Advertisement
ಆರ್ ಸಿಬಿ 7 ವಿಕೆಟಿಗೆ 241 ರನ್ ಪೇರಿಸಿ ಸವಾಲೊಡ್ಡಿತು. ಗುರಿ ಬೆನ್ನಟ್ಟಿದ ಪಂಜಾಬ್ 17 ಓವರ್ ಗಳಲ್ಲಿ 181 ರನ್ ಗಳಿಗೆ ಆಲೌಟಾಯಿತು. ಇದು ಅರ್ ಸಿಬಿ 12 ನೇ ಪಂದ್ಯದಲ್ಲಿ ಸಾಧಿಸಿದ 5 ನೇ ಜಯವಾಗಿದೆ. ಪಂಜಾಬ್ 12 ನೇ ಪಂದ್ಯದಲ್ಲಿ 8 ನೇ ಸೋಲು ಅನುಭವಿಸಿತು.
Related Articles
Advertisement
ಬ್ಯಾಟಿಂಗ್‌ಗೆ ಇಳಿಸಲ್ಪಟ ಆರ್‌ಸಿಬಿ ಪವರ್ ಪ್ಲೇ ಅವಧಿಯಲ್ಲಿ 2 ವಿಕೆಟ್ ಕಳೆದುಕೊಳ್ಳುವುದರ ಜತೆಗೆ 3 ಜೀವದಾನವನ್ನೂ ಗಳಿಸಿತು. ಎರಡೂ ವಿಕೆಟ್ ಕರ್ನಾಟಕದವರಾದ ವಿದ್ವತ್ ಕಾವೇರಪ್ಪ ಪಾಲಾದರೆ, 3 ಲೈಫ್ ಕೂಡ ಇವರ ಎಸೆತಗಳಲ್ಲೇ ಲಭಿಸಿತು. 6 ಓವರ್ ಮುಕ್ತಾಯಕ್ಕೆ ಆರ್‌ಸಿಬಿ 2 ವಿಕೆಟಿಗೆ 56 ರನ್ ಮಾಡಿತು. ಮೊದಲು ನಾಯಕ ಫಾ ಡು ಪ್ಲೆಸಿಸ್ (9), ಬಳಿಕ ಬಿಗ್ ಹಿಟ್ಟರ್ ವಿಲ್ ಜಾಕ್ಸ್ (12) ಪೆವಿಲಿಯನ್ ಸೇರಿಕೊಂಡರು.
ವಿರಾಟ್ ಕೊಹ್ಲಿ-ರಜತ್ ಪಾಟಿದಾರ್ ಜತೆಗೂಡಿದ ಬಳಿಕ ಆರ್‌ಸಿಬಿ ರನ್ ಗತಿಯಲ್ಲಿ ದೊಡ್ಡ ಮಟ್ಟದ ಏರಿಕೆ ಕಂಡುಬಂತು. ಪಾಟಿದಾರ್ ಅವರಂತೂ ಮುನ್ನುಗ್ಗಿ ಬಾರಿಸತೊಡಗಿದರು. ಈ ಹಂತದಲ್ಲಿ ಕಾವೇರಪ್ಪ ಕೂಡ ದಂಡಿಸಿ ಕೊಂಡರು. 3ನೇ ವಿಕೆಟಿಗೆ 76 ರನ್ ಒಟ್ಟು ಗೂಡಿತು. ಇದರಲ್ಲಿ ಪಾಟಿದಾರ್ ಪಾಲೇ 55 ರನ್. ಅವರು 21 ಎಸೆತಗಳಲ್ಲಿ ಅರ್ಧ ಶತಕ ಪೂರ್ತಿಗೊಳಿಸಿದರು. ಒಟ್ಟು 23 ಎಸೆತ ನಿಭಾಯಿಸಿದ ಪಾಟಿದಾರ್, 6 ಸಿಕ್ಸರ್ ಹಾಗೂ 3 ಬೌಂಡರಿ ಬಾರಿಸಿ ಅಬ್ಬರಿಸಿದರು.
ಪಾಟಿದಾರ್ ಪರಾಕ್ರಮಇದು ಪ್ರಸಕ್ತ ಸೀಸನ್‌ನಲ್ಲಿ ಬೆಂಗಳೂರಿ ನಾಚೆಯ ಪಂದ್ಯಗಳಲ್ಲಿ ರಜತ್ ಪಾಟಿದಾರ್ ಬಾರಿಸಿದ ಸತತ 4ನೇ ಅರ್ಧ ಶತಕ. ಸಿಎಸ್‌ಕೆ ವಿರುದ್ಧ ಚೆನ್ನೈಯಲ್ಲಿ ಶೂನ್ಯಕ್ಕೆ ಔಟಾದ ಬಳಿಕ ಮುಂಬಯಿಯಲ್ಲಿ 50, ಕೋಲ್ಕತಾದಲ್ಲಿ 52, ಹೈದರಾಬಾದ್‌ನಲ್ಲಿ 50 ಹಾಗೂ ಇದೀಗ ಧರ್ಮಶಾಲಾದಲ್ಲಿ 55 ರನ್ ಬಾರಿಸಿದ ಹೆಗ್ಗಳಿಕೆ ಪಾಟಿದಾರ್ ಅವರದು. ಆಲಿಕಲ್ಲು ಮಳೆ!
ಅರ್ಧ ಹಾದಿ ಪೂರ್ತಿಗೊಳ್ಳಲು ಇನ್ನೇನು ಒಂದು ಎಸೆತ ಇರುವಾಗ ಸ್ಯಾಮ್ ಕರನ್ ದೊಡ್ಡ ಬೇಟೆ ಮೂಲಕ ಪಾಟಿದಾರ್ ಅವರನ್ನು ವಾಪಸ್ ಕಳುಹಿಸಲು ಯಶಸ್ವಿಯಾದರು. ಅಲ್ಲಿಗೆ ಆಲಿಕಲ್ಲು ಮಳೆ ಆರಂಭಗೊಂಡಿತು. ಇದರಿಂದ ಪಂದ್ಯಕ್ಕೆ ಅರ್ಧ ಗಂಟೆಗೂ ಹೆಚ್ಚು ಕಾಲ ಅಡಚಣೆಯಾಯಿತು. 10 ಓವರ್ ಅಂತ್ಯಕ್ಕೆ ಆರ್‌ಸಿಬಿ 3 ವಿಕೆಟಿಗೆ 119 ರನ್ ಮಾಡಿತ್ತು. ಕೊಹ್ಲಿ 42 ರನ್ ಮಾಡಿ ಆಡುತ್ತಿದ್ದರು. ಕೊಹ್ಲಿಗೆ ಸೆಂಚುರಿ ಮಿಸ್!
ಆರ್‌ಸಿಬಿಯ ದ್ವಿತೀಯಾರ್ಧ ವಿರಾಟ್ ಕೊಹ್ಲಿ ಅವರ ಆರ್ಭಟಕ್ಕೆ ಮೀಸಲಾಯಿತು. ಮಳೆ ನಿಂತ ಬಳಿಕ ಕೊಹ್ಲಿ-ಕ್ಯಾಮರಾನ್ ಗ್ರೀನ್ ಜೋಡಿಯ ರನ್ ಮಳೆ ಮೊದಲ್ಗೊಂಡಿತು. ಪಂಜಾಬ್ ಬೌಲಿಂಗ್ ದಿಕ್ಕು ತಪ್ಪಿತು. ಸರಿಯಾಗಿ 17 ಓವರ್ ಅಂತ್ಯಕ್ಕೆ ಆರ್‌ಸಿಬಿ ಮೊತ್ತ ಇನ್ನೂರರ ಗಡಿ ಮುಟ್ಟಿತು. ಆಗ ಕೊಹ್ಲಿ ಮೇಲೆ ಸೆಂಚುರಿಯ ದಟ್ಟ ನಿರೀಕ್ಷೆ ಇತ್ತು. ಅಭಿಮಾನಿಗಳೆಲ್ಲ ಈ ಕ್ಷಣಕ್ಕಾಗಿ ತುದಿಗಾಲಲ್ಲಿ ನಿಂತಿದ್ದರು. ಆದರೆ ಅರ್ಷದೀಪ್ ಇದಕ್ಕೆ ಅಡ್ಡಗಾಲಿಕ್ಕಿದರು. ಕೊಹ್ಲಿ ಆಟ 92ಕ್ಕೆ ಕೊನೆಗೊಂಡಿತು. 47 ಎಸೆತಗಳ ಈ ಸೊಗಸಾದ ಬ್ಯಾಟಿಂಗ್ ವೇಳೆ 6 ಸಿಕ್ಸರ್, 7 ಬೌಂಡರಿ ಬಾರಿಸಿದರು. ಕೊಹ್ಲಿ ಐಪಿಎಲ್‌ನಲ್ಲಿ “ನೈಂಟೀಸ್’ನಲ್ಲಿ ಔಟಾದ 2ನೇ ನಿದರ್ಶನ ಇದಾಗಿದೆ. 2013ರಲ್ಲಿ ಡೆಲ್ಲಿ ವಿರುದ್ಧ 99ಕ್ಕೆ ಔಟಾಗಿದ್ದರು. ಕೊಹ್ಲಿ-ಗ್ರೀನ್ ಜೋಡಿಯಿಂದ 46 ಎಸೆತಗಳಲ್ಲಿ 92 ರನ್ ಹರಿದು ಬಂತು.
38ಕ್ಕೆ 3 ವಿಕೆಟ್ ಕಿತ್ತ ಹರ್ಷಲ್ ಪಟೇಲ್ ಪಂಜಾಬ್‌ನ ಯಶಸ್ವಿ ಬೌಲರ್. ಅವರು ಈ ಮೂರೂ ವಿಕೆಟ್‌ಗಳನ್ನು ಅಂತಿಮ ಓವರ್‌ನಲ್ಲಿ ಉದುರಿಸಿದರು! ಕೊಹ್ಲಿ ವಿಶಿಷ್ಟ ಸಾಧನೆ
ಈ ಬ್ಯಾಟಿಂಗ್ ಆರ್ಭಟದ ವೇಳೆ ಕೊಹ್ಲಿ ಪಂಜಾಬ್ ವಿರುದ್ಧ ಸಾವಿರ ರನ್ ಪೂರ್ತಿಗೊಳಿಸಿದರು. ಇದರೊಂದಿಗೆ ಐಪಿಎಲ್‌ನಲ್ಲಿ ಅತೀ ಹೆಚ್ಚು 3 ತಂಡಗಳ ವಿರುದ್ಧ ಸಾವಿರ ರನ್ ಬಾರಿಸಿದ ಮೊದಲ ಆಟಗಾರನೆಂಬ ದಾಖಲೆ ಸ್ಥಾಪಿಸಿದರು. ಇದಕ್ಕೂ ಮುನ್ನ ಚೆನ್ನೈ ಮತ್ತು ಡೆಲ್ಲಿ ವಿರುದ್ಧವೂ ಕೊಹ್ಲಿ ಸಹಸ್ರ ರನ್ ಬಾರಿಸಿದ್ದರು. ರೋಹಿತ್ ಶರ್ಮ ಮತ್ತು ಡೇವಿಡ್ ವಾರ್ನರ್ 2 ತಂಡಗಳ ವಿರುದ್ಧ ಈ ಸಾಧನೆಗೈದಿದ್ದಾರೆ. ಆರ್‌ಸಿಬಿ ದಾಖಲೆ ಮುರಿದ ಪಂಜಾಬ್
ಐಪಿಎಲ್‌ನಲ್ಲಿ ಪಂಜಾಬ್ ಎದುರಾಳಿಗೆ ಅತ್ಯಧಿಕ 29 ಸಲ 200 ಪ್ಲಸ್ ರನ್ ಬಿಟ್ಟುಕೊಟ್ಟ “ದಾಖಲೆ’ ಸ್ಥಾಪಿಸಿತು. ಈ ಸಂದರ್ಭದಲ್ಲಿ ಆರ್‌ಸಿಬಿ ದಾಖಲೆ ಪತನಗೊಂಡಿತು (28).