Advertisement

IPL 2024: ರಾಜಸ್ಥಾನಕ್ಕೆ ಬಿಸಿ ಮುಟ್ಟಿಸುವ ತವಕದಲ್ಲಿ ಆರ್‌ಸಿಬಿ

11:33 PM May 21, 2024 | Team Udayavani |

ಅಹ್ಮದಾಬಾದ್‌: ಇನ್ನೇನು ಹೊರಬಿದ್ದಿತು ಎಂಬಂಥ ಸ್ಥಿತಿಯಿಂದ ಫಿನಿಕ್ಸ್‌ನಂತೆ ಮರುಹುಟ್ಟು ಪಡೆದ ರಾಯಲ್‌ ಚಾಲೆಂಜರ್ ಬೆಂಗಳೂರು ಒಂದೆಡೆಯಾದರೆ, ಟೇಬಲ್‌ ಟಾಪರ್‌ ಆಗುವ ಅವಕಾಶ ಕಳೆದುಕೊಂಡು ಸತತ ಸೋಲಿನ ಆಘಾತಕ್ಕೆ ಸಿಲುಕಿರುವ ರಾಜಸ್ಥಾನ್‌ ರಾಯಲ್ಸ್‌ ಇನ್ನೊಂದೆಡೆ. ಈ ಎರಡು ತಂಡಗಳು ಬುಧವಾರ ಎಲಿಮಿನೇಟರ್‌ ಸ್ಪರ್ಧೆಗೆ ಇಳಿಯಲಿವೆ. ಗೆದ್ದ ತಂಡ ಮುನ್ನಡೆದರೆ, ಸೋತವರು ಮನೆಗೆ ಹೋಗಲಿದ್ದಾರೆ.

Advertisement

ಮೊದಲ 8 ಪಂದ್ಯಗಳಲ್ಲಿ ಏಳನ್ನು ಸೋತು ನಿರ್ಗಮನ ಬಾಗಿಲಿಗೆ ಬಂದಿದ್ದ ಡು ಪ್ಲೆಸಿಸ್‌ ಪಡೆ, ಅನಂತರ ಸತತ 6 ಪಂದ್ಯಗಳನ್ನು ಗೆದ್ದು ಪ್ಲೇ ಆಫ್ ತಲುಪಿದ ಸಾಹಸ “ಎಲ್ಲ ಮುಗಿಯಿತು’ ಎಂದು ಕೈಬಿಟ್ಟವರಿಗೊಂದು ಸ್ಫೂರ್ತಿ. ಕೊನೆಯ ಲೀಗ್‌ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಚೆನ್ನೈಯನ್ನು ಲೆಕ್ಕಾಚಾರದ ಆಟದ ಮೂಲಕ ಹೊರದಬ್ಬಿದ ಬೆಂಗಳೂರು ತಂಡ ಈ ಬಾರಿ ಅಸಾಧ್ಯವಾದುದನ್ನು ಸಾಧಿಸಲು ಹೊರಟಿದ್ದು ಸ್ಪಷ್ಟ. ಎಲಿಮಿನೇಟರ್‌ ಪಂದ್ಯದಲ್ಲಿ ಆರ್‌ಸಿಬಿಯೇ ಫೇವರಿಟ್‌ ಎಂಬುದರಲ್ಲಿ ಅನುಮಾನವಿಲ್ಲ.

ರಾಜಸ್ಥಾನ್‌ ಆರಂಭದಲ್ಲಿ ರೆಡ್‌-ಹಾಟ್‌ ಫೇವರಿಟ್‌ ಆಗಿದ್ದ ತಂಡ. ಸ್ಯಾಮ್ಸನ್‌ ಪಡೆಯ ಓಟ ಕಂಡಾಗ ಬಹಳ ಬೇಗ ಅಗ್ರಸ್ಥಾನವನ್ನು ಅಲಂಕರಿಸಲಿದೆ ಮತ್ತು ಇದನ್ನು ಗಟ್ಟಿಗೊಳಿಸಲಿದೆ ಎಂದೇ ಭಾವಿಸಲಾಗಿತ್ತು. ಆದರೆ ಕೊನೆಯ ಹಂತದಲ್ಲಿ ಒಮ್ಮಿಂದೊಮ್ಮೆಲೆ ಕುಸಿತ ಕಂಡು 3ನೇ ಸ್ಥಾನಕ್ಕೆ ಬಂದು ನಿಂತಿತು. ತಂಡದ ಮೇಲೀಗ ಎಲ್ಲಿಲ್ಲದ ಒತ್ತಡವಿದೆ.

ಆರ್‌ಸಿಬಿ ಫ‌ುಲ್‌ ಫಾರ್ಮ್

ಆರ್‌ಸಿಬಿಯ ಬ್ಯಾಟಿಂಗ್‌ ಲೈನ್‌ಅಪ್‌ ಈಗ ಫ‌ುಲ್‌ ಫಾರ್ಮ್ನಲ್ಲಿದೆ ಎನ್ನಬಹುದು. ಕೂಟದಲ್ಲೇ ಸರ್ವಾಧಿಕ 708 ರನ್‌ ಬಾರಿಸಿರುವ ವಿರಾಟ್‌ ಕೊಹ್ಲಿ, ಆರಂಭದಲ್ಲಿದ್ದ ಒತ್ತಡದಿಂದ ಪಾರಾಗಿರುವ ನಾಯಕ ಡು ಪ್ಲೆಸಿಸ್‌, 5 ಅರ್ಧ ಶತಕ ಬಾರಿಸಿರುವ ರಜತ್‌ ಪಾಟಿದಾರ್‌, ಆಲ್‌ರೌಂಡ್‌ ಲಯಕ್ಕೆ ಮರಳಿರುವ ಕ್ಯಾಮರಾನ್‌ ಗ್ರೀನ್‌, ಡೆತ್‌ ಓವರ್‌ಗಳಲ್ಲಿ ಸಿಡಿದು ನಿಲ್ಲುವ ದಿನೇಶ್‌ ಕಾರ್ತಿಕ್‌ ತಂಡದ ಬ್ಯಾಟಿಂಗ್‌ ಬೆನ್ನೆಲುಬಾಗಿದ್ದಾರೆ. ಆದರೆ ವಿಲ್‌ ಜಾಕ್ಸ್‌ ನಿರ್ಗಮನ ನಿಜಕ್ಕೂ ದೊಡ್ಡ ಹೊಡೆತ. ಮ್ಯಾಕ್ಸ್‌ವೆಲ್‌ ಈ ಕೊರತೆಯನ್ನು ನೀಗಿಸಬೇಕಿದೆ.

Advertisement

ಆರ್‌ಸಿಬಿಯಲ್ಲಿ ಬೌಲಿಂಗೇ ಇಲ್ಲ ಎನ್ನುವವರಿಗೆ ಎಡಗೈ ಸೀಮರ್‌ ಯಶ್‌ ದಯಾಳ್‌ ತಿರುಗೇಟು ನೀಡಲಾರಂಭಿಸಿದ್ದಾರೆ. ಸ್ವಪ್ನಿಲ್‌ ಸಿಂಗ್‌, ಕಣ್‌ì ಶರ್ಮ, ಸಿರಾಜ್‌, ಫ‌ರ್ಗ್ಯುಸನ್‌ ಮೇಲೂ ನಂಬಿಕೆ ಇಡಬಹುದಾಗಿದೆ.

ರಾಜಸ್ಥಾನ್‌ ದುರ್ಬಲವೇನಲ್ಲ

ಜಾಸ್‌ ಬಟ್ಲರ್‌ ಗೈರು ರಾಜಸ್ಥಾನ್‌ ತಂಡದ ಸಂತುಲನವನ್ನು ತಪ್ಪಿಸಿದೆ. ಆದರೂ ಜೈಸ್ವಾಲ್‌ (348 ರನ್‌), ಸ್ಯಾಮ್ಸನ್‌ (504 ರನ್‌), ರಿಯಾನ್‌ ಪರಾಗ್‌ (531 ರನ್‌) ಉತ್ತಮ ಪ್ರದರ್ಶನ ನೀಡಿದ್ದಾರೆ. ಹೆಟ್‌ಮೈರ್‌, ಜುರೆಲ್‌, ಪೊವೆಲ್‌ ಕೂಡ ಅಪಾಯಕಾರಿಗಳೇ.  ಬೌಲಿಂಗ್‌ ವಿಭಾಗವೂ ವೈವಿಧ್ಯಮಯ. ಅಶ್ವಿ‌ನ್‌, ಬೌಲ್ಟ್, ಚಹಲ್‌, ಸಂದೀಪ್‌ ಶರ್ಮ, ಬರ್ಗರ್‌ ಎಲ್ಲರೂ ಇದ್ದಾರೆ. ಆದರೂ ಲೀಗ್‌ ಹಂತದ ಕೊನೆಯಲ್ಲಿ ರಾಜಸ್ಥಾನ್‌ ಕುಸಿಯುತ್ತ ಹೋದದ್ದು ಅರ್ಥವಾಗದ ಸಂಗತಿ. ಇದರ ಲಾಭವನ್ನು ಆರ್‌ಸಿಬಿ ಎತ್ತಬೇಕಿದೆ.

ಅವಳಿ ಸೇಡಿಗೆ ಕಾದಿದೆ ಆರ್‌ಸಿಬಿ!

ರಾಜಸ್ಥಾನ್‌ ವಿರುದ್ಧ ಆರ್‌ಸಿಬಿ ಒಂದಲ್ಲ, ಎರಡು ಸೇಡಿಗೆ ಕಾದಿದೆ! ಒಂದು, 2022ರ ಕ್ವಾಲಿಫೈಯರ್‌ ಎರಡರಲ್ಲಿ ಅನುಭವಿಸಿದ ಸೋಲು; ಇನ್ನೊಂದು, ಈ ಬಾರಿಯ ಲೀಗ್‌ನಲ್ಲಿ ಎದುರಾದ ಆಘಾತ. ಆರ್‌ಸಿಬಿ ಕೊನೆಯ ಸಲ ಪ್ಲೇ ಆಫ್ ಪ್ರವೇಶಿಸಿದ್ದು 2022ರಲ್ಲಿ. ಅಂದು ಅಹ್ಮದಾಬಾದ್‌ನಲ್ಲೇ ನಡೆದ 2ನೇ ಕ್ವಾಲಿಫೈಯರ್‌ ಪಂದ್ಯದಲ್ಲಿ ರಾಜಸ್ಥಾನ್‌ ಎದುರಾಗಿತ್ತು. ಆರ್‌ಸಿಬಿ 7 ವಿಕೆಟ್‌ಗಳ ಸೋಲನುಭವಿಸಿತ್ತು. ಆರ್‌ಸಿಬಿ 8 ವಿಕೆಟಿಗೆ 157 ರನ್‌ ಗಳಿಸಿದರೆ, ರಾಜಸ್ಥಾನ್‌ 18.1 ಓವರ್‌ಗಳಲ್ಲಿ 3 ವಿಕೆಟ್‌ ನಷ್ಟಕ್ಕೆ 161 ರನ್‌ ಬಾರಿಸಿ ಗೆದ್ದು ಬಂದಿತ್ತು. ಜಾಸ್‌ ಬಟ್ಲರ್‌ ಅಜೇಯ 106 ರನ್‌ ಬಾರಿಸಿದ್ದನ್ನು ಮರೆಯುವಂತಿಲ್ಲ.

ಲೀಗ್‌ನಲ್ಲೂ ಬಟ್ಲರ್‌ ಶತಕ

ಆರ್‌ಸಿಬಿ-ರಾಜಸ್ಥಾನ್‌ ನಡುವಿನ ಈ ಬಾರಿಯ ಲೀಗ್‌ ಪಂದ್ಯ ಎ. 6ರಂದು ಜೈಪುರದಲ್ಲಿ ಏರ್ಪಟ್ಟಿತ್ತು. ಈ ಪಂದ್ಯದಲ್ಲೂ ಜಾಸ್‌ ಬಟ್ಲರ್‌ ಶತಕ ಹೊಡೆದು ತಂಡದ 6 ವಿಕೆಟ್‌ ಗೆಲುವಿಗೆ ಕಾರಣರಾಗಿದ್ದರು.

ವಿರಾಟ್‌ ಕೊಹ್ಲಿ ಸೆಂಚುರಿ ಸಾಹಸದಿಂದ (113) ಆರ್‌ಸಿಬಿ 3ಕ್ಕೆ 183 ರನ್‌ ಪೇರಿಸಿದರೆ, ರಾಜಸ್ಥಾನ್‌ 19.1 ಓವರ್‌ಗಳಲ್ಲಿ 4 ವಿಕೆಟಿಗೆ 189 ರನ್‌ ಬಾರಿಸಿ ಜಯಭೇರಿ ಮೊಳಗಿಸಿತ್ತು. ಬಟ್ಲರ್‌ ಅಜೇಯ 100, ನಾಯಕ ಸ್ಯಾಮ್ಸನ್‌ 69 ರನ್‌ ಹೊಡೆದು ತಂಡಕ್ಕೆ ಸುಲಭ ಗೆಲುವು ತಂದಿತ್ತಿದ್ದರು.

ಮೇ ತಿಂಗಳಲ್ಲಿ ಆರ್‌ಸಿಬಿ ಸೋತಿಲ್ಲ ರಾಜಸ್ಥಾನ್‌ ಒಂದೂ ಪಂದ್ಯ ಗೆದ್ದಿಲ್ಲ

ಇದೊಂದು ಸ್ವಾರಸ್ಯಕರ ಅಂಕಿಅಂಶ. 2024ರ ಐಪಿಎಲ್‌ ಕೂಟದ ಮೇ ತಿಂಗಳಲ್ಲಿ ದಾಖಲಾದ ತದ್ವಿರುದ್ಧ ಫ‌ಲಿತಾಂಶವಿದು. ಈ ತಿಂಗಳಲ್ಲಿ ಆಡಿದ ಈವರೆಗಿನ ಎಲ್ಲ 4 ಪಂದ್ಯಗಳಲ್ಲೂ ಆರ್‌ಸಿಬಿ ಜಯ ಸಾಧಿಸಿದರೆ, ರಾಜಸ್ಥಾನ್‌ ನಾಲ್ಕರಲ್ಲೂ ಸೋಲನುಭವಿಸಿದೆ; ಒಂದು ಪಂದ್ಯ ರದ್ದುಗೊಂಡಿದೆ.

ಆರ್‌ಸಿಬಿ ಬಳಗ ಗುಜರಾತ್‌ (4 ವಿಕೆಟ್‌), ಪಂಜಾಬ್‌ (60 ರನ್‌), ಡೆಲ್ಲಿ (47 ರನ್‌) ಮತ್ತು ಚೆನ್ನೈ (27 ರನ್‌) ವಿರುದ್ಧ ಜಯ ಸಾಧಿಸಿದೆ. ಆದರೆ ರಾಜಸ್ಥಾನ್‌ ತಂಡ ಹೈದರಾಬಾದ್‌ (1 ರನ್‌), ಡೆಲ್ಲಿ (20 ರನ್‌), ಚೆನ್ನೈ (5 ವಿಕೆಟ್‌) ಮತ್ತು ಪಂಜಾಬ್‌ (5 ವಿಕೆಟ್‌) ವಿರುದ್ಧ ಪರಾಭವಗೊಂಡಿದೆ. ಕೋಲ್ಕತಾ ಎದುರಿನ ಪಂದ್ಯ ಮಳೆಯಿಂದ ರದ್ದುಗೊಂಡಿತು.

ಸ್ವಪ್ನಿಲ್‌: ಆರ್‌ಸಿಬಿ ಪಾಲಿನ ಲಕ್ಕಿ ಆಟಗಾರ

ಮೊದಲ ಓವರ್‌ನಲ್ಲೇ ಎದುರಾಳಿಯ ವಿಕೆಟ್‌ ಉರುಳಿಸುವ ಮೂಲಕ ಆರ್‌ಸಿಬಿಯ ಸತತ 6 ಗೆಲುವಿಗೆ ಮುನ್ನುಡಿ ಬರೆದ ಸ್ವಪ್ನಿಲ್‌ ಸಿಂಗ್‌ ಐಪಿಎಲ್‌ನಲ್ಲಿ ನೆಲೆಯೂರುವುದಕ್ಕೆ ಬರೋಬ್ಬರಿ 16 ವರ್ಷ ತೆಗೆದುಕೊಂಡಿದ್ದಾರೆ!

2008ರಲ್ಲೇ ಇವರನ್ನು ಮುಂಬೈ ತಂಡ ಖರೀದಿಸಿದ್ದರೂ 8 ವರ್ಷಗಳ ಕಾಲ ಆಡಿಸಿರಲಿಲ್ಲ. 2017ರಲ್ಲಿ ಪಂಜಾಬ್‌ ಪರ 2 ಪಂದ್ಯ ಆಡಿದ್ದ ಸ್ವಪ್ನಿಲ್‌ ಬಳಿಕ ಬೆಂಚ್‌ ಕಾಯಿಸುತ್ತಿದ್ದರು. ಈ ವರ್ಷ ಆರ್‌ಸಿಬಿ ತಂಡದ ಪಾಲಾದ ಸ್ವಪ್ನಿಲ್‌ ಆಡಲು ಶುರು ಮಾಡಿದಾಗಿನಿಂದ ಆರ್‌ಸಿಬಿ ಸೋಲನ್ನೇ ಕಂಡಿಲ್ಲ!

Advertisement

Udayavani is now on Telegram. Click here to join our channel and stay updated with the latest news.

Next