Advertisement

Budget 2024; “ಖೇಲೋ ಇಂಡಿಯಾ’ಕ್ಕೆ 900 ಕೋಟಿ ರೂ. ಹಂಚಿಕೆ

09:47 PM Jul 23, 2024 | Team Udayavani |

ಹೊಸದಿಲ್ಲಿ: ದೇಶದಲ್ಲಿ ಕ್ರೀಡೆಯನ್ನು ಬೇರುಮಟ್ಟದಲ್ಲಿ ಬಲಪಡಿಸುವ ಉದ್ದೇಶದಿಂದ ತರಲಾಗಿರುವ ಖೇಲೋ ಇಂಡಿಯಾ ಯೋಜನೆಗಾಗಿ ಈ ವರ್ಷ ಬರೋಬ್ಬರಿ 900 ಕೋಟಿ ರೂ. ಹಣವನ್ನು ಮೀಸಲಿಡಲಾಗಿದೆ. ಕ್ರೀಡೆಗೆ ಈ ವರ್ಷ ಮೀಸಲಿಡಲಾದ ಒಟ್ಟಾರೆ 3,442.32 ಕೋಟಿ ರೂ. ಹಣದಲ್ಲಿ 900 ಕೋಟಿ ಖೇಲೋ ಇಂಡಿಯಾಕ್ಕೆ ಹಂಚಿಕೆಯಾಗಿದೆ.

Advertisement

ಕಳೆದ ಹಣಕಾಸು ವರ್ಷದಲ್ಲಿ ಖೇಲೋ ಇಂಡಿಯಾಕ್ಕೆ 880 ಕೋಟಿ ರೂ. ನೀಡಲಾಗಿತ್ತು. ಆದರೆ ಈ ಬಾರಿ ಹೆಚ್ಚುವರಿ 20 ಕೋಟಿ ರೂ. ಸೇರಿ ಒಟ್ಟು 900 ಕೋಟಿ ರೂ. ನೀಡಲಾಗಿದೆ.

ಈ ವರ್ಷ ಆಗಸ್ಟ್‌ನಲ್ಲಿ ಪ್ಯಾರಿಸ್‌ ಒಲಿಂಪಿಕ್ಸ್‌ ಮುಕ್ತಾಯಗೊಳ್ಳುವ ಮೂಲಕ ಒಲಿಂಪಿಕ್ಸ್‌ ಋತು ಕೂಡ ಕೊನೆಗೊಳ್ಳಲಿದೆ. ಕಾಮನ್ವೆಲ್ತ್‌ ಗೇಮ್ಸ್‌ ಮತ್ತು ಏಷ್ಯನ್‌ ಗೇಮ್ಸ್‌ಗೆ ಇನ್ನೂ 2 ವರ್ಷಗಳು ಬಾಕಿ ಉಳಿದಿವೆ. ಈ ಕಾರಣದಿಂದ, ಬಜೆಟ್‌ನಲ್ಲಿ ಕ್ರೀಡಾ ಸಚಿವಾಲಯಕ್ಕೆ ಕಳೆದ ಬಾರಿಗಿಂತ 45.35 ಕೋಟಿ ಹೆಚ್ಚುವರಿ ಅನುದಾನ ಸೇರಿ ಒಟ್ಟು 3,442.32 ಕೋಟಿ ರೂ. ನೀಡಲಾಗಿದೆ. ಕಳೆದ ಹಣಕಾಸು ವರ್ಷದಲ್ಲಿ ಕ್ರೀಡೆಗೆ 3,396.96 ಕೋಟಿ ಮೀಸಲಿಡಲಾಗಿತ್ತು.

2022-23ರಲ್ಲಿ ಖೇಲೋ ಇಂಡಿಯಾಕ್ಕೆ ಅಸಲಿಗೆ ಹಂಚಿಕೆಯಾದ ಹಣ 596.39 ಕೋಟಿ ರೂ.ನಷ್ಟಿದ್ದು, ಇದಕ್ಕೆ 400 ಕೋಟಿಗಿಂತಲೂ ಹೆಚ್ಚುವರಿ ಅನುದಾನ ನೀಡಿ ಒಟ್ಟಾರೆ ಖೇಲೋ ಇಂಡಿಯಾದ ಹಂಚಿಯನ್ನು 2023-24ರ ಹಣಕಾಸು ವರ್ಷಕ್ಕೆ 1000 ಕೋಟಿಗೆ ಏರಿಸಲಾಗಿತ್ತು. ಬಳಿಕ ಮತ್ತೆ ಅದನ್ನು 880 ಕೋಟಿ ರೂ.ಗೆ ಪರಿಷ್ಕರಿಸಲಾಯಿತು.

ದೇಶಾದ್ಯಾಂತ ಕ್ರೀಡಾಪ್ರತಿಭೆಗಳನ್ನು ಹೆಕ್ಕಿ ಪ್ರೋತ್ಸಾಹಿಸುವ ಉದ್ದೇಶದಿಂದ 2018ರಲ್ಲಿ ಆರಂಭಿಸಲಾಗಿರುವ ಖೇಲೋ ಇಂಡಿಯಾ ಯೂತ್‌ ಗೇಮ್ಸ್‌ (ಕೆಐವೈಜಿ) ಯೋಜನೆಗೆ ವರ್ಷದಿಂದ ವರ್ಷಕ್ಕೆ ಹೊಸ ಹೊಸ ಕಾರ್ಯಕ್ರಮಗಳನ್ನು ಸೇರಿಸಲಾಗುತ್ತಿದೆ. 2020ರಲ್ಲಿ ಖೇಲೋ ಇಂಡಿಯಾಕ್ಕೆ ಯುನಿವರ್ಸಿಟಿ ಗೇಮ್ಸ್‌ ಸೇರಿಸಲಾಯಿತು. ಅದೇ ವರ್ಷ ಖೇಲೋ ಇಂಡಿಯಾ ವಿಂಟರ್‌ ಗೇಮ್ಸ್‌ ಪರಿಚಯಿಸಲಾಯಿತು. 2023ರಲ್ಲಿ ಖೇಲೋ ಇಂಡಿಯಾ ಪ್ಯಾರಾ ಗೇಮ್ಸ್‌ ಪರಿಚಯಿಸಲಾಗಿದೆ.

Advertisement

ನೂತನ ಬಜೆಟ್‌ನಲ್ಲಿ ರಾಷ್ಟ್ರೀಯ ಕ್ರೀಡಾ ಒಕ್ಕೂಟಗಳಿಗೆ (ಎನ್‌ಎಸ್‌ಎಫ್)ಗೂ ಅನುದಾನವನ್ನು 15 ಕೋಟಿ ರೂ. ಹೆಚ್ಚಿಸಿದೆ. ಕಳೆದ ಹಣಕಾಸು ವರ್ಷ ಈ ಹಂಚಿಕೆ 325 ಕೋಟಿ ರೂ.ಯಷ್ಟಿತ್ತು. ಅದನ್ನೀಗ 340 ಕೋಟಿ ರೂ.ಗೆ ಏರಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next