Advertisement

ಐಪಿಎಲ್‌: ಯುವ ವೇಗಿ ವೈಭವ್‌ ಅರೋರಾ; ವೈಭವದ ಆರಂಭ

10:47 PM Apr 04, 2022 | Team Udayavani |

ಮುಂಬಯಿ: ಚೆನ್ನೈ ವಿರುದ್ಧ ರವಿವಾರ ನಡೆದ ಪಂದ್ಯದಲ್ಲಿ ಪಂಜಾಬ್‌ ಭರ್ಜರಿ ಜಯ ಸಾಧಿಸುವಲ್ಲಿ ಲಿವಿಂಗ್‌ಸ್ಟೋನ್‌ ಅವರಂತೆ ಯುವ ವೇಗಿ ವೈಭವ್‌ ಅರೋರಾ ಪಾತ್ರವೂ ಪ್ರಮುಖವಾಗಿತ್ತು.

Advertisement

ಐಪಿಎಲ್‌ ಪದಾರ್ಪಣ ಪಂದ್ಯ ದಲ್ಲಿಯೇ ವೈಭವ್‌ ಅಮೋಘ ದಾಳಿ ಸಂಘಟಿಸಿ ಚೆನ್ನೈಗೆ ಆರಂಭದಲ್ಲಿಯೇ ಪ್ರಬಲ ಹೊಡೆತ ನೀಡಿದ್ದರು. ಪವರ್‌ ಪ್ಲೇ ಒಳಗಡೆ ಅಪಾಯಕಾರಿ ಆಟಗಾರರಾದ ರಾಬಿನ್‌ ಉತ್ತಪ್ಪ ಮತ್ತು ಮೊಯಿನ್‌ ಅಲಿ ಅವರ ವಿಕೆಟ್‌ ಹಾರಿಸಿ ಚೆನ್ನೈಯ ಬ್ಯಾಟಿಂಗ್‌ ಕ್ರಮಾಂಕದ ಬೆನ್ನೆಲುಬು ಮುರಿಯುವಲ್ಲಿ ವೈಭವ್‌ ಯಶಸ್ವಿಯಾಗಿದ್ದರು. ಅವರು ತಮ್ಮ 4 ಓವರ್‌ಗಳ ದಾಳಿಯಲ್ಲಿ ಕೇವಲ 21 ರನ್‌ ನೀಡಿ 2 ವಿಕೆಟ್‌ ಹಾರಿಸಿ ಪಂಜಾಬ್‌ ಮೇಲುಗೈ ಸಾಧಿಸಲು ನೆರವಾಗಿದ್ದರು.

ವೈಭವ್‌ ದಾಳಿಗೈದ ಇದೇ ಪಿಚ್‌ನಲ್ಲಿ ಈ ಮೊದಲು ಪಂಜಾಬ್‌ನ ಆಟಗಾರರಾದ ಶಿಖರ್‌ ಧವನ್‌, ಲಿವಿಂಗ್‌ಸ್ಟೋನ್‌ ಮತ್ತು ಹೊಸಬ ಜಿತೇಶ್‌ ಶರ್ಮ ಭರ್ಜರಿ ಆಟದ ಪ್ರದರ್ಶನ ನೀಡಿದ್ದರು. ಈ ಪಂದ್ಯದಲ್ಲಿ ಲಿವಿಂಗ್‌ಸ್ಟೋನ್‌ 60 ರನ್‌ ಗಳಿಸಿದ್ದರು.

ವೇಗಿ ಸಂದೀಪ್‌ ಶರ್ಮ ಅವರ ಬದಲಿಗೆ ವೈಭವ್‌ ಅವರನ್ನು ಆಡುವ ಬಳಗಕ್ಕೆ ಆಯ್ಕೆ ಮಾಡಿಕೊಳ್ಳಲಾಗಿತ್ತು. ಇದು ಅನೇಕರ ಹುಬ್ಬೇರಿಸುವಂತೆ ಮಾಡಿತ್ತು. ಆದರೆ ಮೊದಲ ಪಂದ್ಯದಲ್ಲಿಯೇ ಗಮನಾರ್ಹ ನಿರ್ವಹಣೆ ನೀಡುವ ಮೂಲಕ ವೈಭವ್‌ ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಇದನ್ನೂ ಓದಿ: ದೇಶಾದ್ಯಂತ ಅಂಗನವಾಡಿ ಅಭಿವೃದ್ಧಿಗೆ ಕ್ರಮ: ಸಚಿವೆ ಸ್ಮತಿ ಇರಾನಿ

Advertisement

ಬದುಕು ವೈಭವವಾಗಿರಲಿಲ್ಲ
ವೈಭವ್‌ ಅವರ ಆರಂಭಿಕ ಬದುಕು ವೈಭವಯುತವಾಗೇನೂ ಇರಲಿಲ್ಲ. ಪಂಜಾಬ್‌ ತಂಡದಲ್ಲಿ ಆವಕಾಶ ಸಿಗದ ಕಾರಣ ಹಿಮಾಚಲಕ್ಕೆ ತೆರಳಿದ್ದರು. ಪಂಜಾಬ್‌ ಅಂಡರ್‌-19 ಶಿಬಿರಕ್ಕೆ 3 ಬಾರಿ ತೆರಳಿದರೂ ಆಯ್ಕೆ ಆಗಿರಲಿಲ್ಲ. ಹೀಗಾಗಿ ಬೇರೇನಾದರೂ ಉದ್ಯೋಗ ಹುಡುಕಲು ತೊಡಗಿದರು. ಆಗ ವೈಭವ್‌ ಕುಟುಂಬದ ಆರ್ಥಿಕ ಸ್ಥಿತಿ ತೀವ್ರ ಹದಗೆಟ್ಟಿತ್ತು. ತಂದೆಯ ಡೈರಿ ಉದ್ಯಮ ನೆಲಕಚ್ಚಿತ್ತು.

ವೈಭವ್‌ ಹಿಮಾಚಲ ತಂಡ ಸೇರಲು ಕಾರಣರಾದವರು ಕೋಚ್‌ ರವಿ ವರ್ಮ. ಆದರೆ ಅಲ್ಲಿ ಜಿಲ್ಲಾ ಮಟ್ಟದ ಪಂದ್ಯವೊಂದರಲ್ಲಿ 7 ಕ್ಯಾಚ್‌ ಬಿಟ್ಟರು. ಕೋಚ್‌ ಕೆಂಡಾಮಂಡಲವಾದರು. ಇನ್ನು ನನ್ನ ಹತ್ತಿರ ಬರುವುದು ಬೇಡ ಎಂದು ಬೈದು ಕಳಿಸಿದರು. ಈ ರೀತಿ ನಿಂದನೆಗೊಳಗಾದ ವೈಭವ್‌ ಅವರಲ್ಲಿ ಹಠವೊಂದು ಮನೆಮಾಡಿತು. ಕ್ರಿಕೆಟ್‌ನಲ್ಲೇ ಮೇಲೇರಲು ಟೊಂಕ ಕಟ್ಟಿದರು. ಹಿಮಾಚಲ ಅಂಡರ್‌-23 ತಂಡದಲ್ಲಿ ಯಶಸ್ಸು ಸಾಧಿಸಿ ರಣಜಿ ತಂಡಕ್ಕೆ ಕರೆ ಪಡೆದರು. ಸೌರಾಷ್ಟ್ರ ಎದುರಿನ ಮೊದಲ ಪಂದ್ಯದಲ್ಲೇ 9 ವಿಕೆಟ್‌ ಉಡಾಯಿಸಿದರು. ಮೊದಲ ವಿಕೆಟ್‌ ಚೇತೇಶ್ವರ್‌ ಪೂಜಾರ ಅವರದಾಗಿತ್ತು!

2020ರ ಐಪಿಎಲ್‌ ಹರಾಜಿನಲ್ಲಿ ವೈಭವ್‌ ಅನ್‌ಸೋಲ್ಡ್‌ ಆಗಿದ್ದರು. 2021ರಲ್ಲಿ ಕೆಕೆಆರ್‌ 20 ಲಕ್ಷ ರೂ.ಗೆ ಖರೀದಿಸಿತು. ಈ ಬಾರಿ ಪಂಜಾಬ್‌ ಕಿಂಗ್ಸ್‌ 2 ಕೋಟಿ ರೂ. ನೀಡಿ ಬುಟ್ಟಿಗೆ ಹಾಕಿಕೊಂಡಿತು. ಈಗ ವೈಭವ್‌ ಬೆಲೆ ಏನೆಂಬುದು ಅರಿವಿಗೆ ಬರುತ್ತಿದೆ.

 

Advertisement

Udayavani is now on Telegram. Click here to join our channel and stay updated with the latest news.

Next