ನವದೆಹಲಿ: ಐಪಿಎಲ್ (ಇಂಡಿಯನ್ ಪ್ರೀಮಿಯರ್ ಲೀಗ್) ಟಿ20 ಕ್ರಿಕೆಟ್ ಪ್ರೇಮಿಗಳಿಗೆ ಸಿಹಿ ಸುದ್ದಿ ಪ್ರಕಟವಾಗುವ ಮುನ್ಸೂಚನೆ ದೊರೆತಿದೆ. ಬಿಸಿಸಿಐ (ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ) 13ನೇ ಆವೃತ್ತಿ ಐಪಿಎಲ್ ಕೂಟದ ತಾತ್ಕಾಲಿಕ ವೇಳಾಪಟ್ಟಿಯನ್ನು ಪ್ರಕಟಿಸಿದ್ದು ಇದೇ ವರ್ಷದ ಸೆ.26 ರಿಂದ ನ.8ರ ತನಕ ಕೂಟವನ್ನು ಸೀಮಿತ ಕ್ರೀಡಾಂಗಣಗಳಲ್ಲಿ ಆಯೋಜಿಸಲಿದೆ ಎಂದು ಆಂಗ್ಲ ಮಾಧ್ಯಮ ‘ಇನ್ ಸೈಡ್‌ನ್ಪೋರ್ಟ್’ ತನ್ನ ವೆಬ್‌ಸೈಟ್‌ನಲ್ಲಿ ವರದಿ ಮಾಡಿದೆ.
ಒಟ್ಟಾರೆ 60 ದಿನಗಳ ಕೂಟವನ್ನು ಈ ಸಲ 44 ದಿನ ಗಳಿಗೆ ಸೀಮಿತಗೊಳಿಸಲಾಗುತ್ತಿದೆ. ಇದೊಂದು ರೀತಿಯ ಕಿರು ಐಪಿಎಲ್, ಚುಟುಕಾಗಿ ಹಾಗೂ ಚುರುಕಾಗಿ ಕೂಟ ಮುಗಿಸಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಯೋಜನೆ ರೂಪಿಸಿಕೊಂಡಿದೆ, ಆದರೆ ಈ ಬಗ್ಗೆ ಬಿಸಿಸಿಐ ಕಡೆಯಿಂದ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಸೌರವ್ ಗಂಗೂಲಿ ವಿವಿಧ ರಾಜ್ಯ ಕ್ರಿಕೆಟ್ ಸಂಸ್ಥೆಗಳಿಗೆ ಬರೆದಿರುವ ಪತ್ರದ ಪ್ರತಿಯನ್ನು ಆಧರಿಸಿ ಈ ವರದಿ ಹೊರಬಿದ್ದಿದೆ.
ಸೀಮಿತ ಕ್ರೀಡಾಂಗಣದಲ್ಲಿ ಪಂದ್ಯ: ಹಿಂದಿನ ಆವೃತ್ತಿ ಐಪಿಎಲ್‌ಗಳಲ್ಲಿ ತಂಡವೊಂದು ತವರಿನಲ್ಲಿ ಆಡಿದಷ್ಟೇ ಪಂದ್ಯವನ್ನು ತವರಿನಿಂದ ಹೊರಗೆಯೂ ಆಡಬೇಕಿತ್ತು. ಆದರೆ ಈ ಸಲ ತವರಿನ ಪಂದ್ಯಗಳು ಇರುವುದಿಲ್ಲ, ಬದಲಿಗೆ ಸೀಮಿತ ಕ್ರೀಡಾಂಗಣದಲ್ಲಿ ಪಂದ್ಯವನ್ನು ನಡೆಸಲಾಗುತ್ತದೆ, ಇದಕ್ಕಾಗಿ ಕೊರೊನಾ ತೀವ್ರತೆ ಕಡಿಮೆ ಇರುವ ನಗರಗಳ ಕ್ರೀಡಾಂಗಣವನ್ನು ಬಿಸಿಸಿಐ ಆಯ್ದು ಕೊಳ್ಳುವ ನಿರೀಕ್ಷೆ ಇದೆ. ಎಲ್ಲ ಪಂದ್ಯಗಳು ಕೂಡ ಮುಚ್ಚಿದ ಬಾಗಿಲಿನಲ್ಲಿಯೇ ನಡೆಯಲಿವೆ ಎಂದು ಹೇಳಲಾಗಿದೆ.
ಬಿಸಿಸಿಐನಿಂದ ಅವಿರತ ಶ್ರಮ: ಪ್ರಸಕ್ತ ಸಾಲಿನಲ್ಲಿ ಐಪಿಎಲ್ ಕೂಟವನ್ನು ಹೇಗಾದರೂ ಮಾಡಿ ನಡೆಸಲೇಬೇಕು ಎಂದು ಸೌರವ್ ಗಂಗೂಲಿ ನೇತೃತ್ವದ ಬಿಸಿಸಿಐ
ಟೊಂಕಕಟ್ಟಿ ನಿಂತಿದೆ. ಬಿಸಿಸಿಐ ಕಳೆದ ಕೆಲವು ದಿನಗಳಿಂದ ಎಲ್ಲ ಫ್ರಾಂಚೈಸಿ, ಮಾಧ್ಯಮ ಹಕ್ಕುಗಳ ಪಾಲುದಾರ (ಸ್ಟಾರ್ ಇಂಡಿಯಾ) ಮತ್ತು ಐಪಿಎಲ್‌ನ ಇತರ ಪಾಲುದಾರರೊಂದಿಗೆ ಸಮಾ ಲೋಚಿಸಿದೆ. ಭಾರತದಲ್ಲೇ ಕೂಟ ಆಯೋಜಿಸುವುದು ಮೊದಲ ಆಯ್ಕೆ, ಕೊರೊನಾ ಪ್ರಕರಣದಿಂದಾಗಿ ಕೂಟ ನಡೆಸಲು ಸಾಧ್ಯವಾಗದಿದ್ದರೆ ಕೂಟವನ್ನು ವಿದೇಶಕ್ಕೆ ಸ್ಥಳಾಂತರಿಸುವುದು ಬಿಸಿಸಿಐ ಮುಂದಿರುವ ಕೊನೆಯ ಆಯ್ಕೆಯಾಗಿದೆ. ಈಗಾಗಲೇ ಕೂಟಕ್ಕೆ ಆತಿಥ್ಯವಹಿಸಲು
ಯುಎಇ, ಇಂಗ್ಲೆಂಡ್ ಹಾಗೂ ಶ್ರೀಲಂಕಾ ಕ್ರಿಕೆಟ್ ಮಂಡಳಿಗಳು ಆಸಕ್ತಿ ವಹಿಸಿದ್ದನ್ನು ಸ್ಮರಿಸಬಹುದು.
ಟಿ20 ವಿಶ್ವಕಪ್ ಮೇಲೆ ಅವಲಂಬಿತ: ಐಪಿಎಲ್‌ಗೆ ಗೊತ್ತು ಮಾಡಿರುವ ತಾತ್ಕಾಲಿಕ ದಿನಾಂಕ ಆಸ್ಟ್ರೇಲಿಯದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಕೂಟವನ್ನು ಮುಂದೂ ಡುವುದರ ಮೇಲೆ ಅವಲಂಬಿತವಾಗಿದೆ. ಈಗಾಗಲೇ ಎರಡು ಸಲ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಸಭೆ ನಡೆದಿದೆ, ಎರಡೂ ಸಲವೂ ವಿಶ್ವ ಟಿ20 ಕೂಟವನ್ನು ಆಯೋಜಿಸುವ ಬಗ್ಗೆ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗಿಲ್ಲ. ಕೊರೊನಾ ತೀವ್ರತೆ ಕಡಿಮೆಯಾಗುವುದನ್ನೇ ಐಸಿಸಿ ಕಾಯುತ್ತಿದೆ. ಮುಂದಿನ ತಿಂಗಳು ಮತ್ತೆ ಐಸಿಸಿ ಸಭೆ ನಡೆಯಲಿದೆ. ಅಲ್ಲಿ ವಿಶ್ವ ಕೂಟ ಆಯೋಜಿಸುವ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ. ಬಿಸಿಸಿಐ ಮೂಲಗಳ ಪ್ರಕಾರ ಐಪಿಎಲ್ ಸಿದ್ಧತೆಗೆ ಐಸಿಸಿ ಸಭೆ ಮುಗಿಯುವ ತನಕ ಸುದೀರ್ಘವಾಗಿ ಕಾಯಲು ಬಿಸಿಸಿಐ ಸಿದ್ಧವಿಲ್ಲ. ಹೀಗಾಗಿ ಜೂ.10ರಂದು ಐಸಿಸಿ ಸಭೆ
ನಡೆದ ಬೆನ್ನಲ್ಲೆ ವಿವಿಧ ರಾಜ್ಯಗಳ ಕ್ರಿಕೆಟ್ ಸಂಸ್ಥೆಗೆ ಐಪಿಎಲ್ ಆಯೋಜಿಸುವ ಬಗ್ಗೆ ಸೌರವ್ ಗಂಗೂಲಿ ಪತ್ರ ಬರೆದಿದ್ದಾರೆ ಎನ್ನಲಾಗಿದೆ.
ನಮ್ಮ ಯೋಜನೆ ತಡೆಹಿಡಿಯಲ್ಲ: ಬಿಸಿಸಿಐನ ಹಿರಿಯ ಅಧಿಕಾರಿ
“ನಾವು ನಮ್ಮ ಯೋಜನೆಗಳನ್ನು ತಡೆ ಹಿಡಿಯುವುದಕ್ಕೆ ಸಾಧ್ಯವೇ ಇಲ್ಲ. ಟಿ20 ವಿಶ್ವಕಪ್ ನಡೆಸುವ ಬಗ್ಗೆ ಐಸಿಸಿ ನಿರ್ಧರಿಸಬೇಕು ಮತ್ತು ನಮ್ಮ ಯೋಜನೆಗಳನ್ನು ನಾವೇ ನಿರ್ಧರಿಸಬೇಕು, ಇದೇ ಕಾರಣದಿಂದ ತಾತ್ಕಾಲಿಕ ಐಪಿಎಲ್ ವೇಳಾಪಟ್ಟಿಯನ್ನು ನಿರ್ಧರಿಸಲಾಗಿದೆ’ ಎಂದು ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ್ದಾರೆ.