Advertisement

IPL Match 2023: ಸನ್‌ರೈಸರ್ ಹೈದರಾಬಾದ್‌ -ಮುಂಬೈ ಇಂಡಿಯನ್ಸ್‌

11:31 PM Apr 17, 2023 | Team Udayavani |

ಹೈದರಾಬಾದ್‌: ಎರಡೂ ತಂಡಗಳದ್ದು ಸತತ ಸೋಲಿನ ಆರಂಭ, ಬಳಿಕ ಸತತ ಗೆಲುವಿನ ಸಂಭ್ರಮ, ಲಯಕ್ಕೆ ಮರಳಿರುವ ಸ್ಪಷ್ಟ ಸೂಚನೆ… ಹೀಗೆ ಸಮಬಲದ ಹೋರಾಟವೊಂದರ ನಿರೀಕ್ಷೆಯೊಂದಿಗೆ ಮಂಗಳವಾರದ ಐಪಿಎಲ್‌ ಹಣಾಹಣಿಗೆ ಸನ್‌ರೈಸರ್ ಹೈದರಾಬಾದ್‌ ಮತ್ತು ಮುಂಬೈ ಇಂಡಿಯನ್ಸ್‌ ಅಣಿಯಾಗಿವೆ.

Advertisement

ಹೈದರಾಬಾದ್‌ಗೆ ಇದು ತವರಿನ ಪಂದ್ಯವೆಂಬುದೊಂದು ಲಾಭ. ಸಾಲದ್ದಕ್ಕೆ ಕಳೆದ ಪಂದ್ಯದಲ್ಲಿ ಕೆಕೆಆರ್‌ ವಿರುದ್ಧ 4ಕ್ಕೆ 228 ರನ್‌ ಪೇರಿಸಿದ ಹಿರಿಮೆಯೂ ಐಡನ್‌ ಮಾರ್ಕ್‌ರಮ್‌ ಪಾಲಿಗಿದೆ. ಇತ್ತ ಮುಂಬೈ ಪಾಳೆಯದ ಖುಷಿಯ ಸಂಗತಿಯೆಂದರೆ ಸೂರ್ಯಕುಮಾರ್‌ ಯಾದವ್‌ ಫಾರ್ಮ್ಗೆ ಮರಳಿದ್ದು. ಒಂದು ದಿನದ ಹಿಂದಷ್ಟೇ ಕೋಲ್ಕತಾ ವಿರುದ್ಧ 17.4 ಓವರ್‌ಗಳಲ್ಲೇ 186 ರನ್‌ ಬೆನ್ನಟ್ಟಿ ಗೆದ್ದ ವೇಳೆ ಸೂರ್ಯಕುಮಾರ್‌ 25 ಎಸೆತಗಳಿಂದ 43 ರನ್‌ ಬಾರಿಸಿದ್ದರು. ಉಸ್ತುವಾರಿ ನಾಯಕನಾಗಿಯೂ ಸೂರ್ಯ ಅವರದು ಯಶಸ್ವಿ ಸಾಧನೆ.

ಕೆಕೆಆರ್‌ ವಿರುದ್ಧ ಆರಂಭಕಾರ ಇಶಾನ್‌ ಕಿಶನ್‌ ಬ್ಯಾಟಿಂಗ್‌ ಕೂಡ ಬಿರುಸಿನಿಂದ ಕೂಡಿತ್ತು. ಕೇವಲ 25 ಎಸೆತಗಳಿಂದ 58 ರನ್‌ ಬಾರಿಸಿದ ಹಿರಿಮೆ ಇವರದು (5 ಬೌಂಡರಿ, 5 ಸಿಕ್ಸರ್‌). ಅನಾರೋಗ್ಯದ ಕಾರಣ ನಾಯಕ ರೋಹಿತ್‌ ಶರ್ಮ “ಇಂಪ್ಯಾಕ್ಟ್ ಪ್ಲೇಯರ್‌’ ಆಗಿ ಬಂದಿದ್ದರು. ತಿಲಕ್‌ ವರ್ಮ, ಟಿಮ್‌ ಡೇವಿಡ್‌, ಕ್ಯಾಮರಾನ್‌ ಗ್ರೀನ್‌ ಕೂಡ ಉತ್ತಮ ಫಾರ್ಮ್  ನಲ್ಲಿದ್ದಾರೆ.

ಬೌಲಿಂಗ್‌ ವಿಭಾಗದಲ್ಲಿ ಅನುಭವಿ ಪೀಯೂಷ್‌ ಚಾವ್ಲಾ ಮತ್ತು ಹೃತಿಕ್‌ ಶೊಕೀನ್‌ ಅವರ ಸ್ಪಿನ್‌ ಜೋಡಿ ಹೆಚ್ಚು ಪ್ರಭಾವಶಾಲಿ ಎನಿಸಿದೆ. ಆದರೆ ಪ್ರಧಾನ ವೇಗಿ ಆರ್ಚರ್‌ ಮೊದಲ ಪಂದ್ಯದಲ್ಲೇ ಗಾಯಾಳಾದದ್ದು ಮುಂಬೈಗೆ ಎದುರಾಗಿರುವ ದೊಡ್ಡ ಹೊಡೆತ. ರಿಲೀ ಮೆರೆಡೆತ್‌, ಜೇಸನ್‌ ಪ್ರಬಲವಾದ ಬದಲಿ ಅಸ್ತ್ರವಾಗಿದ್ದಾರೆ. ಆದರೆ ಇವರಿಬ್ಬರನ್ನು ಒಂದೇ ಪಂದ್ಯದಲ್ಲಿ ಆಡಿಸುವ ನಿರ್ಧಾರವನ್ನು ಮುಂಬೈ ತೆಗೆದುಕೊಳ್ಳಬೇಕಿದೆ. ಕೆಕೆಆರ್‌ ವಿರುದ್ಧ ಅರ್ಜುನ್‌ ತೆಂಡುಲ್ಕರ್‌ ಮತ್ತು ಡುವಾನ್‌ ಜಾನ್ಸೆನ್‌ ಪದಾರ್ಪಣೆಗೈದಿದ್ದರು. ಇವರಲ್ಲಿ ಜಾನ್ಸೆನ್‌ ಪರಿಣಾಮ ಬೀರಿರಲಿಲ್ಲ.

ಹ್ಯಾರಿ ಬ್ರೂಕ್‌ ಬಲ
ಹ್ಯಾರಿ ಬ್ರೂಕ್‌ ಅವರ ಶತಕದ ಬಳಿಕ ಹೈದರಾಬಾದ್‌ ಬ್ಯಾಟಿಂಗ್‌ಗೆ ನೂತನ ಸ್ಪರ್ಶ ಲಭಿಸಿದೆ. ಬ್ರೂಕ್‌ ಕೆಕೆಆರ್‌ ವಿರುದ್ಧ ಮೊದಲು ಬ್ಯಾಟಿಂಗ್‌ ಮಾಡಿದ ವೇಳೆ ಅಜೇಯ 100 ರನ್‌ ಬಾರಿಸಿದ್ದರು. ಐಡನ್‌ ಮಾರ್ಕ್‌ರಮ್‌, ಅಭಿಷೇಕ್‌ ಶರ್ಮ ಕೂಡ ಬ್ಯಾಟಿಂಗ್‌ನಲ್ಲಿ ಮಿಂಚಿದ್ದರು. ಪರಿಣಾಮ, ಈ ಸೀಸನ್‌ನಲ್ಲೇ ಅತ್ಯಧಿಕ 228 ರನ್‌ ರಾಶಿ ಹಾಕಿದ ಹೆಗ್ಗಳಿಕೆ ಹೈದರಾಬಾದ್‌ನದ್ದಾಗಿತ್ತು.

Advertisement

ಇದಕ್ಕೂ ಹಿಂದಿನ ಪಂಜಾಬ್‌ ವಿರುದ್ಧದ ಪಂದ್ಯದಲ್ಲಿ ರಾಹುಲ್‌ ತ್ರಿಪಾಠಿ ಕೂಡ ಪ್ರಚಂಡ ಬ್ಯಾಟಿಂಗ್‌ ತೋರ್ಪಡಿಸಿದ್ದರು. ಆದರೆ ಮಾಯಾಂಕ್‌ ಅಗರ್ವಾಲ್‌ ಪ್ರಯತ್ನ ಸಾಲದು.

ಬೌಲಿಂಗ್‌ ವಿಭಾಗದಲ್ಲಿ ಸ್ಪಿನ್ನರ್‌ ಮಾಯಾಂಕ್‌ ಮಾರ್ಕಂಡೆ ಹೆಚ್ಚಿನ ಯಶಸ್ಸು ಸಾಧಿಸಿದ್ದಾರೆ (6 ವಿಕೆಟ್‌). ವೇಗಿಗಳಾದ ಭುವನೇಶ್ವರ್‌ ಕುಮಾರ್‌, ಮಾರ್ಕೊ ಜಾನ್ಸೆನ್‌, ಉಮ್ರಾನ್‌ ಮಲಿಕ್‌ ತವರಲ್ಲಿ ಎದುರಾಳಿಗೆ ಕಂಟಕವಾಗಿ ಪರಿಣಮಿಸಿಬೇಕಿದೆ. ಕಳೆದ ಪಂದ್ಯದಲ್ಲಿ ಹೈದರಾಬಾದ್‌ 228 ರನ್‌ ಪೇರಿಸಿದರೂ ಕೆಕೆಆರ್‌ 205ರ ತನಕ ಇನ್ನಿಂಗ್ಸ್‌ ಬೆಳೆಸಿದ್ದನ್ನು ಮರೆಯುವಂತಿಲ್ಲ.

ಈ ಪಂದ್ಯದಲ್ಲಿ ಒಂದು ವಿಶೇಷಕ್ಕೆ ಸಾಕ್ಷಿಯಾಗಬಹುದು. ಡುವಾನ್‌ ಜಾನ್ಸೆನ್‌-ಮಾರ್ಕೊ ಜಾನ್ಸೆನ್‌ ಕಾಣಿಸಿ ಕೊಂಡರೆ ಮೊದಲ ಸಲ ಅವಳಿ ಕ್ರಿಕೆಟಿಗರು ಐಪಿಎಲ್‌ ಪಂದ್ಯವೊಂದರಲ್ಲಿ ಆಡಿದಂತಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next