Advertisement

ಐಪಿಎಲ್‌ ಅಚ್ಚರಿ: ಬಡವರಿಗೂ ಸಿಗುತ್ತಿದೆ ಕೋಟ್ಯಂತರ ರೂ.!

01:33 PM Feb 25, 2017 | Team Udayavani |

ಇಂಗ್ಲಿಷರ ರಾಬಿನ್‌ಹುಡ್‌ ಕಥೆ ನೂರಾರು ಭಾರತೀಯ ಭಾಷೆಗಳ ಸಿನಿಮಾಗಳ ಆಧಾರಸ್ತಂಭ. ತಾನು ಕದ್ದದ್ದರಲ್ಲಿ ಒಂದು ದೊಡ್ಡ ಪಾಲನ್ನು ಬಡವರಿಗಾಗಿ ಮೀಸಲಿಡುವವರಿಗೆ ಚಪ್ಪಾಳೆಯೇ ಗತಿ! ಶ್ರೀಮಂತರನ್ನು ಶೋಷಿಸಿ ಬಡವರ ಪರವಾಗಿ ನಿಲ್ಲುವ ರಾಬಿನ್‌ಹುಡ್‌ ಪಟ್ಟವನ್ನು ಬಹುಶಃ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿಗೂ ಅನ್ವಯಿಸಬಹುದು. ಬೇರೆ ಜವಾಬ್ದಾರಿಗಳಿಂದ ಹಾಗೂ ಮುಖ್ಯವಾಗಿ, ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಮೂಲಕ ಬಿಸಿಸಿಐ ಇನ್ನೂ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಿರದ, ಹಣಕಾಸಿನ ಸಂಕಷ್ಟ ಕಂಡವರಿಗೂ ಹರಾಜಿನ ಮೂಲಕ ಒಂದು ರಿಲೀಫ್ ಕೊಡಿಸುತ್ತದೆ. ಈ ಬಾರಿಯ ಮೊದಲ ಹಂತದ ಹರಾಜಿನಲ್ಲಿ ಮೂವರು ಇಂಡಿಯನ್‌ ಕ್ಯಾಪ್‌ ಧರಿಸದ ಆಟಗಾರರು ಕೋಟಿ ಕೋಟಿ ರೂ.ಗಳನ್ನು ಬಾಚಿಕೊಂಡಿದ್ದಾರೆ. ಜೈ ಎನ್ನಲು ಇನ್ನೇನು ಬೇಕು?

Advertisement

ಟಿ. ನಟರಾಜನ್‌, ಸಿರಾಜ್‌ ಈಗ ಕೋಟ್ಯಧಿಪತಿ!

20ನೇ ವರ್ಷದವರೆಗೆ ಟೆನಿಸ್‌ ಬಾಲ್‌ ಕ್ರಿಕೆಟ್‌ ಮಾತ್ರ ಆಡಿ ಗೊತ್ತಿದ್ದ ನಟರಾಜನ್‌ ಚೆನ್ನೈನ 4ನೇ ಡಿವಿಷನ್‌ ಕ್ರಿಕೆಟ್‌ ಮೂಲಕ ಪ್ರಥಮ ದರ್ಜೆಗೆ ಹತ್ತಿರವಾದರು. 2015-16ರಿಂದ ರಣಜಿಗೂ ಪದಾರ್ಪಣೆ ಮಾಡಿದ್ದಾರೆ. 28 ವರ್ಷದ ಈತ ತಮಿಳುನಾಡು ಪ್ರೀಮಿಯರ್‌ ಲೀಗ್‌ನಲ್ಲಿ ಪಡೆದ 10 ವಿಕೆಟ್‌, ಅದಕ್ಕಿಂತ ಮುಖ್ಯವಾಗಿ ಬೇಕಾದಾಗಲೆಲ್ಲ ಯಾರ್ಕರ್‌ ಹಾಕುವ ಸಾಮರ್ಥ್ಯ ಅವರತ್ತ ನೋಡುವಂತಾಗಿದೆ. ತಮ್ಮ ಅಸ್ತ್ರವನ್ನು ಅವರು ಐಪಿಎಲ್‌ನಲ್ಲಿ ಸಮರ್ಥವಾಗಿ ಬಳಕೆ ಮಾಡುವುದೊಂದು ಬಾಕಿಯಿದೆ. ಅಲ್ಲದೆ ರಾಜಸ್ಥಾನದ ಆಟೋ ಚಾಲಕನ ಪುತ್ರ ಮೊಹಮ್ಮದ್‌ ಸಿರಾಜ್‌ ಕೂಡ ಸನ್‌ರೈಸರ್ ಹೈದ್ರಾಬಾದ್‌ ತಂಡಕ್ಕೆ ಮಾರಾಟವಾಗಿ ಅಚ್ಚರಿ ಮೂಡಿಸಿದ್ದಾರೆ. 

ರಾಜಾಸ್ತಾನದ ಎಡಗೈ ವೇಗಿ, 27 ವರ್ಷದ ಅನಿಕೇತ್‌ ಚೌಧರಿ ಭಾರತದ ಅಸಲಿ ವೇಗಿಗಳ ಕೊರತೆಯಲ್ಲಿ ಒಂದು ಆಶಾಕಿರಣದಂತೆ ಕಾಣಿಸುತ್ತಾರೆ. ಮೊನ್ನೆ ಅವರಿಗೆ ಭಾರತೀಯ ಕ್ರಿಕೆಟ್‌ನ ನೆಟ್‌ ಪ್ರಾಕ್ಟೀಸ್‌ನ ವೇಳೆ ಬೌಲ್‌ ಮಾಡಲು ಆಹ್ವಾನ ಸಿಕ್ಕಿತ್ತು. ಆಸ್ಟ್ರೇಲಿಯಾದ ಮೈಕೆಲ್‌ ಸ್ಟಾರ್ಕ್‌ ಎದುರಿಸಲು ಅನುಕೂಲವಾಗುತ್ತದೆ ಎಂಬ ಕಾರಣ ಆಹ್ವಾನದ ಹಿಂದಿತ್ತಂತೆ. 39 ಪ್ರಥಮ ದರ್ಜೆ ಪಂದ್ಯದಲ್ಲಿ 121 ವಿಕೆಟ್‌ ಪಡೆದಿರುವ ಅನಿಕೇತ್‌ ಕಚ್ಚಾ ಪ್ರತಿಭೆಯೇನಲ್ಲ. ಇತ್ತೀಚೆಗೆ ನಡೆದ ಸೈಯದ್‌ ಮುಷ್ತಾಕ್‌ ಆಲಿ ಟಿ20 ಪಂದ್ಯಾವಳಿಯಲ್ಲಿ ಕೇಂದ್ರ ವಲಯದ ಪರ ಆಡಿರುವ ಅನಿಕೇತ್‌ 4 ಪಂದ್ಯದಿಂದ ಆರು ವಿಕೆಟ್‌ ಪಡೆದಿದ್ದಾರೆ. ಇವೆಲ್ಲ ಹರಾಜು ಟೇಬಲ್‌ ಮೇಲೆ ಕುಳಿತವರ ಗಮನದಲ್ಲಿರುತ್ತದೆ ಎಂಬುದು ಓದುಗ ದೊರೆಯ ಗಮನದಲ್ಲಿರಲಿ!

ಕಳೆದ ವರ್ಷ ಡೆಲ್ಲಿ ಡೇರ್‌ಡೆವಿಲ್ಸ್‌ 10 ಲಕ್ಷ ರೂ. ಮೂಲಬೆಲೆಯ ಪವನ್‌ ನೇಗಿಯವರನ್ನು ಬರೋಬ್ಬರಿ 8.5 ಕೋಟಿಗೆ ಹರಾಜು ಹಿಡಿದಿತ್ತು. ಇದು ಹೈದರಾಬಾದ್‌ನ ಸನ್‌ರೈಸರ್ ಯುವರಾಜ್‌ಸಿಂಗ್‌ರಿಗೆ ತೆತ್ತ ಬೆಲೆಗಿಂತ ಹೆಚ್ಚು! ಈ ಬಾರಿ ಹಲವು ನೇಗಿಗಳು ಸೃಷ್ಟಿಯಾಗಿದ್ದಾರೆ. ಫ್ರಾಂಚೈಸಿಗಳು ದಡ್ಡರಲ್ಲ. ಅವರು ಹರಾಜಿಗೆ ಕೂರುವ ಮುನ್ನ ಕೂಗಬಹುದಾದ ಬೆಲೆ ಸಂಬಂಧ ತಜ್ಞರ ತಂಡದ ವಿಶ್ಲೇಷಣೆಗಳನ್ನು ಪಡೆದಿರುತ್ತವೆ. ತಮ್ಮ ಅಗತ್ಯಗಳಿಗೆ ಹೊಂದಬಹುದಾದ ಆಟಗಾರರ ಪಟ್ಟಿ, ಅವರಿಗೆ ಬಿಡ್‌ ಮಾಡಬಹುದಾದ ಗರಿಷ್ಠ ಬೆಲೆ ಬಗ್ಗೆ ಅವರಿಗೆ ಅಂದಾಜು ಇರುತ್ತದೆ. ಅರ್ಥ ಇಷ್ಟೇ, ಕೇವಲ 10 ಲಕ್ಷ ಮೂಲ ಬೆಲೆಯ ಆಟಗಾರರಿಗೆ ಕೋಟಿ ದಾಟಿದ ಮೌಲ್ಯ ಬಂದಿದೆ ಎಂದರೆ ಅವರು ಆ ಮೊತ್ತಕ್ಕೆ ಅರ್ಹರಾಗಿದ್ದಾರೆ ಎಂದು. ಅವರ ಆಟ ಅದನ್ನು ಸಮರ್ಥಿಸುವಂತಿರಬೇಕಷ್ಟೇ.

Advertisement

ರಾಜ್ಯದ ಗೌತಮ್‌ ಅದೃಷ್ಟಶಾಲಿ

ಆಲ್‌ರೌಂಡರ್‌ ಟ್ಯಾಗ್‌ ಪಡೆದಿರುವ ಗೌತಮ್‌ 2012ಕ್ಕೇ ಪ್ರಥಮ ದರ್ಜೆಗೆ ಬಂದವರು. ಆಡಿದ 3 ಪಂದ್ಯದಲ್ಲಿ 18 ವಿಕೆಟ್‌. ಒಟ್ಟಾರೆ 12 ಪಂದ್ಯದಲ್ಲಿ 36 ವಿಕೆಟ್‌. ಆಡಿರುವ 20 ಟಿ20ಯಲ್ಲಿ 16 ವಿಕೆಟ್‌. ಇವೆಲ್ಲ ಅಂಕಿಅಂಶಗಳಿಗೆ ಹೊರತಾಗಿ ಮೊನ್ನೆ ಮೊನ್ನೆ ಆಸ್ಟ್ರೇಲಿಯಾ ತಂಡದ ಎದುರು ಮುಂಬೈ ಅಭ್ಯಾಸ ಪಂದ್ಯದಲ್ಲಿ ಬಿರುಸಿನ 74 ರನ್‌ ಬಾರಿಸಿದ್ದು, ಕಾಂಗರೂ ಸ್ಪಿನ್ನರ್‌ಗಳಾದ ನಥಾನ್‌ ಲಿಯಾನ್‌ ಹಾಗೂ ಸ್ಟೀಫ‌ನ್‌ ಓ ಕೆಫಿ ಅವರನ್ನು ಲೀಲಾಜಾಲವಾಗಿ ಎದುರಿದ್ದು ಗಮನ ಸೆಳೆದಿತ್ತು. ತಮ್ಮೂರಿನ ಒಂದು ಪಂದ್ಯದ ಪ್ರದರ್ಶನವನ್ನು ನೋಡಿ ಮುಂಬೈ ಇಂಡಿಯನ್‌ 2 ಕೋಟಿ ಬಿಡ್‌ ಮಾಡಿದರೇ? ಇಲ್ಲ, ಗೌತಮ್‌ ವಲಯ ಟಿ20 ಪಂದ್ಯಾವಳಿಯಲ್ಲಿ ಮೂರನೇ ಕ್ರಮಾಂಕದಲ್ಲಿ ಬಂದು 166.66ರ ಸ್ಟ್ರೈಕ್‌ ರೇಟ್‌ನಲ್ಲಿ ರನ್‌ ಚಚ್ಚಿದ್ದು, 7ರ ಆಸುಪಾಸು ಸರಾಸರಿಯಲ್ಲಿ ರನ್‌ ನೀಡಿದ್ದು… ಕೂಡ ಪರಿಗಣನೆಗೆ ಬಂದಿರುತ್ತದೆ.

ಗರಿಷ್ಠ ಬೆಲೆ ಕೊಡುವುದರ ಹಿಂದಿನ ಗುಟ್ಟು

ಐಪಿಎಲ್‌ ಆಡುವ 11ರ ತಂಡವೊಂದು ಪರಮಾವಧಿ ನಾಲ್ವರು ವಿದೇಶಿ ಆಟಗಾರರನ್ನಷ್ಟೇ ಹೊಂದಬಹುದು. ಈ ಉಳಿದ 7 ಭಾರತೀಯ ಆಟಗಾರರಿರುವಾಗ, ಅವರಲ್ಲಿ ಅಂತಾರಾಷ್ಟ್ರೀಯ ಆಟಗಾರರ ಹೊರತಾದವರೂ ಕೂಡ ಪಂದ್ಯ ಗೆಲ್ಲಿಸಬಲ್ಲ ಭರವಸೆ ಇದ್ದವರಿಗೆ ಹೆಚ್ಚು ಆದ್ಯತೆ ನೀಡಲಾಗುತ್ತದೆ. ಹಾಗಾಗಿಯೇ ಆಲ್‌ರೌಂಡರ್‌ ಅಥವಾ ವಿಶೇಷ ಟಿ20 ಸಾಮರ್ಥ್ಯ ಇದ್ದವರಿಗೆ ಹೆಚ್ಚಿನ ಬಿಡ್‌ ಮಾಡಲಾಗುತ್ತದೆ. ಟಿ. ನಟರಾಜನ್‌ಗೆ ಮೂರು ಕೋಟಿ, ಅನಿಕೇತ್‌ ಚೌಧರಿಗೆ ಎರಡು ಕೋಟಿ ದರ ನಿಗದಿಯಾಗಲು ಈ ಲೆಕ್ಕಾಚಾರಗಳೂ ಕಾರಣವಾಗುತ್ತವೆ.

ಬೌಲರ್‌ಗಳ ಆಯ್ಕೆಗೆ ಕಾರಣ
ಟಾಪ್‌ 10 ಹರಾಜಿನಲ್ಲಿ ಬೌಲರ್‌ಗಳೇ ಮಾರಾಟವಾಗುತ್ತಾರೆ ಎಂಬುದರ ಹಿಂದೆ ಪಿಚ್‌ ಮಹಾತೆ¾ಯಿದೆ. ಒಂದು ಟಿ20 ಪಂದ್ಯದಲ್ಲಿ ಇಬ್ಬರು ಬೌಲರ್‌ ರನ್‌ ಮಿತವ್ಯಯ ಸಾಧಿಸಿದರು ಎಂದರೆ ಆ ತಂಡ ಪಂದ್ಯದ ಮೇಲೆ ಹಿಡಿತ ಸಾಧಿಸುತ್ತದೆ. ಇಲ್ಲಿನ ಫ್ಲಾಟ್‌ ಪಿಚ್‌ ಮೇಲೆ ಹರ್ಭಜನ್‌ ಸಿಂಗ್‌ ಬಿಡಿ, ಮಣೀಂದರ್‌ ಸಿಂಗ್‌ ಕೂಡ ರನ್‌ ಮಳೆ ಸುರಿದುಬಿಟ್ಟಾರು! ಈ ಬೌಲರ್‌ ಆದ್ಯತೆಯ ಪಾಲಿಸಿಯ ಕಾರಣದಿಂದ ಉಮರ್‌ ನಾಜಿರ್‌ ಐಪಿಎಲ್‌ ಹರಾಜಿನಲ್ಲಿ ಬಿಕರಿಯಾಗಿದ್ದಾರೆ. ಈ ವೇಗಿ ವಲಯ ಟಿ20ಯಲ್ಲಿ 11 ವಿಕೆಟ್‌ ಪಡೆದು ದ್ವಿತೀಯ ಸ್ಥಾನ ಪಡೆದಿದ್ದರು.

ದೆಹಲಿಯ 21 ವರ್ಷದ ಮೋಹಿತ್‌ ಅಲಾವತ್‌ ಟಿ20ಯ ಸ್ಥಳೀಯ ಪಂದ್ಯವೊಂದರಲ್ಲಿ 72 ಎಸೆತದಲ್ಲಿ 300 ರನ್‌ ಹೊಡೆದು ಅಬ್ಬರಿಸಿದ್ದರು. ಇದು ಟಿ20 ಮಾದರಿಯಲ್ಲಿ ಅತಿ ಹೆಚ್ಚಿನ ಮೊತ್ತ. ಇದೇ ಲೆಕ್ಕಾಚಾರದಲ್ಲಿ ಈ ಬಾರಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ ಮೋಹಿತ್‌ ಮಾರಾಟವಾಗಿದ್ದಾರೆ. ಈತ ವಿಕೆಟ್‌ ಕೀಪರ್‌ ಎಂಬುದು ಬೋನಸ್‌. ಇದೇ ರೀತಿ ಮುಂಬೈನ 17 ವರ್ಷದ ಆರಂಭಿಕ ಬ್ಯಾಟ್ಸ್‌ಮನ್‌ ಪೃಥ್ವಿ ಶಾ ಅವರ ಅದೃಷ್ಟ ಕೂಡ ಖುಲಾಯಿಸಿದೆ. 2013ರ ಹ್ಯಾರಿಸ್‌ ಶೀಲ್ಡ್‌ ಪಂದ್ಯಾವಳಿಯಲ್ಲಿ ಈತ ಗಳಿಸಿದ್ದ 546 ರನ್‌ 1901ರಿಂದ ಆರಂಭವಾದ ಸದರಿ ಟೂರ್ನಿಯಲ್ಲಿಯ ಅತ್ಯಧಿಕ ಸ್ಕೋರ್‌ನ ದಾಖಲೆ ಇವರ ಬೆನ್ನಿಗಿದೆ.

ದುಬಾರಿ ರನ್‌!
ಐಪಿಎಲ್‌ ಹರಾಜು ಪ್ರಕ್ರಿಯೆಯಲ್ಲಿ ಒಂದು ವರ್ಷ ಯುವರಾಜ್‌ಸಿಂಗ್‌ ಪಡೆದ ಹಣದ ಲೆಕ್ಕದಲ್ಲಿ ಅವರ ರನ್‌ಗಳು ಎದುರಾಳಿಗಳಿಗಿಂತ ಅವರ ಮಾತೃ ತಂಡಕ್ಕೆ ದುಬಾರಿಯಾದ ಉದಾಹರಣೆಯಿತ್ತು. ಇದೇ ಕಥೆ ಕಳೆದ ವರ್ಷ 8.5 ಕೋಟಿಗೆ ಖರೀದಿಯಾದ ಪವನ್‌ ನೇಗಿ ವಿಚಾರದಲ್ಲೂ ಘೋರ ಸತ್ಯವಾಗಿತ್ತು. 
ಒಟ್ಟಾರೆ ಐಪಿಎಲ್‌ನಲ್ಲಿ ಪವನ್‌ ನೇಗಿ ಸಾಧನೆ ಗಮನಸೆಳೆಯುವಂತಿಲ್ಲ. 29 ಪಂದ್ಯ, 19 ಇನಿಂಗ್ಸ್‌, 7 ನಾಟ್‌ಔಟ್‌, 209 ರನ್‌. 36 ಗರಿಷ್ಠ. ಬೌಲಿಂಗ್‌ನಲ್ಲಿ 24 ಪಂದ್ಯದಿಂದ 14 ವಿಕೆಟ್‌. ಓವರ್‌ಗೆ 8.2 ರನ್‌ ಕೊಡುವ ಧಾರಾಳಿ. 8.5 ಕೋಟಿಗೆ ಹರಾಜಾದ ನೇಗಿ ಆಡಿದ 8 ಪಂದ್ಯಗಳಲ್ಲಿ ಗಳಿಸಿದ್ದು ಬರೋಬ್ಬರಿ 57 ರನ್‌, ಗರಿಷ್ಠ ಅಜೇಯ 19. 54 ರನ್‌ಗೆ 84 ರನ್‌ ಕೊಟ್ಟು ಬೆಂಗಳೂರು ವಿರುದ್ಧ ಏಕೈಕ ವಿಕೆಟ್‌ ಪಡೆದರು. ಅದೃಷ್ಟಕ್ಕೆ ಇಶಾಂತ್‌ ಶರ್ಮ, ಇರ್ಫಾನ್‌ ಪಠಾಣ್‌ರಂತೆ ಮಾರಾಟವಾಗದೆ ಉಳಿದಿಲ್ಲ. ಅವರನ್ನು ಈ ಬಾರಿ ಆರ್‌ಸಿಬಿ 1 ಕೋಟಿಗೆ ಖರೀದಿಸಿದೆ. ಬೆಲೆಯಲ್ಲಿ ಕೇವಲ 7.5 ಕೋಟಿ ರೂ. ಕುಸಿತ! ಕಳೆದ ಬಾರಿ ನೇಗಿಯವರ ಪ್ರತಿ ರನ್‌ಗೆ ಡೆಲ್ಲಿ ಡೇರ್‌ಡೆವಿಲ್ಸ್‌ಗೆ 14,91,228 ರೂ. ಹೊರೆ ಬಿದ್ದಿತ್ತು!!

ಮಾ.ವೆಂ.ಸ.ಪ್ರಸಾದ್‌

Advertisement

Udayavani is now on Telegram. Click here to join our channel and stay updated with the latest news.

Next