Advertisement

IPL; ಚಿನ್ನಸ್ವಾಮಿಯಲ್ಲಿ ಕೊಹ್ಲಿ, ದಿನೇಶ್‌ “ಕಾರ್ತಿಕ ಹುಣ್ಣಿಮೆ’

01:28 AM Mar 26, 2024 | Team Udayavani |

ಬೆಂಗಳೂರು: ಸೋಮವಾರ ಹೋಳಿ ಹುಣ್ಣಿಮೆ. ಬಣ್ಣದಾಟದ ಗುಂಗಿನಲ್ಲಿದ್ದ ಆರ್‌ಸಿಬಿ ಅಭಿಮಾನಿಗಳಿಗೆ, ವಿರಾಟ್‌ ಕೊಹ್ಲಿ, ದಿನೇಶ್‌ ಕಾರ್ತಿಕ್‌ ಮತ್ತು ಇಂಪ್ಯಾಕ್ಟ್ ಪ್ಲೇಯರ್‌ ಆಗಿ ಮೈದಾನಕ್ಕೆ ಬಂದ ಮಹಿಪಾಲ್‌ ಲೋಮ್ರಾರ್‌ ಗೆಲು ವಿನ ಬಣ್ಣವನ್ನು ಬಳಿದು, ಸಂಭ್ರಮ ಹೆಚ್ಚಿಸಿದರು.

Advertisement

ಚಿನ್ನಸ್ವಾಮಿಯಲ್ಲಿ ಸೋಮವಾರ ನಡೆದ ಐಪಿಎಲ್‌ ಪಂದ್ಯದಲ್ಲಿ, ಪಂಜಾಬ್‌ ಕಿಂಗ್ಸ್‌ ವಿರುದ್ಧ ಸೋಲುವ ಹಂತದಲ್ಲಿದ್ದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು, ರೋಚಕ 4 ವಿಕೆಟ್‌ಗಳ ಗೆಲುವನ್ನಾಚರಿಸಿದೆ. ಆರಂಭದಲ್ಲಿ ಕೊಹ್ಲಿ ತಂಡವನ್ನು ಆಧರಿಸಿದರೆ, ಕೊನೆಯ ಹಂತದಲ್ಲಿ ಕಾರ್ತಿಕ್‌-ಲೋಮ್ರಾರ್‌ ಸಿಡಿದು ನಿಂತು ತಂಡವನ್ನು ಗೆಲುವಿನ ದಡ ಹತ್ತಿಸಿದರು.

ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಪಂಜಾಬ್‌ 20 ಓವರ್‌ಗಳಲ್ಲಿ, 6 ವಿಕೆಟ್‌ಗೆ 176 ರನ್‌ ಗಳಿಸಿತ್ತು. ಇದನ್ನು ಬೆನ್ನತ್ತಿ ಹೊರಟ ಬೆಂಗಳೂರು ಸರಿಯಾಗಿ 19.2 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 178 ರನ್‌ ಬಾರಿಸಿ, 4 ವಿಕೆಟ್‌ಗಳಿಂದ ಜಯ ಸಾಧಿಸಿತು.

ಸಿಡಿದ ವಿರಾಟ್‌ ಕೊಹ್ಲಿ
ಚೆನ್ನೈ ವಿರುದ್ಧ ಉದ್ಘಾಟನ ಪಂದ್ಯದಲ್ಲಿ ವಿಫ‌ಲರಾಗಿದ್ದ ವಿರಾಟ್‌ ಕೊಹ್ಲಿ, ಸೋಮವಾರ ಆರಂಭದಿಂದಲೇ ಸಿಡಿದರು. 49 ಎಸೆತ ಎದುರಿಸಿದ ಅವರು 11 ಬೌಂಡರಿ, 2 ಸಿಕ್ಸರ್‌ಗಳ ನೆರವಿನಿಂದ 77 ರನ್‌ ಚಚ್ಚಿದರು. ತಂಡದ ಮೊತ್ತ 130 ರನ್‌ಗಳಾಗಿದ್ದಾಗ ಅವರು ಔಟಾದ ಬೆನ್ನಲ್ಲೇ, ಅನುಜ್‌ ರಾವತ್‌ ಕೂಡ ಹೊರ ನಡೆದರು. ಆಗ ಆರ್‌ಸಿಬಿಗೆ 22 ಎಸೆತಗಳಿಂದ 47 ರನ್‌ ಬೇಕಿತ್ತು. ಇದ್ದಕ್ಕಿದ್ದಂತೆ ಪರಿಸ್ಥಿತಿ ಬಿಗುವಾಯಿತು.

ಈ ವೇಳೆ ಮಹಿಪಾಲ್‌ ಲೋಮ್ರಾರ್‌ (17 ರನ್‌, 8 ಎಸೆತ) ಇಂಪ್ಯಾಕ್ಟ್ ಪ್ಲೇಯರ್‌ ಆಗಿ ಮೈದಾನ ಪ್ರವೇಶಿಸಿದರು. ಬಂದ ಕೂಡಲೇ ಒಂದು ಬೌಂಡರಿ, ಸಿಕ್ಸರ್‌ ಬಾರಿಸಿ ತಂಡದ ಆತ್ಮವಿಶ್ವಾಸವನ್ನು ಹೆಚ್ಚಿಸಿದರು. ಆಮೇಲೆ ಪರಿಸ್ಥಿತಿಯನ್ನು ದಿನೇಶ್‌ ಕಾರ್ತಿಕ್‌ ಹಿಡಿತಕ್ಕೆ ಪಡೆದರು. ಒತ್ತಡವಿದ್ದರೂ ಅದ್ಭುತ ಹೊಡೆತಗಳನ್ನು ಬಾರಿಸಿದ ಅವರು, ಕೇವಲ 10 ಎಸೆತಗಳಲ್ಲಿ 28 ರನ್‌ ಸಿಡಿಸಿದರು. ಇದರಲ್ಲಿ 3 ಬೌಂಡರಿ, 2 ಸಿಕ್ಸರ್‌ ಸೇರಿದ್ದವು. ಇಬ್ಬರೂ ಸೇರಿ 7ನೇ ವಿಕೆಟ್‌ಗೆ 48 ರನ್‌ ಒಗ್ಗೂಡಿಸಿ, ಇನ್ನೂ 4 ಎಸೆತ ಬಾಕಿಯಿದ್ದಾಗಲೇ ತಂಡವನ್ನು ಗೆಲ್ಲಿಸಿದರು. ಪಂಜಾಬ್‌ ಪರ ಕಾಗಿಸೊ ರಬಾಡ, ಹರಪ್ರೀತ್‌ ಬ್ರಾರ್‌ ತಲಾ 2 ವಿಕೆಟ್‌ ಪಡೆದರು.

Advertisement

ಪಂಜಾಬ್‌ ಉತ್ತಮ ಮೊತ್ತ
ಈ ಮೊದಲು ಸಾಂ ಕ ಬ್ಯಾಟಿಂಗ್‌ ಸಾಹಸ ಪ್ರದರ್ಶಿಸಿದ ಪಂಜಾಬ್‌ ಕಿಂಗ್ಸ್‌ ತಂಡವು ಮೊದಲು ಬ್ಯಾಟಿಂಗ್‌ ನಡೆಸಿ 6 ವಿಕೆಟಿಗೆ 176 ರನ್‌ ಗಳಿಸಿತ್ತು. ಪಂಜಾಬ್‌ ಸರದಿಯಲ್ಲಿ ಒಂದೂ ಅರ್ಧ ಶತಕ ದಾಖಲಾಗಲಿಲ್ಲ. ಹಾಗೆಯೇ ಆರ್‌ಸಿಬಿ ಬೌಲಿಂಗ್‌ ವಿಶೇಷ ಪರಿಣಾಮ ವನ್ನೂ ಬೀರಲಿಲ್ಲ. ಯಶ್‌ ದಯಾಳ್‌ ಮತ್ತು ಮೊಹಮ್ಮದ್‌ ಸಿರಾಜ್‌ ಮಾತ್ರ ಉತ್ತಮ ನಿಯಂತ್ರಣ ಸಾಧಿಸಿದರು. ಪಂಜಾಬ್‌ ಸರದಿಯಲ್ಲಿ 45 ರನ್‌ ಮಾಡಿದ ನಾಯಕ ಶಿಖರ್‌ ಧವನ್‌ ಅವರದೇ ಹೆಚ್ಚಿನ ಗಳಿಕೆ. 13ನೇ ಓವರ್‌ ತನಕ ಕ್ರೀಸ್‌ನಲ್ಲಿ ಉಳಿದ ಅವರು 37 ಎಸೆತ ಎದುರಿಸಿದರು. ಸಿಡಿಸಿದ್ದು 5 ಬೌಂಡರಿ ಹಾಗೂ ಒಂದು ಸಿಕ್ಸರ್‌.

ಬೌಂಡರಿಯಿಂದ ಆರಂಭ
ಮೊಹಮ್ಮದ್‌ ಸಿರಾಜ್‌ ಎಸೆದ ಪಂದ್ಯದ ಪ್ರಥಮ ಎಸೆತವನ್ನೇ ಶಿಖರ್‌ ಧವನ್‌ ಬೌಂಡರಿಗೆ ಅಟ್ಟಿದರು. ಯಶ್‌ ದಯಾಳ್‌ ತಮ್ಮ ಮೊದಲ ಓವರ್‌ನಲ್ಲಿ ಉತ್ತಮ ನಿಯಂತ್ರಣ ಸಾಧಿಸಿದರು. ಇದರಲ್ಲಿ ಎರಡೇ ರನ್‌ ಬಂತು.
ಸಿರಾಜ್‌ ತಮ್ಮ ದ್ವಿತೀಯ ಓವರ್‌ನಲ್ಲಿ ಮೊದಲ ಯಶಸ್ಸು ತಂದಿತ್ತರು. ಅಷ್ಟೇನೂ ಫಾರ್ಮ್ನಲ್ಲಿಲ್ಲದ ಇಂಗ್ಲೆಂಡ್‌ ಆರಂಭಕಾರ ಜಾನಿ ಬೇರ್‌ಸ್ಟೊ ಅವರನ್ನು ಕೊಹ್ಲಿ ಕೈಗೆ ಕ್ಯಾಚ್‌ ಕೊಡಿಸುವಲ್ಲಿ ಯಶಸ್ವಿಯಾದರು. ಬೇರ್‌ಸ್ಟೊ ಗಳಿಕೆ ಕೇವಲ 8 ರನ್‌. ಅವರು ಆರ್‌ಸಿಬಿ ವಿರುದ್ಧ ಎರಡಂಕೆಯ ಸ್ಕೋರ್‌ ದಾಖಲಿಸುವಲ್ಲಿ ವಿಫ‌ಲರಾದದ್ದು ಇದೇ ಮೊದಲು.

ಕೊಹ್ಲಿ ಕ್ಯಾಚ್‌ ದಾಖಲೆ
ಈ ಕ್ಯಾಚ್‌ ಪಡೆದ ವಿರಾಟ್‌ ಕೊಹ್ಲಿ ಟಿ20 ಕ್ರಿಕೆಟ್‌ನಲ್ಲಿ ಅತ್ಯಧಿಕ ಕ್ಯಾಚ್‌ ಪಡೆದ ಭಾರತೀಯ ಕ್ಷೇತ್ರರಕ್ಷಕನೆಂಬ ದಾಖಲೆ ಸ್ಥಾಪಿ ಸಿ ದರು. ಇದು ಅವರ 173ನೇ ಕ್ಯಾಚ್‌ ಆಗಿದೆ. 172 ಕ್ಯಾಚ್‌ ಪಡೆದಿದ್ದ ಸುರೇಶ್‌ ರೈನಾ ದಾಖಲೆಯನ್ನು ಕೊಹ್ಲಿ ಮುರಿದರು. ರೋಹಿತ್‌ ಶರ್ಮ 3ನೇ (167), ಮನೀಷ್‌ ಪಾಂಡೆ 4ನೇ (146), ಸೂರ್ಯಕುಮಾರ್‌ ಯಾದವ್‌ 5ನೇ (136) ಸ್ಥಾನದಲ್ಲಿದ್ದಾರೆ.

ಅಲ್ಜಾರಿ ಜೋಸೆಫ್ ಇಲ್ಲಿಯೂ ದುಬಾರಿ ಯಾದರು. ಅವರ ಮೊದಲ ಓವರ್‌ನಲ್ಲೇ ಧವನ್‌ 2 ಬೌಂಡರಿ ಬಾರಿಸಿದರು. ಪವರ್‌ ಪ್ಲೇ ಮುಗಿಯುವಾಗ ಪಂಜಾಬ್‌ ಒಂದು ವಿಕೆಟ್‌ ನಷ್ಟಕ್ಕೆ 40 ರನ್‌ ಮಾಡಿತ್ತು.

ಸ್ಕೋರ್‌ ಪಟ್ಟಿ
ಪಂಜಾಬ್‌ ಕಿಂಗ್ಸ್‌
ಶಿಖರ್‌ ಧವನ್‌ ಸಿ ಕೊಹ್ಲಿ ಬಿ ಮ್ಯಾಕ್ಸ್‌ವೆಲ್‌ 45
ಜಾನಿ ಬೇರ್‌ಸ್ಟೊ ಸಿ ಕೊಹ್ಲಿ ಬಿ ಸಿರಾಜ್‌ 8
ಪ್ರಭ್‌ಸಿಮ್ರಾನ್‌ ಸಿ ಅನುಜ್‌ ಬಿ ಮ್ಯಾಕ್ಸ್‌ವೆಲ್‌ 25
ಲಿವಿಂಗ್‌ಸ್ಟೋನ್‌ ಸಿ ಅನುಜ್‌ ಬಿ ಜೋಸೆಫ್ 17
ಸ್ಯಾಮ್‌ ಕರನ್‌ ಸಿ ಅನುಜ್‌ ಬಿ ದಯಾಳ್‌ 23
ಜಿತೇಶ್‌ ಶರ್ಮ ಸಿ ಅನುಜ್‌ ಬಿ ಸಿರಾಜ್‌ 27
ಶಶಾಂಕ್‌ ಸಿಂಗ್‌ ಔಟಾಗದೆ 21
ಹರ್‌ಪ್ರೀತ್‌ ಬ್ರಾರ್‌ ಔಟಾಗದೆ 2
ಇತರ 8
ಒಟ್ಟು (20 ಓವರ್‌ಗಳಲ್ಲಿ 6 ವಿಕೆಟಿಗೆ) 176
ವಿಕೆಟ್‌ ಪತನ: 1-17, 2-72, 3-98, 4-98, 5-150, 6-154.
ಬೌಲಿಂಗ್‌: ಮೊಹಮ್ಮದ್‌ ಸಿರಾಜ್‌ 4-0-26-2
ಯಶ್‌ ದಯಾಳ್‌ 4-0-23-1
ಅಲ್ಜಾರಿ ಜೋಸೆಫ್ 4-0-43-1
ಕ್ಯಾಮರಾನ್‌ ಗ್ರೀನ್‌ 2-0-19-0
ಮಾಯಾಂಕ್‌ ಡಾಗರ್‌ 3-0-34-0
ಗ್ಲೆನ್‌ ಮ್ಯಾಕ್ಸ್‌ವೆಲ್‌ 3-0-29-2

ರಾಯಲ್‌ ಚಾಲೆಂಜರ್ ಬೆಂಗಳೂರು
ವಿರಾಟ್‌ ಕೊಹ್ಲಿ ಸಿ ಹರ್‌ಪ್ರೀತ್‌ ಬಿ ಹರ್ಷಲ್‌ 77
ಫಾ ಡು ಪ್ಲೆಸಿಸ್‌ ಸಿ ಕರನ್‌ ಬಿ ರಬಾಡ 3
ಕ್ಯಾಮರಾನ್‌ ಗ್ರೀನ್‌ ಸಿ ಶರ್ಮ ಬಿ ರಬಾಡ 3
ರಜತ್‌ ಪಾಟೀದಾರ್‌ ಬಿ ಹರ್‌ಪ್ರೀತ್‌ 18
ಗ್ಲೆನ್‌ ಮ್ಯಾಕ್ಸ್‌ವೆಲ್‌ ಬಿ ಹರಪ್ರೀತ್‌ 3
ಅನುಜ್‌ ರಾವತ್‌ ಎಲ್ಬಿಡಬ್ಲ್ಯು ಬಿ ಕರನ್‌ 11
ದಿನೇಶ್‌ ಕಾರ್ತಿಕ್‌ ಔಟಾಗದೆ 28
ಎಂ. ಲೋಮ್ರಾರ್‌ ಔಟಾಗದೆ 17
ಇತರ 18
ಒಟ್ಟು (19.2 ಓವರ್‌ಗಳಲ್ಲಿ ಆರು ವಿಕೆಟಿಗೆ) 178
ವಿಕೆಟ್‌ ಪತನ: 1-26, 2-43, 3-86, 4-103, 5-130, 6-130
ಬೌಲಿಂಗ್‌: ಶ್ಯಾಮ್‌ ಕರನ್‌ 3-0-30-1
ಅರ್ಷದೀಪ್‌ ಸಿಂಗ್‌ 3.2-0-40-0
ಕಾಗಿಸೊ ರಬಾಡ 4-0-23-2
ಹರ್‌ಪ್ರೀತ್‌ ಬ್ರಾರ್‌ 4-0-13-2
ಹರ್ಷಲ್‌ ಪಟೇಲ್‌ 4-0-45-1
ರಾಹುಲ್‌ ಚಹರ್‌ 1-0-16-0

ಪಂದ್ಯಶ್ರೇಷ್ಠ: ವಿರಾಟ್‌ ಕೊಹ್ಲಿ

– ಕೆ. ಪೃಥ್ವಿಜಿತ್‌

Advertisement

Udayavani is now on Telegram. Click here to join our channel and stay updated with the latest news.

Next