ಹೊಸದಿಲ್ಲಿ: ಐಪಿಎಲ್ ಪ್ರಿಯರಿ ಗೊಂದು ಸಿಹಿ ಸುದ್ದಿ. 2023ರ ಐಪಿಎಲ್ ಪಂದ್ಯಾವಳಿ ಕೊರೊನಾ ಪೂರ್ವದಲ್ಲಿದ್ದಂತೆ ಹಳೆಯ ಮಾದರಿಗೆ ಮರಳಲಿದೆ. ತವರಿನ ಅಂಗಳ ಹಾಗೂ ಎದುರಾಳಿ ತಂಡದ ತಾಣಗಳೆರಡರಲ್ಲೂ (ಹೋಮ್ ಆ್ಯಂಡ್ ಎವೇ ಫಾರ್ಮೇಟ್) ಪಂದ್ಯಗಳು ನಡೆಯಲಿವೆ ಎಂಬುದಾಗಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ತಿಳಿಸಿದ್ದಾರೆ. ಇದನ್ನು ಆಯಾ ರಾಜ್ಯ ಕ್ರಿಕೆಟ್ ಮಂಡಳಿಗಳಿಗೂ ಸೂಚಿಸಿದ್ದಾರೆ.
2020ರಲ್ಲಿ ಕೋವಿಡ್-19 ತೀವ್ರಗೊಂಡ ಬಳಿಕ ಐಪಿಎಲ್ ಪಂದ್ಯಗಳನ್ನು ಸೀಮಿತ ಕೇಂದ್ರಗಳಲ್ಲಷ್ಟೇ ನಡೆಸಲಾಗುತ್ತಿತ್ತು.
ಈ ಮಾದರಿಯಿಂದಾಗಿ ಕೆಲವು ತಂಡಗಳಿಗೆ ಧಾರಾಳವಾಗಿ ತವರಲ್ಲಿ ಆಡುವ ಅವಕಾಶ ಲಭಿಸುತ್ತಿತ್ತು. ಇನ್ನು ಕೆಲವು ತಂಡಗಳಿಗೆ ಹೋಮ್ ಗ್ರೌಂಡ್‌ನಲ್ಲಿ ಒಂದೂ ಪಂದ್ಯ ಆಡಲಾಗುತ್ತಿರಲಿಲ್ಲ. 2023ರಿಂದ ಈ ವಿಧಾನಕ್ಕೆ ತೆರೆ ಬೀಳಲಿದೆ. ಕೊರೊನಾ ನಿಯಂತ್ರಣದಲ್ಲಿರುವುದರಿಂದ ಇನ್ನು ಪ್ರತೀ ತಂಡಕ್ಕೂ ತವರಿನಂಗಳದಲ್ಲಿ ಹಾಗೂ ಎದುರಾಳಿ ಅಂಗಳದಲ್ಲಿ ಆಡುವ ಅವಕಾಶ ಕಲ್ಪಿಸಲಾಗುವುದು. ಉದಾಹರಣೆಗೆ, ಆರ್‌ಸಿಬಿ-ಕೆಕೆಆರ್ ನಡುವಿನ ಮುಖಾಮುಖೀಯ ಒಂದು ಪಂದ್ಯವನ್ನು ಬೆಂಗಳೂರಿನಲ್ಲಿ, ಇನ್ನೊಂದು ಪಂದ್ಯವನ್ನು ಕೋಲ್ಕತಾದಲ್ಲಿ ಆಡಲಾಗುತ್ತದೆ.
ವನಿತಾ ಐಪಿಎಲ್‌ಗೆ ತಯಾರಿ:
ಬಹು ನಿರೀಕ್ಷೆಯ ವನಿತಾ ಐಪಿಎಲ್ ಪಂದ್ಯಾವಳಿಯನ್ನು 2023ರಲ್ಲಿ ಆರಂಭಿಸುವ ಉದ್ದೇಶ ಬಿಸಿಸಿಐನದ್ದು. ಇದನ್ನು ಪುರುಷರ ಐಪಿಎಲ್‌ಗೂ ಮೊದಲೇ ನಡೆಸುವ ಯೋಜನೆ ಹಾಕಿಕೊಳ್ಳಲಾಗಿದೆ. ದಕ್ಷಿಣ ಆಫ್ರಿಕಾದಲ್ಲಿ ನಡೆಯುವ ವನಿತಾ ಟಿ20 ವಿಶ್ವಕಪ್ ಮುಗಿದ ಕೂಡಲೇ, ಮಾರ್ಚ್ ತಿಂಗಳಲ್ಲಿ ವನಿತಾ ಐಪಿಎಲ್ ಟೂರ್ನಿಯನ್ನು ಆರಂಭಿಸುವ ಬಗ್ಗೆ ಸೌರವ್ ಗಂಗೂಲಿ ಸುಳಿವು ನೀಡಿದ್ದಾರೆ.