Advertisement

ಬೆನ್ನುಬಿದ್ದಿರುವ ವಿವಾದಗಳಿಂದ ಮುಕ್ತಗೊಳ್ಳಲಿ ಐಪಿಎಲ್‌

05:45 AM Nov 24, 2018 | Team Udayavani |

ವಿಶ್ವ ಕ್ರಿಕೆಟ್‌ಗೆ ಹೊಸತೊಂದು ಜಗತ್ತನ್ನು ಪರಿಚಯಿಸಿದ್ದು ಟಿ20 ಆಟ. ಅದರ ಸಂಪೂರ್ಣ ಪ್ರಯೋಜನ ಪಡೆದಿದ್ದು ಮಾತ್ರ ಬಿಸಿಸಿಐ. ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಎಂಬ ಹಣದ ಅಕ್ಷಯ ಪಾತ್ರೆ ಸೃಷ್ಟಿಸಿದ ಭಾರತ ಕ್ರಿಕೆಟ್‌ ಮಂಡಳಿ ಜಗತ್ತಿನ ಶ್ರೀಮಂತ ಕ್ರಿಕೆಟ್‌ ಸಂಸ್ಥೆ ಎನಿಸಿಕೊಂಡಿದೆ. ಅಷ್ಟು ಮಾತ್ರವಲ್ಲ ಎಂದಿಗೂ ಬರಿದಾಗುವುದೇ ಇಲ್ಲವೇನು ಎಂಬಂತಹ ಖಜಾನೆಯನ್ನು ಹೊಂದಿದೆ. ಇಂತಹ ಐಪಿಎಲ್‌, ತನ್ನ ರಂಗಿನ ನೋಟಗಳಿಂದ, ಕ್ರಿಕೆಟಿಗರ ಅದ್ಭುತ ಆಟದಿಂದ, ಚಿಯರ್‌ಲೀಡರ್‌ಗಳ ಕುಣಿತದಿಂದ ಸದಾ ಸುದ್ದಿ ಮಾಡುತ್ತಲೇ ಇರುತ್ತದೆ. ಇವೆಲ್ಲದರ ನಡುವೆ ಬಿಸಿಸಿಐಗೆ ಬೇಡವೆನಿಸಿದರೂ ಅದನ್ನು ಅಪ್ಪಿಕೊಳ್ಳುತ್ತಲೇ ಇರುವ ಮತ್ತೂಂದು ಸಂಗತಿಯೆಂದರೆ ವಿವಾದ! 2008ರಲ್ಲಿ ನಡೆದ ಮೊದಲ ಐಪಿಎಲ್‌ನಿಂದ ಶುರುವಾಗಿ 2018ರ ಐಪಿಎಲ್‌ವರೆಗೂ ಒಂದಲ್ಲ ಒಂದು ರೀತಿಯಲ್ಲಿ ವಿವಾದಗಳು ಹಿಂಬಾಲಿಸಿಕೊಂಡೇ ಬಂದಿವೆ. ಈಗ 2019ರ ಐಪಿಎಲ್‌ಗೆ ದಿನಗಣನೆ ಆರಂಭವಾಗಿದೆ. ಇಲ್ಲಾದರೂ ಐಪಿಎಲ್‌ ವಿವಾದ ಮುಕ್ತವಾಗಿರಲಿ ಎನ್ನುವುದು ಹಾರೈಕೆ.

Advertisement

2012ರಲ್ಲೇ ಐವರಿಗೆ ನಿಷೇಧ
ಐಪಿಎಲ್‌ನಲ್ಲಿ ಫಿಕ್ಸಿಂಗ್‌ ಸುಳಿವು ಸಿಕ್ಕಿದ್ದು 2012ರಲ್ಲಿ. ಆಗ ಇಂಡಿಯಾ ಟೀವಿ ರಹಸ್ಯ ಕಾರ್ಯಾಚರಣೆ ನಡೆಸಿತ್ತು. ಅದರ ಬೆನ್ನಲ್ಲೇ ಐವರನ್ನು ಆಟಗಾರರನ್ನು ಬಿಸಿಸಿಐ ನಿಷೇಧಿಸಿತು. ಟಿ.ಪಿ.ಸುಧೀಂದ್ರ (ಡೆಕ್ಕನ್‌ ಚಾರ್ಜರ್ಸ್‌), ಮೊಹಿ°ಶ್‌ ಮಿಶ್ರಾ (ಪುಣೆ ವಾರಿಯರ್ಸ್‌), ಅಮಿತ್‌ ಯಾದವ್‌, ಶಲಭ್‌ ಶ್ರೀವಾಸ್ತವ (ಕಿಂಗ್ಸ್‌ ಪಂಜಾಬ್‌), ಅಭಿನವ್‌ ಬಾಲಿ (ದೆಹಲಿ) ಅಮಾನತಿಗೊಳಗಾದರು. ಫ್ರಾಂಚೈಸಿಗಳು ಕಪ್ಪು ಹಣ ನೀಡುತ್ತವೆ ಎಂದು ಮೊಹಿ°ಶ್‌ ಮಿಶ್ರಾ ಹೇಳಿದ್ದ ಆಡಿಯೊ ಟೇಪ್‌ ಆಗ ಭಾರೀ ಸದ್ದು ಮಾಡಿತ್ತು.

2013ರಲ್ಲಿ ಕ್ರಿಕೆಟನ್ನೇ ಅಲ್ಲಾಡಿಸಿದ ಸ್ಪಾಟ್‌ಫಿಕ್ಸಿಂಗ್‌
ವಿಶ್ವ ಕ್ರಿಕೆಟ್‌ನಲ್ಲೇ ಇತ್ತೀಚೆಗೆ ಸತತವಾಗಿ ಕೇಳಿಬರುತ್ತಿರುವ ಪದ ಮ್ಯಾಚ್‌ ಫಿಕ್ಸಿಂಗ್‌. ಅದಾದ ನಂತರ ಕಾಣಿಸಿಕೊಂಡ ಮತ್ತೂಂದು ಪದ ಸ್ಪಾಟ್‌ ಫಿಕ್ಸಿಂಗ್‌. ಈ ಎರಡು ಪದಗಳು ಕ್ರಿಕೆಟ್‌ನಲ್ಲಿ ಬಿರುಗಾಳಿಯೆಬ್ಬಿಸಿವೆ. ಕ್ರಿಕೆಟ್‌ ಬಗೆಗಿನ ನಂಬಿಕೆಯನ್ನೇ ಅಲ್ಲಾಡಿಸಿವೆ. 2013ರ ಐಪಿಎಲ್‌ ಮೂಲಕ ಸ್ಪಾಟ್‌ಫಿಕ್ಸಿಂಗ್‌ ಪದ ಮೊದಲ ಬಾರಿಗೆ ಚಾಲ್ತಿಗೆ ಬಂತು. ಅದು ಹೊರಜಗತ್ತಿಗೆ ಗೊತ್ತಾಗಿದ್ದು ದೆಹಲಿ ಪೊಲೀಸರ ಮೂಲಕ. ರಾಜಸ್ಥಾನ್‌ ರಾಯಲ್ಸ್‌ ಪರ ಆಡುತ್ತಿದ್ದ ಮೂವರಾದ ಎಸ್‌.ಶ್ರೀಶಾಂತ್‌, ಅಂಕಿತ್‌ ಚವಾಣ್‌, ಅಜಿತ್‌ ಚಂಡೀಲಾರನ್ನು ದೆಹಲಿ ಪೊಲೀಸರು ರಾತ್ರೋರಾತ್ರಿ ಬಂಧಿಸಿದರು. ಈ ಮೂವರು ನಿರ್ದಿಷ್ಟ ಕಡೆಯಲ್ಲಿ, ನಿರ್ದಿಷ್ಟ ಓವರ್‌ನಲ್ಲಿ ಇಂತಹದ್ದೇ ಎಸೆತ ಹಾಕುತ್ತೇವೆಂದು ಮೊದಲೇ ಫಿಕ್ಸರ್‌ಗಳಿಗೆ ತಿಳಿಸಿದ್ದರು ಎನ್ನುವುದು ದೆಹಲಿ ಪೊಲೀಸರ ಆರೋಪ. ಇದನ್ನು ಪರಿಗಣಿಸಿ ಬಿಸಿಸಿಐ ಈ ಮೂವರನ್ನು ಕ್ರಿಕೆಟ್‌ನಿಂದ ಆಜೀವ ನಿಷೇಧಿಸಿತು. ಮುಂದೆ ದೆಹಲಿ ವಿಶೇಷ ನ್ಯಾಯಾಲಯದಲ್ಲಿ ಈ ಮೂವರ ಮೇಲಿನ ಆರೋಪ ಸಾಬೀತಾಗದಿದ್ದರೂ ಅವರಿಗೆ ಕ್ರಿಕೆಟ್‌ಗೆ ಹಿಂತಿರುಗಲು ಸಾಧ್ಯವಾಗಲಿಲ್ಲ. ಆದರೂ ಇದರ ಪರಿಣಾಮ ಇಷ್ಟಕ್ಕೆ ನಿಲ್ಲಲಿಲ್ಲ. ಪ್ರಕರಣ ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲೇರಿತು. ನ್ಯಾಯಪೀಠದ ಸಮಿತಿ ನಡೆಸಿದ ವಿಶೇಷ ವಿಚಾರಣೆಯಲ್ಲಿ ಚೆನ್ನೈ ಕಿಂಗ್ಸ್‌ ತಂಡದ ಮಾಜಿ ಮುಖ್ಯಸ್ಥ ಗುರುನಾಥ್‌ ಮೈಯಪ್ಪನ್‌, ರಾಜಸ್ಥಾನ್‌ ರಾಯಲ್ಸ್‌ ಮಾಜಿ ಮುಖ್ಯಸ್ಥ ರಾಜ್‌ ಕುಂದ್ರಾ ತಪ್ಪಿತಸ್ಥರೆಂದು ಸಾಬೀತಾಯಿತು. ಈ ಇಬ್ಬರೂ ಕ್ರಿಕೆಟ್‌ ಚಟುವಟಿಕೆಗಳಿಂದ ಆಜೀವ ನಿಷೇಧಕ್ಕೊಳಗಾದರು. ಶ್ರೀನಿವಾಸನ್‌ ಬಿಸಿಸಿಐ ಅಧ್ಯಕ್ಷ ಸ್ಥಾನ ಕಳೆದುಕೊಂಡರು. ಎರಡು ವರ್ಷಗಳ ಕಾಲ ಚೆನ್ನೈ ಕಿಂಗ್ಸ್‌ ಮತ್ತು ರಾಜಸ್ಥಾನ್‌ ರಾಯಲ್ಸ್‌ ಐಪಿಎಲ್‌ನಲ್ಲಿ ಆಡುವ ಅವಕಾಶ ಕಳೆದುಕೊಂಡವು.

2016-ಬರಕ್ಕೆ ಸಿಲುಕಿ ಕಂಗಾಲಾದ ಪಂದ್ಯಗಳು
2016ರ ಐಪಿಎಲ್‌ ಆವೃತ್ತಿಯಲ್ಲಿ ವಿಚಿತ್ರ ಸಮಸ್ಯೆಯೊಂದು ಎದುರಾಯಿತು. ಈ ಸಮಸ್ಯೆ ಹಿಂದೆಂದೂ ಎದುರಾಗದ ಬಿಕ್ಕಟ್ಟು. ಆ ವೇಳೆ ಮಹಾರಾಷ್ಟ್ರದಲ್ಲಿ ಬರ ಇದ್ದಿದ್ದರಿಂದ ರೈತರು ನೀರಿಗೆ ತೊಂದರೆ ಅನುಭವಿಸುತ್ತಿದ್ದರು. ಇದನ್ನೇ ಹಿನ್ನೆಲೆಯಾಗಿಟ್ಟುಕೊಂಡು ಎನ್‌ಜಿಒವೊಂದು ಬಾಂಬೆ ಉಚ್ಚ ನ್ಯಾಯಾಲಯದಲ್ಲಿ ಮನವಿ ಸಲ್ಲಿಸಿ ಮುಂಬೈನ ವಾಂಖೇಡೆ ಮೈದಾನದಿಂದ ಪಂದ್ಯಗಳನ್ನು ಬೇರೆ ಕಡೆಗೆ ಸ್ಥಳಾಂತರಿಸಬೇಕೆಂದು ಹೇಳಿತು. ವಾಂಖೇಡೆ ಮೈದಾನ ನಿರ್ವಹಿಸಲು ಸಾವಿರಾರು ಲೀಟರ್‌ ನೀರು ಬಳಸಿಕೊಳ್ಳಲಾಗುತ್ತಿದೆ. ಬರವಿರುವುದರಿಂದ ಹೀಗೆ ನೀರನ್ನು ಅಪವ್ಯಯ ಮಾಡುವುದು ಸರಿಯಲ್ಲ ಎನ್ನುವುದು ಅರ್ಜಿದಾರರ ಅಭಿಪ್ರಾಯ. ಇದನ್ನು ಒಪ್ಪಿಕೊಂಡ ನ್ಯಾಯಪೀಠ ಐಪಿಎಲ್‌ ಪಂದ್ಯಗಳನ್ನು ಮುಂಬೈನಿಂದ ಹೊರಗೆ ನಡೆಸಲು ಹೇಳಿತು. ಪರಿಣಾಮ ಮುಂಬೈ ಇಂಡಿಯನ್ಸ್‌ ತಂಡದ 13 ಪಂದ್ಯಗಳು ಬೇರೆ ಕಡೆಯಲ್ಲಿ ನಡೆಯಿತು. ಇದನ್ನೇ ಅನುಸರಿಸಿ ಜೈಪುರ, ಬೆಂಗಳೂರಿನಲ್ಲೂ ಅರ್ಜಿಗಳು ಸಲ್ಲಿಕೆಯಾಗಿದ್ದವು. ಆದರೆ ಅದನ್ನು ನ್ಯಾಯಪೀಠಗಳು ಪುರಸ್ಕರಿಸಲಿಲ್ಲ.

2009-ತೆರಿಗೆ ವಂಚನೆಯ ಆರೋಪ
2009ರ ಐಪಿಎಲ್‌ ನಡೆಯುವ ಹೊತ್ತಿನಲ್ಲೇ ದೇಶಾದ್ಯಂತ ಸಾರ್ವತ್ರಿಕ ಚುನಾವಣೆಯೂ ಇತ್ತು. ಆದ್ದರಿಂದ ಆ ಇಡೀ ಆವೃತ್ತಿಯನ್ನೇ ದ.ಆಫ್ರಿಕಾಕ್ಕೆ ಸ್ಥಳಾಂತರಿಸಲಾಗಿತ್ತು. ಕೂಟವೇನೋ ಸುಗಮವಾಗಿ ನಡೆದರೂ ಕೂಟದ ನಂತರ ನಡೆದ ಹಲವಾರು ವಿವಾದಗಳು ಹಲವು ಗಣ್ಯರ ತಲೆದಂಡಕ್ಕೆ ಕಾರಣವಾಯಿತು. ಈ ವಿವಾದದ ಪರಿಣಾಮ 2010ರಲ್ಲಿ ಐಪಿಎಲ್‌ ಮುಖ್ಯಸ್ಥರಾಗಿದ್ದ ಲಲಿತ್‌ ಮೋದಿ ಉಚ್ಛಾಟನೆಗೊಳಗಾಗುವುದರ ಜೊತೆಗೆ, ಇಂಗ್ಲೆಂಡ್‌ಗೆ ಹೋಗಿ ನೆಲೆಸಿದರು. ವಿದೇಶಿ ವಿನಿಮಯ ಮಾಡುವಾಗ ಸೂಕ್ತ ಮಾಹಿತಿ ನೀಡಿಲ್ಲ ಎನ್ನುವುದು ಮುಖ್ಯ ಆರೋಪ. ಬಿಸಿಸಿಐ 243 ಕೋಟಿ ರೂ.ಗಳನ್ನು ದ.ಆಫ್ರಿಕಾಕ್ಕೆ ವರ್ಗಾಯಿಸಿತ್ತು. ಆಗ ಆರ್‌ಬಿಐ ನಿಯಮ ಪಾಲಿಸದೇ, ತೆರಿಗೆ ವಂಚಿಸಲಾಗಿದೆ ಎಂದು ಆರೋಪಿಸಲಾಗಿತ್ತು. ಇದನ್ನು ವಿಚಾರಣೆ ನಡೆಸಿದ ಸರ್ವೋಚ್ಚ ನ್ಯಾಯಾಲಯ ಬಿಸಿಸಿಐಗೆ 121 ಕೋಟಿ ರೂ. ದಂಡ ವಿಧಿಸಿತು.

Advertisement

ಐಪಿಎಲ್‌ನಿಂದ ಹೊರಬಿದ್ದ ಕೊಚ್ಚಿ, ಪುಣೆ
2011ರ ಐಪಿಎಲ್‌ನಲ್ಲಿ ಕೊಚ್ಚಿ ಟಸ್ಕರ್ಸ್‌ ತಂಡ ಐಪಿಎಲ್‌ ಪ್ರವೇಶಿಸಿತ್ತು. ಆದರೆ ಅದೇ ವರ್ಷ ಆ ತಂಡವನ್ನು ಬಿಸಿಸಿಐ ವಜಾ ಮಾಡಿತು. ಆ ತಂಡದಲ್ಲಿ ಒಳಜಗಳ, ಸ್ವಹಿತಾಸಕ್ತಿ ತಾರಕಕ್ಕೇರಿದೆ. ಅಲ್ಲದೇ ಶೇ.10ರಷ್ಟು ಬ್ಯಾಂಕ್‌ ಗ್ಯಾರಂಟಿ ಮೊತ್ತವನ್ನೂ  ನೀಡಿಲ್ಲ, ಆದ್ದರಿಂದ ಫ್ರಾಂಚೈಸಿ ಶುಲ್ಕವನ್ನು ಮುಟ್ಟುಗೋಲು ಹಾಕಿಕೊಳ್ಳುತ್ತಿದ್ದೇವೆಂದು ಘೋಷಿಸಿತು. ಇದರ ವಿರುದ್ಧ ಕೊಚ್ಚಿ ಟಸ್ಕರ್ಸ್‌ ನ್ಯಾಯಾಲಯದ ಮೆಟ್ಟಿಲೇರಿತು, ನ್ಯಾಯಪೀಠ ಕೊಚ್ಚಿಗೆ 550 ಕೋಟಿ ರೂ. ಪರಿಹಾರ ನೀಡಬೇಕೆಂದು ಆದೇಶಿಸಿತು. ಬಿಸಿಸಿಐ ಮುಖಭಂಗ ಅನುಭವಿಸಿತು. 2011ರಲ್ಲೇ ಐಪಿಎಲ್‌ ಪ್ರವೇಶಿಸಿದ್ದ ಪುಣೆ ವಾರಿಯರ್ಸ್‌ ಕೂಡ 2013ರಿಂದ ಹೊರಬಿತ್ತು. ಅದೂ ಕೂಡಾ ಪೂರ್ಣ ಶುಲ್ಕ ಪಾವತಿಸಿಲ್ಲವೆಂದು ಬಿಸಿಸಿಐ ಅದರ ಶುಲ್ಕವನ್ನೇ ಮುಟ್ಟುಗೋಲು ಹಾಕಿಕೊಂಡಿತ್ತು.

ನಿರೂಪ

Advertisement

Udayavani is now on Telegram. Click here to join our channel and stay updated with the latest news.

Next