ಅಹ್ಮದಾಬಾದ್: ಸರಾಗವಾಗಿ ಸಾಗಿ ಬಂದ 2023ನೇ ಸಾಲಿನ ಐಪಿಎಲ್ ಫೈನಲ್ ಪಂದ್ಯಕ್ಕೆ ಭಾರಿ ಮಳೆಯ ಕಾಟ ಎದುರಾಗಿದ್ದು ಪಂದ್ಯ ಮೀಸಲು ದಿನವಾದ ಸೋಮವಾರಕ್ಕೆ ಮುಂದೂಡಲ್ಪಟ್ಟಿದೆ. ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳ ನಡುವೆ ರವಿವಾರ ಇಲ್ಲಿನ “ನರೇಂದ್ರ ಮೋದಿ ಸ್ಟೇಡಿಯಂ’ನಲ್ಲಿ ನಡೆಯಬೇಕಿದ್ದ ಪ್ರಶಸ್ತಿ ಸಮರ ರಾತ್ರಿ 11 ಗಂಟೆಯ ತನಕ ಆರಂಭವಾಗಿಲ್ಲ. ಟಾಸ್ ಕೂಡ ಹಾಕಲು ಸಾಧ್ಯವಾಗಲಿಲ್ಲ.
ಆದರೆ ಹವಾಮಾನ ವರದಿಯಂತೆ ಸೋಮವಾರವೂ ಮಳೆಯ ಭೀತಿ ಇದೆ. ಒಂದು ವೇಳೆ ಮೀಸಲು ದಿನದಂದೂ ಪಂದ್ಯ ನಡೆಯದೇ ಹೋದರೆ ಆಗ ಲೀಗ್ ಹಂತದ ಅಗ್ರಸ್ಥಾನಿಯಾಗಿದ್ದ ಗುಜರಾತ್ ಟೈಟಾನ್ಸ್ ಚಾಂಪಿಯನ್ ಎನಿಸಲಿದೆ.
ಟಾಸ್ ಹಾರಿಸುವುದಕ್ಕೂ ಅರ್ಧ ಗಂಟೆ ಮೊದಲು ಆರಂಭಗೊಂಡ ಮಳೆ 9.15ರ ಹೊತ್ತಿಗೆ ಬಿಡುವು ಕೊಟ್ಟಿತು. ಅಂಗಳಕ್ಕೆ ಹಾಕಿದ್ದ ಹೊದಿಕೆಗಳನ್ನೆಲ್ಲ ತೆಗೆಯಲಾಯಿತು. ಆದರೆ ಅಷ್ಟರಲ್ಲಿ ಪುನಃ ಮಳೆ ಜೋರಾಗಿಯೇ ಸುರಿಯತೊಡಗಿತು.
ಪೂರ್ತಿ 20 ಓವರ್‌ಗಳ ಪಂದ್ಯಕ್ಕೆ ರಾತ್ರಿ 9.35ರ “ಡೆಡ್ ಲೈನ್’ ವಿಧಿಸಲಾಗಿತ್ತು. 9.45ಕ್ಕೆ ಆರಂಭಗೊಂಡರೆ 19 ಓವರ್ ಪಂದ್ಯ, 10 ಗಂಟೆಗೆ ಪ್ರಾರಂಭವಾದರೆ 17 ಓವರ್ ಪಂದ್ಯ, 10.15ಕ್ಕೆ ಮೊದಲ್ಗೊಂಡರೆ 15 ಓವರ್‌ಗಳ ಆಟವೆಂದು ತೀರ್ಮಾನಿಸಲಾಗಿತ್ತು. ತಲಾ 5 ಓವರ್‌ಗಳ ಪಂದ್ಯವಾದರೆ 12.06ರ ಅಂತಿಮ ಸಮಯವನ್ನು ನಿಗದಿಗೊಳಿಸಲಾಗಿದೆ.
Related Articles
ಬಿಗ್ ಸ್ಕ್ರೀನ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ರನ್ನರ್ ಅಪ್!
ಭಾರೀ ನಿರೀಕ್ಷೆ ಹುಟ್ಟಿಸಿದ ಗುಜರಾತ್-ಚೆನ್ನೈ ನಡುವಿನ ಫೈನಲ್ ಪಂದ್ಯಕ್ಕೆ ಮಳೆ ಎದುರಾಗಿದೆ. ಈ ಆತಂಕದ ನಡುವೆಯೇ ಅಹ್ಮದಾಬಾದ್‌ನ “ನರೇಂದ್ರ ಮೋದಿ ಸ್ಟೇಡಿಯಂ’ನಲ್ಲಿರುವ ಬಿಗ್ ಸ್ಕ್ರೀನ್ ಮೇಲೆ ಎಲ್ಲರೂ ಅಚ್ಚರಿಪಡುವಂಥ, ಕ್ರಿಕೆಟ್ ಅಭಿಮಾನಿಗಳಿಗೆ ಆಘಾತ ಎದುರಾಗುವಂತಹ ಬರಹವೊಂದು ಮೂಡಿಬಂದಿದೆ. “ರನ್ನರ್ ಅಪ್ ಚೆನ್ನೈ ಸೂಪರ್ ಕಿಂಗ್ಸ್’ ಎಂಬ 3 ಸಾಲು ದಿಢೀರನೇ ಪ್ರತ್ಯಕ್ಷವಾಗಿದ್ದು, ಇದರ ಚಿತ್ರವೀಗ ವೈರಲ್ ಆಗಿದೆ.
ಹಾಗಾದರೆ 2023ರ ಐಪಿಎಲ್ ಫಿಕ್ಸ್ ಆಗಿದೆಯೇ? ಇಲ್ಲವಾದರೆ ದೈತ್ಯ ಪರದೆಯಲ್ಲಿ ಇಂಥ ಸಾಲು ಏಕೆ ಕಾಣಿಸಿಕೊಂಡಿತು? ಇದಕ್ಕೇನು ಕಾರಣ? ಹಾಲಿ ಚಾಂಪಿಯನ್ ಗುಜರಾತ್ ತಂಡ ಪ್ರಶಸ್ತಿ ಉಳಿಸಿಕೊಳ್ಳುವುದೇ? ಚೆನ್ನೈ ಫೈನಲ್‌ನಲ್ಲಿ ಸೋಲುವುದೇ? ಇಂಥ ಹತ್ತಾರು ಪ್ರಶ್ನೆಗಳು ಕ್ರಿಕೆಟ್ ಅಭಿಮಾನಿಗಳನ್ನು ಕಾಡತೊಡಗಿವೆ.
ಬಿಗ್ ಫೈನಲ್‌ಗೂ ಮುನ್ನ “ಸ್ಕ್ರೀನ್ ಟೆಸ್ಟ್’ ನಡೆಸುವಾಗ ಈ ಬರಹ ಕಂಡುಬಂದಿತ್ತು. “ಸಿನೆಮಾದ ಟ್ರೇಲರ್ ಬದಲು ಕ್ಲೈಮ್ಯಾಕ್ಸನ್ನು ಅಲ್‌ಪೋಡ್ ಮಾಡಿದಂತಿದೆ’ ಎಂಬುದಾಗಿ ನೆಟ್ಟಿಗರು ಕಾಲೆಳೆದಿದ್ದಾರೆ.