ನವೀ ಮುಂಬಯಿ: ಹ್ಯಾಟ್ರಿಕ್ ಸೋಲನುಭವಿಸಿರುವ ಚೆನ್ನೈ ಮತ್ತು ಎರಡರಲ್ಲೂ ಮುಗ್ಗರಿಸಿರುವ ಹೈದರಾಬಾದ್ ತಂಡಗಳ ಪೈಕಿ ಒಂದು ತಂಡ ಶನಿವಾರ ಸಂಜೆ ಗೆಲುವಿನ ಖಾತೆ ತೆರೆಯಲಿದೆ. ಇವೆರಡು ತಂಡಗಳು ದಿನದ ಮೊದಲ ಪಂದ್ಯದಲ್ಲಿ ಎದುರಾಗಲಿವೆ.
ಸ್ಟಾರ್ ಆಟಗಾರರ ಕೊರತೆಯಿಂದ ಬಳಲುತ್ತಿರುವುದು ಎರಡೂ ತಂಡಗಳ ಸಮಸ್ಯೆಯಾಗಿದೆ. ಚೆನ್ನೈಗೆ ನಾಯಕತ್ವದ ಬದಲಾವಣೆ ಕೂಡ ಹಿನ್ನಡೆಯಾಗಿ ಕಂಡಿದೆ. ರವೀಂದ್ರ ಜಡೇಜ ಅವರಿಗೆ ಅದೃಷ್ಟ ಕೈಹಿಡಿಯಬೇಕಾದ ಅಗತ್ಯವಿದೆ.
ಹಾಗೆಯೇ ಕಳೆದ ಋತುವಿನಲ್ಲಿ 635 ರನ್ ಪೇರಿಸಿ ಚೆನ್ನೈ ಜಯದಲ್ಲಿ ಪ್ರಮುಖ ಪಾತ್ರ ವಹಿಸಿದ ಋತುರಾಜ್ ಗಾಯಕ್ವಾಡ್ ಅವರ ವೈಫಲ್ಯವೂ ತಂಡಕ್ಕೆ ಹಿನ್ನಡೆಯಾಗಿ ಪರಿಣಮಿಸಿದೆ.
ಇದನ್ನೂ ಓದಿ:ಐಪಿಎಲ್: ಶುಭಮನ್ ಗಿಲ್ ಶತಕ ವಂಚಿತ; ಕೊನೆಯ ಎಸೆತದಲ್ಲಿ ಗೆದ್ದ ಗುಜರಾತ್ ಟೈಟಾನ್ಸ್
3 ಪಂದ್ಯಗಳಿಂದ ಅವರು ಗಳಿಸಿದ್ದು ಎರಡೇ ರನ್ (0, 1, 1). ಮೊಯಿನ್ ಅಲಿ, ಅಂಬಾಟಿ ರಾಯುಡು ಇನ್ನಿಂಗ್ಸ್ ವಿಸ್ತರಿಸಲು ವಿಫಲರಾಗಿದ್ದಾರೆ. ದೀಪಕ್ ಚಹರ್ ಗಾಯಾಳಾಗಿರುವುದು ತಂಡಕ್ಕೆ ಎದುರಾಗಿರುವ ಮತ್ತೊಂದು ಹಿನ್ನಡೆ.
ಇನ್ನೊಂದೆಡೆ ಕೇನ್ ವಿಲಿಯಮ್ಸ್ ಪಡೆ ಕಳೆದ ವರ್ಷದ ಸೋಲಿನ ಆಟವನ್ನೇ ಮುಂದುವರಿಸುತ್ತಿದೆ. ಬೌಲಿಂಗ್ ಬಲಿಷ್ಠವಾಗಿದ್ದರೂ ಬ್ಯಾಟಿಂಗ್ ದುರ್ಬಲವಾಗಿ ಗೋಚರಿಸುತ್ತಿದೆ.