ಮುಂಬೈ: ಬಹುಶಃ ಮುಂಬೈ ಇಂಡಿಯನ್ಸ್ ತಂಡದ ಪಾಲಿಗೆ ಇದಕ್ಕಿಂತ ಅವಮಾನಕಾರಿಯಾದ ಅನುಭವ ಇನ್ನೊಂದಿರಲಾರದು. ಅದು ಈ ಬಾರಿ ಐಪಿಎಲ್‌ನಲ್ಲಿ ಸತತ 8 ಪಂದ್ಯ ಸೋತಿದೆ. ಈ ತಂಡ ಪ್ಲೇಆಫ್ ಅವಕಾಶ ಕಳೆದುಕೊಂಡಿದೆ ಎನ್ನುವುದು ಈಗ ಹಳೆಯ ವಿಷಯ. ಇನ್ನದಕ್ಕೆ ಬಾಕಿಯಿರುವುದು 6 ಪಂದ್ಯಗಳು ಮಾತ್ರ. ಇದರಲ್ಲಿ ಎಷ್ಟು ಪಂದ್ಯಗಳನ್ನು ಗೆಲ್ಲುತ್ತದೆ ಎಂದು ಲೆಕ್ಕ ಮಾಡುವಂತಾಗಿದೆ. ಭಾನುವಾರ ಅದು ಲಕ್ನೋ ಸೂಪರ್ ಜೈಂಟ್ಸ್ ಎದುರು 36 ರನ್‌ಗಳಿಂದ ಸೋತುಹೋಯಿತು.
ಮೊದಲು ಬ್ಯಾಟ್ ಮಾಡಿದ ಲಕ್ನೋ ಸೂಪರ್ ಜೈಂಟ್ಸ್ 20 ಓವರ್‌ಗಳಲ್ಲಿ 6 ವಿಕೆಟಿಗೆ 168 ರನ್ನುಗಳನ್ನು ಪೇರಿಸಿತು. ಇದನ್ನು ಬೆನ್ನತ್ತಿದ ಮುಂಬೈ 20 ಓವರ್‌ಗಳಲ್ಲಿ 8 ವಿಕೆಟ್‌ಗಳ ನಷ್ಟಕ್ಕೆ 132 ರನ್‌ಗಳನ್ನು ಗಳಿಸಿತು. ಮುಂಬೈ ಪರ ನಾಯಕ ರೋಹಿತ್ ಶರ್ಮ (39), ತಿಲಕ್ ವರ್ಮ (38) ಮಾತ್ರ ಪರವಾಗಿಲ್ಲ ಎನಿಸಿದರು. ಲಕ್ನೋದ ಕೃಣಾಲ್ ಪಾಂಡ್ಯ 19 ರನ್‌ಗೆ 3 ವಿಕೆಟ್ ಪಡೆದರು.
ರಾಹುಲ್ ಶತಕ: ಮೊದಲು ಬ್ಯಾಟ್ ಮಾಡಿದ ಲಕ್ನೋ ನಾಯಕ ಕೆ.ಎಲ್.ರಾಹುಲ್ ಅಬ್ಬರದ ಶತಕ ಬಾರಿಸಿದರು. ರಾಹುಲ್ ಮತ್ತು ಮನೀಷ್ ಪಾಂಡೆ ಎಚ್ಚರಿಕೆಯ ಆಟವಾಡಿ ಮೊದಲ ಆಘಾತದಿಂದ ತಂಡವನ್ನು ಪಾರು ಮಾಡಲು ಪ್ರಯತ್ನಿಸಿದರು. ಮುಂಬೈ ದಾಳಿಯನ್ನು ದಿಟ್ಟವಾಗಿ ಎದುರಿಸಿದ ಅವರಿಬ್ಬರು ದ್ವಿತೀಯ ವಿಕೆಟಿಗೆ 58 ರನ್ನುಗಳ ಜತೆಯಾಟ ನಡೆಸಿದರು. ಆಬಳಿಕ ತಂಡ ಸ್ಟಾಯಿನಿಸ್, ಕೃಣಾಲ್ ಪಾಂಡ್ಯ ಮತ್ತು ದೀಪಕ್ ಹೂಡಾ ಅವರನ್ನು ಬೇಗನೇ ಕಳೆದುಕೊಂಡ ಕಾರಣ ತಂಡದ ರನ್ ವೇಗ ಕುಸಿಯುವಂತಾಯಿತು. ಸ್ಟಾಯಿನಿಸ್ ಶೂನ್ಯಕ್ಕೆ ಔಟಾದರೆ ಹೂಡಾ 10 ರನ್ ಗಳಿಸಿದರು.
ಕೊನೆ ಹಂತದಲ್ಲಿ ಬಿರುಸಿನ ಆಟವಾಡಿದ ರಾಹುಲ್ ಮತ್ತು ಆಯುಷ್ ಬದೋನಿ ಆರನೇ ವಿಕೆಟಿಗೆ 47 ರನ್ ಪೇರಿಸಿದ್ದರಿಂದ ತಂಡದ ಮೊತ್ತ 150ರ ಗಡಿ ದಾಟುವಂತಾಯಿತು. ಬದೋನಿ 14 ರನ್ ಗಳಿಸಿದರು. ಇದೇ ವೇಳೆ ಕ್ರೀಸ್‌ನ ಒಂದು ಬದಿಯಲ್ಲಿ ಗಟ್ಟಿಯಾಗಿ ನಿಂತಿದ್ದ ರಾಹುಲ್ ಈ ಐಪಿಎಲ್‌ನಲ್ಲಿ ಎರಡನೇ ಶತಕ ಪೂರ್ತಿಗೊಳಿಸಿದರು. 62 ಎಸೆತಗಳಲ್ಲಿ ಅವರು 12 ಬೌಂಡರಿ, 4 ಸಿಕ್ಸರ್ ಸಮೇತ 103 ರನ್ ಬಾರಿಸಿದರು. ರಾಹುಲ್ ಅವರ ಈ ಹಿಂದಿನ ಶತಕ ಮುಂಬೈ ವಿರುದ್ಧವೇ ದಾಖಲಾಗಿತ್ತು.
ಸಂಕ್ಷಿಪ್ತ ಸ್ಕೋರ್: ಲಕ್ನೋ 20 ಓವರ್, 168/6 (ಕೆ.ಎಲ್.ರಾಹುಲ್ 103, ಮನೀಷ್ ಪಾಂಡೆ 22, ರಿಲೀ ಮೆರೆಡಿತ್ 40ಕ್ಕೆ 2). ಮುಂಬೈ 20 ಓವರ್ 132/8 (ರೋಹಿತ್ ಶರ್ಮ 39, ತಿಲಕ್ ವರ್ಮ 38, ಕೃಣಾಲ್ ಪಾಂಡ್ಯ 19ಕ್ಕೆ 3).