ಮುಂಬಯಿ: ಕ್ರಿಕೆಟ್ ಅಭಿಮಾನಿಗಳ ಬಹುನಿರೀಕ್ಷಿತ, ಅದ್ಧೂರಿಯ ಐಪಿಎಲ್ ಕ್ರಿಕೆಟ್ ಹಬ್ಬಕ್ಕೆ ಕ್ಷಣಗಣನೆ ಆರಂಭವಾಗಿದೆ. ಐಪಿಎಲ್ 11ರ ಋತು ಎ.7ರಂದು ಉದ್ಘಾಟನೆಗೊಳ್ಳಲಿದೆ. ಉದ್ಘಾಟನೆಯ ಬಳಿಕ ರಾತ್ರಿ 8 ಗಂಟೆಗೆ ಉದ್ಘಾಟನ ಪಂದ್ಯವು ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವೆ ನಡೆಯಲಿದೆ.
ಈ ಬಾರಿಯ ಐಪಿಎಲ್ ಎ.7ರಂದು ಆರಂಭವಾಗಲಿದ್ದು ಮೇ 27ರಂದು ಕೊನೆಗೊಳ್ಳಲಿದೆ. 51 ದಿನಗಳ ಸುದೀರ್ಘ ಅವಧಿಯಲ್ಲಿ ಸಾಗಲಿರುವ ಈ ಕೂಟ ದೇಶದ 9 ತಾಣಗಳಲ್ಲಿ ನಡೆಯಲಿದೆ. ಒಟ್ಟಾರೆ 60 ಪಂದ್ಯಗಳು ನಡೆಯಲಿವೆ. ಎಂಟು ತಂಡಗಳು ಪ್ರತಿಷ್ಠಿತ ಪ್ರಶಸ್ತಿಗಾಗಿ ಹೋರಾಡಲಿವೆ.
ಎರಡು ವರ್ಷಗಳ ನಿಷೇಧದ ಬಳಿಕ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಜಸ್ಥಾನ ರಾಯಲ್ಸ್ ತಂಡಗಳು ಈ ಬಾರಿ ಐಪಿಎಲ್‌ಗೆ ಮರಳಿವೆ. ಹಾಲಿ ಚಾಂಪಿಯನ್ ಆಗಿರುವ ಮುಂಬೈ ಇಂಡಿಯನ್ಸ್ ಮೂರು ಬಾರಿ ಪ್ರಶಸ್ತಿ ಗೆದ್ದ ಸಾಧನೆ ಮಾಡಿದ್ದರೆ ಧೋನಿ ನಾಯಕತ್ವದ ಚೆನ್ನೈ ಮತ್ತು ಕೋಲ್ಕತಾ ನೈಟ್‌ರೈಡರ್ ಎರಡು ಬಾರಿ ಪ್ರಶಸ್ತಿ ಜಯಿಸಿದೆ.
ಎ.7ರ ಸಂಜೆ 5 ಗಂಟೆಗೆ ವಾಂಖೆಡೆ ಕ್ರೀಡಾಂಗಣದಲ್ಲಿ ವರ್ಣರಂಜಿತ ಉದ್ಘಾಟನಾ ಸಮಾರಂಭ ನಡೆಯಲಿದೆ. 90 ನಿಮಿಷಗಳ ಈ ಸಮಾರಂಭದಲ್ಲಿ ಬಾಲಿವುಡ್‌ನ ಖ್ಯಾತ ನಟನಟಿಯರು ಭಾಗವಹಿಸಲಿದ್ದಾರೆ. ಪರಿಣೀತಿ ಚೋಪಾx, ವರುಣ್ ಧವನ್, ಜಾಕ್ವೆಲಿನ್ ಫೆನಾಂಡಿಸ್ ಭಾಗವಹಿಸಲಿರುವ ಪ್ರಮುಖರಾಗಿದ್ದಾರೆ. ರಣವೀರ್ ಸಿಂಗ್ ಸಮಾರಂಭದಲ್ಲಿ ಭಾಗವಹಿಸಬೇಕಿತ್ತು. ಆದರೆ ಗಾಯದಿಂದಾಗಿ ಭಾಗವಹಿಸುವ ಸಾಧ್ಯತೆಯಿಲ್ಲ. 7.15ಕ್ಕೆ ಸಮಾರಂಭ ಮುಗಿಯಲಿದೆ. 7.30ಕ್ಕೆ ಉದ್ಘಾಟನ ಪಂದ್ಯದ ಟಾಸ್ ನಡೆಯಲಿದೆ. ರಾತ್ರಿ 8 ಗಂಟೆಗೆ ಪಂದ್ಯ ಆರಂಭಗೊಳ್ಳಲಿದೆ. ಇದೇ ವಾಂಖೆಡೆ ಕ್ರೀಡಾಂಗಣದಲ್ಲಿ ಮೇ 27ರಂದು ಫೈನಲ್ ಪಂದ್ಯ ನಡೆಯಲಿದೆ.
ಎ.8ರಂದು ಎರಡು ಪಂದ್ಯ ನಡೆಯಲಿರುವ ಕಾರಣ ಉದ್ಘಾಟನ ಸಮಾರಂಭದ ವೇಳೆ ರೋಹಿತ್ ಶರ್ಮ ಮತ್ತು ಎಂಎಸ್ ಧೋನಿ ಸಹಿತ ಕೆಲವು ನಾಯಕರು ಉಪಸ್ಥಿತರಿರುವ ಸಾಧ್ಯತೆಯಿದೆ. ಈ ಹಿಂದಿನ ಕೂಟದ ವೇಳೆ ಉದ್ಘಾಟನ ಪಂದ್ಯದ ಹಿಂದಿನ ದಿನ ಉದ್ಘಾಟನೆ ನಡೆಯುತ್ತಿತ್ತು. ಆದರೆ ಈ ಬಾರಿ ಉದ್ಘಾಟನ ಪಂದ್ಯದ ದಿನವೇ ನಡೆಸಲು ಸಂಘಟಕರು ನಿರ್ಧರಿಸಿದ್ದಾರೆ.