲುಕಿದ್ದು ಇದೇ ಮೊದಲು. ಪವರ್ ಪ್ಲೇ ಅವಧಿಯಲ್ಲಿ ಕೋಲ್ಕತಾ ಸ್ಕೋರ್ 4ಕ್ಕೆ 17 ರನ್. ಇದು ಪವರ್ ಪ್ಲೇಯಲ್ಲಿ ಕೆಕೆಆರ್ ತಂಡದ ಈ ವರೆಗಿನ ಕನಿಷ್ಠ ಗಳಿಕೆಯಾಗಿದೆ.
ಮಾರ್ಗನ್ ಪಡೆಯ ಸಂಕಟ ಇಲ್ಲಿಗೇ ಕೊನೆಗೊಳ್ಳಲಿಲ್ಲ. 9ನೇ ಓವರ್‌ನಲ್ಲಿ ದಿನೇಶ್ ಕಾರ್ತಿಕ್ (4) ಲೆಗ್‌ಸ್ಪಿನ್ನರ್ ಚಹಲ್ ಎಸೆತಕ್ಕೆ ಲೆಗ್ ಬಿಫೋರ್ ಆದರು. ಡಿಆರ್‌ಎಸ್ ರಿವ್ಯೂ ಪಡೆದ ಆರ್‌ಸಿಬಿಗೆ ದೊಡ್ಡ ಯಶಸ್ಸು ಲಭಿಸಿತ್ತು. ಅರ್ಧ ಹಾದಿ ಕ್ರಮಿಸುವಾಗ ಕೋಲ್ಕತಾ 36ಕ್ಕೆ 5 ವಿಕೆಟ್ ಉರುಳಿಸಿಕೊಂಡಿತ್ತು. ಇದು ಐಪಿಎಲ್‌ನ ಮೊದಲ 10 ಓವರ್‌ಗಳಲ್ಲಿ ತಂಡವೊಂದು ಗಳಿಸಿದ 3ನೇ ಕನಿಷ್ಠ ಗಳಿಕೆ. 2009ರಲ್ಲಿ ಡೆಕ್ಕನ್ ವಿರುದ್ಧ ಕೆಕೆಆರ್ ತಂಡವೇ 3ಕ್ಕೆ 31 ರನ್ ಗಳಿಸಿದ್ದು ಅತ್ಯಂತ ಕಡಿಮೆ ಸ್ಕೋರ್ ಆಗಿದೆ.
50 ರನ್ನಿಗೆ 15 ಓವರ್!ಕೆಕೆಆರ್ 50 ರನ್ ಪೂರ್ತಿಗೊಳಿಸಲು ಭರ್ತಿ 15 ಓವರ್ ತೆಗೆದುಕೊಂಡಿತು. ಇದು ಐಪಿಎಲ್ ಇತಿಹಾಸದಲ್ಲೇ ತಂಡವೊಂದು 50 ರನ್ ಗಳಿಸಲು ತೆಗೆದುಕೊಂಡ ಅತ್ಯಧಿಕ ಓವರ್ ಆಗಿದೆ. 2009ರ ಚೆನ್ನೈ ಎದುರಿನ ಡರ್ಬನ್ ಪಂದ್ಯದಲ್ಲಿ ಪಂಜಾಬ್ 13.1 ಓವರ್ ಆಡಿದ್ದು ಹಿಂದಿನ ದಾಖಲೆ. 30 ರನ್ ಮಾಡಿದ ನಾಯಕ ಮಾರ್ಗನ್ ಕೆಕೆಆರ್‌ನ ಗರಿಷ್ಠ ಸ್ಕೋರರ್. ಫರ್ಗ್ಯುಸನ್ ಔಟಾಗದೆ 19 ರನ್ ಗಳಿಸಿದರು. ಮಾರ್ಗನ್ 300 ಟಿ20
ಈ ಮುಖಾಮುಖೀ ವೇಳೆ ಕೋಲ್ಕತಾ ಕಪ್ತಾನ ಇಯಾನ್ ಮಾರ್ಗನ್ ನೂತನ ಎತ್ತರ ತಲುಪಿದರು. ಇದು ಅವರ 300ನೇ ಟಿ20 ಪಂದ್ಯವಾಗಿತ್ತು. ಈ ಸಾಧನೆಗಾಗಿ ಕೆಕೆಆರ್ ತನ್ನ ನಾಯಕನನ್ನು ಅಭಿನಂದಿಸಿದೆ. ಮಾರ್ಗನ್ ಈ ಸಾಧನೆಗೈದ ಮೂರನೇ ಇಂಗ್ಲೆಂಡ್ ಕ್ರಿಕೆಟಿಗ. ಉಳಿದಿಬ್ಬರೆಂದರೆ ರವಿ ಬೊಪಾರ ಮತ್ತು ಲ್ಯೂಕ್ ರೈಟ್. ಸಿರಾಜ್ ಸೇರ್ಪಡೆ
ಈ ಪಂದ್ಯಕ್ಕಾಗಿ ಆರ್‌ಸಿಬಿ ಒಂದು ಬದಲಾವಣೆ ಮಾಡಿಕೊಂಡಿತು. ಶಾಬಾಜ್ ಅಹ್ಮದ್ ಬದಲು ಮೊಹಮ್ಮದ್ ಸಿರಾಜ್ ಅವರನ್ನು ಆಡಿಸಿತು. ಕೆಕೆಆರ್ ತಂಡದಲ್ಲಿ ಎರಡು ಪರಿವರ್ತನೆ ಸಂಭವಿಸಿತು. ಶಿವಂ ಮಾವಿ ಮತ್ತು ಆ್ಯಂಡ್ರೆ ರಸೆಲ್ ಬದಲು ಪ್ರಸಿದ್ಧ್ ಕೃಷ್ಣ ಮತ್ತು ಟಾಮ್ ಬ್ಯಾಂಟನ್ ಆಡಲಿಳಿದರು. ಸ್ಕೋರ್ ಪಟ್ಟಿ
ಕೋಲ್ಕತಾ ನೈಟ್ ರೈಡರ್
ಶುಭಮನ್ ಗಿಲ್ ಸಿ ಮಾರಿಸ್ ಬಿ ಸೈನಿ 1
ರಾಹುಲ್ ತ್ರಿಪಾಠಿ ಸಿ ಡಿ ವಿಲಿಯರ್ ಬಿ ಸಿರಾಜ್ 1
ನಿತೀಶ್ ರಾಣಾ ಬಿ ಸಿರಾಜ್ 0
ಟಾಮ್ ಬ್ಯಾಂಟನ್ ಸಿ ಡಿ ವಿಲಿಯರ್ ಬಿ ಸಿರಾಜ್ 10
ದಿನೇಶ್ ಕಾರ್ತಿಕ್ ಎಲ್‌ಬಿಡಬ್ಲ್ಯು ಬಿ ಚಹಲ್ 4
ಮಾರ್ಗನ್ ಸಿ ಗುರುಕೀರತ್ ಬಿ ಸುಂದರ್ 30
ಪ್ಯಾಟ್ ಕಮಿನ್ಸ್ ಸಿ ಪಡಿಕ್ಕಲ್ ಬಿ ಚಹಲ್ 4
ಕುದೀಪ್ ಯಾದವ್ ರನೌಟ್ 12
ಲಾಕಿ ಫರ್ಗ್ಯುಸನ್ ಔಟಾಗದೆ 19 ಇತರ 3
ಒಟ್ಟು (20 ಓವರ್‌ಗಳಲ್ಲಿ 8 ವಿಕೆಟಿಗೆ) 84
ವಿಕೆಟ್ ಪತನ: 1-3, 2-3, 3-3, 4-14, 5-32, 6-40, 7-57, 8-84. ಬೌಲಿಂಗ್:
ಕ್ರಿಸ್ ಮಾರಿಸ್ 4-1-16-0
ಮೊಹಮ್ಮದ್ ಸಿರಾಜ್ 4 -2-8-3
ನವದೀಪ್ ಸೈನಿ 3-0-23-1
ಇಸುರು ಉದಾನ 1-0-6-0
ಯಜುವೇಂದ್ರ ಚಹಲ್ 4-0-15-2
ವಾಷಿಂಗ್ಟನ್ ಸುಂದರ್ 4-1-14-1 ರಾಯಲ್ ಚಾಲೆಂಜರ್ ಬೆಂಗಳೂರು
ದೇವದತ್ ಪಡಿಕ್ಕಲ್ ರನೌಟ್ 25
ಆರನ್ ಫಿಂಚ್ ಸಿ ಕಾರ್ತಿಕ್ ಬಿ ಫರ್ಗ್ಯುಸನ್ 16
ಗುರುಕೀರತ್ ಸಿಂಗ್ ಔಟಾಗದೆ 21
ವಿರಾಟ್ ಕೊಹ್ಲಿ ಔಟಾಗದೆ 18 ಇತರ 5
ಒಟ್ಟು (13.3 ಓವರ್‌ಗಳಲ್ಲಿ 2 ವಿಕೆಟಿಗೆ) 85
ವಿಕೆಟ್ ಪತನ:1-46-, 2-46.
ಬೌಲಿಂಗ್: ಪ್ಯಾಟ್ ಕಮಿನ್ಸ್ 3-0-18-0
ಪ್ರಸಿದ್ಧ್ ಕೃಷ್ಣ 2.3-0-20-0
ವರುಣ್ ಚಕ್ರವರ್ತಿ 4-0-28-0
ಲಾಕಿ ಫರ್ಗ್ಯುಸನ್ 4-0-17-1