Advertisement

IPL; ಮಾಯಾಂಕ್‌ ಯಾದವ್‌ ಆಡುವುದು ಅನುಮಾನ : ಲಕ್ನೋ ಸೂಪರ್‌ ಜೈಂಟ್ಸ್‌ ಫೇವರಿಟ್‌

12:47 AM Apr 12, 2024 | Team Udayavani |

ಲಕ್ನೋ: ಉತ್ತಮ ಫಾರ್ಮ್ನಲ್ಲಿರುವ ಲಕ್ನೋ ಸೂಪರ್‌ ಜೈಂಟ್ಸ್‌ ತಂಡವು ಶುಕ್ರವಾರ ನಡೆಯುವ ಐಪಿಎಲ್‌ ಪಂದ್ಯದಲ್ಲಿ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿರುವ ಡೆಲ್ಲಿ ಕ್ಯಾಪಿಟಲ್ಸ್‌ ತಂಡವನ್ನು ಎದುರಿಸಲಿದೆ. ಈ ಪಂದ್ಯದಲ್ಲಿ ಗೆಲ್ಲುವ ಫೇವರಿಟ್‌ ಆಗಿರುವ ಲಕ್ನೋ ತನ್ನ ಗೆಲುವಿನ ಅಭಿಯಾನವನ್ನು ಮುಂದುವರಿಸುವ ವಿಶ್ವಾಸದಲ್ಲಿದೆ.

Advertisement

ಆಡಿದ ನಾಲ್ಕು ಪಂದ್ಯಗಳಲ್ಲಿ ಮೂರರಲ್ಲಿ ಗೆದ್ದು ಆರಂಕ ಪಡೆದಿರುವ ಲಕ್ನೋ ತಂಡ ಸದ್ಯ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಆಡಿದ ಐದು ಪಂದ್ಯಗಳಲ್ಲಿ ಕೇವಲ ಒಮ್ಮೆ ಗೆದ್ದಿರುವ ಡೆಲ್ಲಿ ತಂಡ ಕೊನೆಯ ಸ್ಥಾನದಲ್ಲಿದೆ. ಬ್ಯಾಟಿಂಗ್‌ ಮತ್ತು ಬೌಲಿಂಗ್‌ನಲ್ಲಿ ಬಲಿಷ್ಠವಾಗಿರುವ ಲಕ್ನೋ ತಂಡದ ಗೆಲುವಿನ ಓಟಕ್ಕೆ ಬ್ರೇಕ್‌ ನೀಡಲು ಡೆಲ್ಲಿ ಪ್ರಯತ್ನಿಸಬೇಕಾಗಿದೆ.

ಮಾಯಾಂಕ್‌ ಅನುಮಾನ
ವೇಗದ ಬೌಲರ್‌ ಖ್ಯಾತಿಯ ಮಾಯಾಂಕ್‌ ಯಾದವ್‌ ಅವರು ಶುಕ್ರವಾರದ ಪಂದ್ಯದಲ್ಲಿ ಆಡುವುದು ಅನುಮಾನ ಎನ್ನಲಾಗಿದೆ. 21ರ ಹರೆಯದ ಅವರು ಕಿಬ್ಬೊಟ್ಟೆಯ ನೋವಿನಿಂದ ಬಳಲುತ್ತಿದ್ದಾರೆ. ಗುಜರಾತ್‌ ವಿರುದ್ಧದ ಪಂದ್ಯದ ವೇಳೆ ಅವರು ಕೇವಲ ಒಂದು ಓವರ್‌ ಎಸೆದಿದ್ದರು. ಯಾದವ್‌ ಅವರ ಬದಲಿಗೆ ಆಡಿದ ಯಶ್‌ ಥಾಕುರ್‌ ಗುಜರಾತ್‌ ವಿರುದ್ದ ಐದು ವಿಕೆಟ್‌ಗಳ ಗೊಂಚಲನ್ನು ಪಡೆದು ಪರಾಕ್ರಮ ಮೆರೆದಿದ್ದರು. ಅವರಿಗೆ ನವೀನ್‌ ಉಲ್‌ ಹಕ್‌, ಕೃಣಾಲ್‌ ಪಾಂಡ್ಯ ಮತ್ತು ರವಿ ಬಿಷ್ಣೋಯಿ ನೆರವಾಗಲಿದ್ದಾರೆ.

ಲಕ್ನೋದ ಬ್ಯಾಟಿಂಗ್‌ ಬಲಿಷ್ಠವಾಗಿದೆ. ಆರಂಭಿಕರಾದ ಕ್ವಿಂಟನ್‌ ಡಿ ಕಾಕ್‌ ಮತ್ತು ಕೆಎಲ್‌ ರಾಹುಲ್‌ ಉತ್ತಮ ಆರಂಭ ಒದಗಿಸಲಿದ್ದಾರೆ. ದಕ್ಷಿಣ ಆಫ್ರಿಕಾದ ಕಾಕ್‌ ಈಗಾಗಲೇ ಎರಡು ಅರ್ಧಶತಕ ಹೊಡೆದಿದ್ದಾರೆ. ಆದರೆ ನಾಯಕ ರಾಹುಲ್‌ ಅವರಿಂದ ಉತ್ತಮ ಇನ್ನಿಂಗ್ಸ್‌ ಬರಬೇಕಾಗಿದೆ. ನಿಕೋಲಾಸ್‌ ಪೂರಣ್‌ ಅವರ ಭರ್ಜರಿ ಆಟ ಡೆಲ್ಲಿ ವಿರುದ್ಧವೂ ಮುಂದುವರಿಯುವ ನಿರೀಕ್ಷೆಯಿದೆ. ದೇವದತ್ತ ಪಡಿಕ್ಕಲ್‌ ಇನ್ನೂ ಎರಡಂಕೆಯ ಮೊತ್ತ ದಾಖಲಿಸದಿರುವುದು ಲಕ್ನೋದ ಚಿಂತೆಗೆ ಕಾರಣವಾಗಿದೆ.

ಸೋಲುಗಳ ಹೊಡೆತ
ಡೆಲ್ಲಿ ತಂಡಕ್ಕೆ ಸತತ ಸೋಲುಗಳ ಹೊಡೆತ ಬೀಳುತ್ತಿದೆ. ಇದರಿಂದಾಗಿ ಛಲದಿಂದ ಹೋರಾಡುವ ಉತ್ಸಾಹ ಕಳೆದುಕೊಂಡಿದೆ. ಕೋಲ್ಕತಾ ವಿರುದ್ಧ 106 ರನ್ನುಗಳಿಂದ ಸೋತಿದ್ದ ಡೆಲ್ಲಿ ತಂಡ ಮುಂಬೈ ವಿರುದ್ಧವೂ ಸೋತು ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನಕ್ಕೆ ಜಾರಿದೆ. ಖಲೀಲ್‌ ಅಹ್ಮದ್‌ ಮತ್ತು ಇಶಾಂತ್‌ ಶರ್ಮ ತಂಡದಲ್ಲಿದ್ದರೂ ಸ್ಥಿರ ನಿರ್ವಹಣೆ ನೀಡಲು ವಿಫ‌ಲರಾಗಿದ್ದಾರೆ. ಗಾಯದಿಂದ ಚೇತರಿಸಿಕೊಂಡಿರುವ ಮುಕೇಶ್‌ ಕುಮಾರ್‌ ತಂಡಕ್ಕೆ ಮರಳುವ ಸಾಧ್ಯತೆಯಿದೆ.

Advertisement

ಮಳೆ ಇಲ್ಲ
ಹವಾಮಾನ ಮೂಲಗಳ ಪ್ರಕಾರ ಶುಕ್ರವಾರ ಇಲ್ಲಿ ಮಳೆ ಬರುವ ಸಾಧ್ಯತೆಯಿಲ್ಲ.

ಪಿಚ್‌ ವರದಿ
ಇಲ್ಲಿನ ಪಿಚ್‌ ಬೌಲರ್‌ಗಳಿಗೆ ನೆರವಾಗುವ ಸಾಧ್ಯತೆಯಿದೆ. ಕೆಲವೊಮ್ಮೆ ಬ್ಯಾಟ್ಸ್‌ಮನ್‌ಗಳಿಗೆ ನೆರವಾದ ನಿದರ್ಶನವೂ ಇದೆ. ಈ ಪಿಚ್‌ ಸ್ಥಿರವಾಗಿ ವರ್ತಿಸುವ ಸಾಧ್ಯತೆಯಿಲ್ಲ. ಈ ತಾಣದಲ್ಲಿ ನಡೆದ ಮೊದಲ ಟಿ20 ಪಂದ್ಯದ ವೇಳೆ ರೋಹಿತ್‌ ಶಮರ ಶತಕ ಬಾರಿಸಿದ್ದರೆ ಭಾರತ 195 ರನ್‌ ಗಳಿಸಿತ್ತು.

ವೇಗಿಗಳು 65 ವಿಕೆಟ್‌
ಈ ಪಿಚ್‌ನಲ್ಲಿ ಕೆಲವು ಟಿ20 ಪಂದ್ಯಗಳು ನಡೆದಿವೆ. ವೇಗಿಗಳು 65 ವಿಕೆಟ್‌ ಪಡೆದಿದ್ದರೆ ಸ್ಪಿನ್ನರ್‌ಗಳು 47 ವಿಕೆಟ್‌ ಉರುಳಿಸಿದ್ದಾರೆ. ಮೊದಲ ಇನ್ನಿಂಗ್ಸ್‌ನ ಸರಾಸರಿ ಮೊತ್ತ 155 ಆಗಿದೆ. ಈ ಪಿಚ್‌ನಲ್ಲಿ ನಡೆದ ಈ ಹಿಂದಿನ ಪಂದ್ಯದಲ್ಲಿ ಲಕ್ನೋದ ಯಶ್‌ ಥಾಕುರ್‌ 30 ರನ್ನಿಗೆ 5 ವಿಕೆಟ್‌ ಹಾರಿಸಿದ್ದರು ಮತ್ತು ಲಕ್ನೋ ಈ ಪಂದ್ಯದಲ್ಲಿ ಗುಜರಾತ್‌ ವಿರುದ್ಧ 33 ರನ್ನುಗಳಿಂದ ಜಯ ಸಾಧಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next