ಮುಲ್ಲಾನ್‌ಪುರ್: ರವಿವಾರದ ಎರಡನೇ ಐಪಿಎಲ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಗುಜರಾತ್ ಟೈಟಾನ್ಸ್ 3 ವಿಕೆಟ್ ಗಳ ಜಯ ಸಾಧಿಸಿದೆ.
ಸಾಯಿ ಕಿಶೋರ್ ಮತ್ತು ರಶೀದ್ ಖಾನ್ ಅವರ ಬಿಗು ದಾಳಿಯಿಂದಾಗಿ ರನ್ ಗಳಿಸಲು ಒದ್ದಾಡಿದ ಪಂಜಾಬ್ ಕಿಂಗ್ಸ್ ತಂಡವು 20 ಓವರ್‌ಗಳಲ್ಲಿ 142 ರನ್ನಿಗೆ ಆಲೌಟಾಯಿತು. ಗುರಿ ಬೆನ್ನಟ್ಟಿದ ಗುಜರಾತ್ 19.1 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 146 ರನ್ ಗಳಿಸಿ ಜಯ ಸಾಧಿಸಿತು.
ಸಾಹ 13, ಗಿಲ್ 35, ಸಾಯಿ ಸುದರ್ಶನ್ 31, ಮಿಲ್ಲರ್ 4, ಅಜ್ಮತುಲ್ಲಾ ಒಮರ್ಜಾಯ್ 13, ರಾಹುಲ್ ತೆವಾಟಿಯಾ ಔಟಾಗದೆ 36, ಶಾರುಖ್ ಖಾನ್ 8 ರನ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಪಂಜಾಬ್ ಬೌಲಿಂಗ್ ನಲ್ಲಿ ಬಿಗಿ ದಾಳಿ ನಡೆಸಿದ ಹರ್ಷಲ್ ಪಟೇಲ್ 3 ವಿಕೆಟ್ ಪಡೆದರು. ಲಿಯಾಮ್ ಲಿವಿಂಗ್ಸ್ಟೋನ್ 2 ವಿಕೆಟ್ ಪಡೆದರು.
ಈ ಋತುವಿನಲ್ಲಿ ಪವರ್‌ಪ್ಲೇ ವೇಳೆ ಪಂಜಾಬ್ ತಂಡದ ಬ್ಯಾಟಿಂಗ್ ಅತ್ಯಂತ ಕಳಪೆ ಮಟ್ಟದಲ್ಲಿತ್ತು. ಆದರೆ ಈ ಬಾರಿ ವಿಕೆಟ್ ಕಳೆದುಕೊಳ್ಳದಂತೆ ನೋಡಿಕೊಂಡ ಪಂಜಾಬ್ ಮೊದಲ 5 ಓವರ್‌ಗಳಲ್ಲಿ 45 ರನ್ ಗಳಿಸಿತ್ತು. ಆದರೆ ಮೂವರು ಸ್ಪಿನ್ನರ್‌ಗಳಾದ ಸಾಯಿ ಕಿಶೋರ್, ರಶೀದ್ ಮತ್ತು ನೂರ್ ಅಹ್ಮದ್ ಅವರು ದಾಳಿಗೆ ಇಳಿದ ಬಳಿಕ ಪಂಜಾಬ್ ಕುಸಿಯತೊಡಗಿತು. ರನ್ನಿಗಾಗಿ ಪರದಾಡಿದ ಪಂಜಾಬ್ ಆಗಾಗ್ಗೆ ವಿಕೆಟ್ ಕಳೆದುಕೊಳ್ಳುತ್ತ ಮುಗ್ಗರಿಸಿತು.
ಇಷ್ಟರವರೆಗಿನ ಪಂದ್ಯದಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಲು ಒದ್ದಾಡಿದ್ದ ಪ್ರಭ್‌ಸಿಮ್ರಾನ್ ಸಿಂಗ್ ಈ ಪಂದ್ಯದಲ್ಲಿ 21 ಎಸೆತ ಎದುರಿಸಿದ್ದು 35 ರನ್ ಹೊಡೆದರು. ಅವರು ಆರನೇ ಓವರಿನಲ್ಲಿ ಔಟಾಗುತ್ತಲೇ ತಂಡದ ಕುಸಿತ ಆರಂಭಗೊಂಡಿತು. ಈ ವಿಕೆಟ್ ಪತನವಾದಾಗ ತಂಡ 52 ರನ್ ಗಳಿಸಿತ್ತು. ಆಬಳಿಕ ಸಾಯಿ ಕಿಶೋರ್, ರಶೀದ್ ಮತ್ತು ನೂರ್ ಅಹ್ಮದ್ ದಾಳಿಗೆ ತತ್ತರಿಸಿದ ಪಂಜಾಬ್ 99 ರನ್ ಗಳಿಸುವಷ್ಟರಲ್ಲಿ 7 ವಿಕೆಟ್ ಕಳೆದುಕೊಂಡು ಒದ್ದಾಡಿತು.
ಬಿಗು ದಾಳಿ ಸಂಘಟಿಸಿದ ಸಾಯಿ ಕಿಶೋರ್ 33 ರನ್ನಿಗೆ 4 ವಿಕೆಟ್ ಕಿತ್ತು ಗಮನ ಸೆಳೆದರೆ ರಶೀದ್ ತನ್ನ 4 ಓವರ್‌ಗಳ ದಾಳಿಯಲ್ಲಿ ಕೇವಲ 15 ರನ್ ನೀಡಿದ್ದು ಒಂದು ವಿಕೆಟ್ ಪಡೆದರು. ನೂರ್ ಅಹ್ಮದ್ 20 ರನ್ನಿಗೆ 2 ವಿಕೆಟ್ ಪಡೆದರು.
ಹರ್‌ಪ್ರೀತ್ ಬ್ರಾರ್ ಮತ್ತು ಹರ್‌ಪ್ರೀತ್ ಸಿಂಗ್ ಅವರು ಎಂಟನೇ ವಿಕೆಟಿಗೆ 40 ರನ್ ಪೇರಿಸಿದ್ದರಿಂದ ತಂಡ ಸಾಧಾರಣ ಮೊತ್ತ ಪೇರಿಸುವಂತಾಯಿತು. ಬ್ರಾರ್ 12 ಎಸೆತಗಳಿಂದ 29 ರನ್ ಹೊಡೆದರು.