Advertisement

ಎರಡನೇ ಸೂರ್ಯೋದಯದ ನಿರೀಕ್ಷೆಯಲ್ಲಿ ಹೈದರಾಬಾದ್‌

01:16 AM Apr 05, 2021 | Team Udayavani |

ಕಳೆದ 5 ವರ್ಷಗಳಿಂದ ಐಪಿಎಲ್‌ನಲ್ಲಿ ಅತ್ಯಂತ ಸ್ಥಿರ ಪ್ರದರ್ಶನ ನೀಡುತ್ತ ಬಂದ ತಂಡಗಳಲ್ಲಿ ಸನ್‌ರೈಸರ್ ಹೈದರಾಬಾದ್‌ ತಂಡಕ್ಕೆ ವಿಶೇಷ ಸ್ಥಾನವಿದೆ. ಡೇವಿಡ್‌ ವಾರ್ನರ್‌ ಸಾರಥ್ಯದ ಈ ನವಾಬರ ನಾಡಿನ ಪಡೆ 2016ರಲ್ಲಿ ತನ್ನ ಏಕೈಕ ಐಪಿಎಲ್‌ ಕಿರೀಟವನ್ನು ಏರಿಸಿಕೊಂಡಿತ್ತು. ಅನಂತರ ಪ್ರತೀ ಸಲವೂ ಪ್ಲೇ ಆಫ್ಗೆ ಲಗ್ಗೆ ಇಡುತ್ತಲೇ ಬಂದಿದೆ. 2018ರಲ್ಲಿ ಫೈನಲ್‌ಗೆ ಲಗ್ಗೆ ಇರಿಸಿದರೂ ಪ್ರಶಸ್ತಿ ಒಲಿದಿರಲಿಲ್ಲ. ಇದೀಗ ಎರಡನೇ ಸೂರ್ಯೋದಯದ ನಿರೀಕ್ಷೆಯಲ್ಲಿದೆ.

Advertisement

ವಿದೇಶಿ ಹಾಗೂ ಸ್ವದೇಶಿ ಕ್ರಿಕೆಟಿಗರ ಸಮರ್ಥ ಹಾಗೂ ಬಲಿಷ್ಠ ಪಡೆಯನ್ನು ಹೊಂದಿರುವುದು ಹೈದರಾಬಾದ್‌ ತಂಡದ ವಿಶೇಷ. ಈ ಸಲವೂ ಅದು ತನ್ನ “ಕೋರ್‌ ಗ್ರೂಪ್‌’ ಉಳಿಸಿಕೊಂಡಿದ್ದು, ಕಳೆದ ಹರಾಜಿನಲ್ಲಿ ಕೇವಲ ಬ್ಯಾಕ್‌ ಅಪ್‌ ಆಟಗಾರರಿಗಷ್ಟೇ ಪ್ರಾಧಾನ್ಯ ನೀಡಿದೆ.

ಅಗ್ರ ಕ್ರಮಾಂಕದ ಬಲ
ಹೈದರಾಬಾದ್‌ ತಂಡದ ಅಗ್ರ ಕ್ರಮಾಂಕ ಮತ್ತು ಬೌಲಿಂಗ್‌ ಅತ್ಯಂತ ಬಲಿಷ್ಠ. ಎಲ್ಲ ದೇಶಗಳ ವಿಶ್ವ ದರ್ಜೆಯ ಆಟಗಾರರನ್ನು ಹೊಂದಿರುವುದು ಹೈದರಾಬಾದ್‌ ವೈಶಿಷ್ಟ್ಯ. ಹೀಗಾಗಿ ಇದೊಂದು ಮಿನಿ ವರ್ಲ್ಡ್ ಕ್ಲಾಸ್‌ ಟೀಮ್‌.

ನಾಯಕ ವಾರ್ನರ್‌, ಬೇರ್‌ಸ್ಟೊ, ರಾಯ್‌, ವಿಲಿಯಮ್ಸನ್‌, ಪಾಂಡೆ, ಸಾಹಾ ಅವರೆಲ್ಲ ಬ್ಯಾಟಿಂಗ್‌ ಸರದಿಯ ಪ್ರಮುಖರು.
ಬೌಲಿಂಗ್‌ ವಿಭಾಗದಲ್ಲಿ ಹೆಚ್ಚು ವೈವಿಧ್ಯವಿದೆ. ಇಲ್ಲಿ ಅಫ್ಘಾನಿಗರ ಪ್ರಾಬಲ್ಯ ಎದ್ದು ಕಾಣುತ್ತದೆ. ಪುನಃ ಫಿಟ್‌ ಆಗಿ ಫಾರ್ಮ್ ಕೂಡ ಕಂಡುಕೊಂಡಿರುವ ಭುವನೇಶ್ವರ್‌ ಕುಮಾರ್‌, ರಶೀದ್‌ ಖಾನ್‌, ಟಿ. ನಟರಾಜನ್‌, ಮುಜೀಬ್‌ ಉರ್‌ ರೆಹಮಾನ್‌, ಸಂದೀಪ್‌ ಶರ್ಮ, ಮೊಹಮ್ಮದ್‌ ನಬಿ ಯಾವುದೇ ಎದುರಾಳಿಗೆ ಸವಾಲಾಗಬಲ್ಲರು. ಫಾಸ್ಟ್‌ ಮತ್ತು ಸ್ಪಿನ್‌ ಎರಡೂ ಸಮತೋಲನದಲ್ಲಿದೆ. ಬೇರೆ ಯಾವುದೇ ತಂಡದಲ್ಲಿ ಇಷ್ಟೊಂದು ಬೌಲಿಂಗ್‌ ವೆರೈಟಿ ಕಾಣಸಿಗದು.

ಮಿಡ್ಲ್ ಆರ್ಡರ್‌ ದೌರ್ಬಲ್ಯ
ತಂಡದ ಮಿಡ್ಲ್ ಆರ್ಡರ್‌ ತುಸು ದುರ್ಬಲ. ಅನನುಭವಿಗಳಾದ ಪ್ರಿಯಂ ಗರ್ಗ್‌, ಅಭಿಷೇಕ್‌ ಶರ್ಮ ಮತ್ತು ಅಬ್ದುಲ್‌ ಸಮದ್‌ ಅವರನ್ನೇ ಹೆಚ್ಚು ಅವಲಂಬಿಸಿದೆ. ಕೆಳ ಕ್ರಮಾಂಕದಲ್ಲಿ ಆಲ್‌ರೌಂಡರ್‌ ಹೋಲ್ಡರ್‌ ಆಸರೆಯಾಗಬಲ್ಲರು. ಆದರೆ ಫಿನಿಶರ್ ಕೊರತೆ ಎದ್ದು ಕಾಣುತ್ತಿದೆ. ವಿಜಯ್‌ ಶಂಕರ್‌, ಈ ಬಾರಿ ಸೇರ್ಪಡೆಗೊಂಡ ಕೇದಾರ್‌ ಜಾಧವ್‌ ತಮ್ಮ ಅವಕಾಶವನ್ನು ಹೇಗೆ ಬಳಸಿಕೊಳ್ಳಬಹುದು ಎಂಬುದೊಂದು ನಿರೀಕ್ಷೆ.

Advertisement

ವಿದೇಶಿಗರ ಪ್ರಾಬಲ್ಯ
ಹೈದರಾಬಾದ್‌ ತಂಡದಲ್ಲಿ ವಿದೇಶಿಗರ ಪ್ರಾಬಲ್ಯ ಜಾಸ್ತಿ. ಇಲ್ಲಿ ವಾರ್ನರ್‌, ಬೇರ್‌ಸ್ಟೊ, ರಶೀದ್‌, ಹೋಲ್ಡರ್‌ ಖಾಯಂ ಸದಸ್ಯರು. ಹೀಗಾಗಿ ಉಳಿದ ಫಾರಿನ್‌ ಸ್ಟಾರ್ ಅವಕಾಶಕ್ಕಾಗಿ ಕಾಯುವುದು ಅನಿವಾರ್ಯ. ಜಾಸನ್‌ ರಾಯ್‌, ಕೇನ್‌ ವಿಲಿಯಮ್ಸನ್‌ ಅವರಂಥ ಬ್ಯಾಟ್ಸ್‌ಮನ್‌ಗಳೂ ಈ ಸಾಲಲ್ಲಿದ್ದಾರೆ ಎನ್ನುವುದನ್ನು ನಂಬಲೇಬೇಕು!

ಮದ್ಯದ ಲಾಂಛನ ಬೇಡವೆಂದ ಅಲಿ
ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಇಂಗ್ಲೆಂಡ್‌ ಆಟಗಾರ ಮೊಯಿನ್‌ ಅಲಿ ಅವರ ವಿಶೇಷ ಮನವಿಯೊಂದಕ್ಕೆ ಫ್ರಾಂಚೈಸಿ ಸಮ್ಮತಿ ಸೂಚಿಸಿದೆ. ಮದ್ಯದ ಬ್ರ್ಯಾಂಡ್‌ ಇರುವ ನಿರ್ದಿಷ್ಟ ಲಾಂಛನವನ್ನು ಜೆರ್ಸಿ ಮೇಲೆ ಧರಿಸಲು ತಾನು ಬಯಸುವುದಿಲ್ಲ, ಇದನ್ನು ತೆಗೆಯಬಹುದೇ ಎಂದು ಅಲಿ ಕೇಳಿಕೊಂಡಿದ್ದರು. ಇದಕ್ಕೆ ಫ್ರಾಂಚೈಸಿ ಒಪ್ಪಿಗೆ ನೀಡಿದ್ದು, ಅವರ ಜೆರ್ಸಿಯಲ್ಲಿದ್ದ “ಎಸ್‌ಎನ್‌ಜೆ 10000′ ಲೋಗೊವನ್ನು ತೆಗೆದುಹಾಕಿದೆ.

ಕಳೆದ ವರ್ಷ ಆರ್‌ಸಿಬಿಯಲ್ಲಿದ್ದ ಮೊಯಿನ್‌ ಅಲಿ, ಈ ಬಾರಿ 7 ಕೋಟಿ ರೂ.ಗಳ ದೊಡ್ಡ ಮೊತ್ತಕ್ಕೆ ಚೆನ್ನೈ ಪಾಲಾಗಿದ್ದಾರೆ.

ತಂಡ: ಡೇವಿಡ್‌ ವಾರ್ನರ್‌ (ನಾಯಕ), ಕೇನ್‌ ವಿಲಿಯಮ್ಸನ್‌, ವಿರಾಟ್‌ ಸಿಂಗ್‌, ಮನೀಷ್‌ ಪಾಂಡೆ, ಪ್ರಿಯಂ ಗರ್ಗ್‌, ವೃದ್ಧಿಮಾನ್‌ ಸಾಹಾ, ಜಾನಿ ಬೇರ್‌ಸ್ಟೊ, ಜಾಸನ್‌ ರಾಯ್‌, ಶ್ರೀವತ್ಸ ಗೋಸ್ವಾಮಿ, ವಿಜಯ್‌ ಶಂಕರ್‌, ಮೊಹಮ್ಮದ್‌ ನಬಿ, ಕೇದಾರ್‌ ಜಾಧವ್‌, ಜೆ. ಸುಚಿತ್‌, ಜಾಸನ್‌ ಹೋಲ್ಡರ್‌, ಅಭಿಷೇಕ್‌ ಶರ್ಮ, ಅಬ್ದುಲ್‌ ಸಮದ್‌, ಭುವನೇಶ್ವರ್‌ ಕುಮಾರ್‌, ರಶೀದ್‌ ಖಾನ್‌, ಟಿ. ನಟರಾಜನ್‌, ಸಂದೀಪ್‌ ಶರ್ಮ, ಖಲೀಲ್‌ ಅಹ್ಮದ್‌, ಸಿದ್ಧಾರ್ಥ್ ಕೌಲ್‌, ಬಾಸಿಲ್‌ ಥಂಪಿ, ಶಾಬಾಜ್‌ ನದೀಂ, ಮುಜೀಬ್‌ ಉರ್‌ ರೆಹಮಾನ್‌.

ಚಾಂಪಿಯನ್‌: 01
2016: ಆರ್‌ಸಿಬಿ ವಿರುದ್ಧ 8 ರನ್‌ ಜಯ

ಕೆಕೆಆರ್‌ ಸೇರಿದ ಗುರುಕೀರತ್‌
ಕೆಕೆಆರ್‌ ತಂಡದ ಆಟಗಾರ ರಿಂಕು ಸಿಂಗ್‌ ಮೊಣಕಾಲಿನ ಗಾಯಕ್ಕೆ ಸಿಲುಕಿದ ಕಾರಣ ಐಪಿಎಲ್‌ ಕೂಟದಿಂದ ಹೊರಗುಳಿಯಲಿದ್ದಾರೆ. ಇವರ ಬದಲು ಗುರುಕೀರತ್‌ ಸಿಂಗ್‌ ಮಾನ್‌ ಅವರನ್ನು ಸೇರಿಸಿಕೊಳ್ಳಲಾಗಿದೆ ಎಂದು ಫ್ರಾಂಚೈಸಿ ತನ್ನ ಪ್ರಕಟನೆಯಲ್ಲಿ ತಿಳಿಸಿದೆ.

30 ವರ್ಷದ ಪಂಜಾಬ್‌ ಆಲ್‌ರೌಂಡರ್‌ ಗುರುಕೀರತ್‌ ಸಿಂಗ್‌ ಮಾನ್‌ 2012ರಿಂದೀಚೆ 41 ಐಪಿಎಲ್‌ ಪಂದ್ಯಗಳಲ್ಲಿ ಆಡಿದ್ದಾರೆ. ಪಂಜಾಬ್‌, ಡೆಲ್ಲಿ ಮತ್ತು ಆರ್‌ಸಿಬಿ ತಂಡಗಳನ್ನು ಪ್ರತಿನಿಧಿಸಿದ್ದಾರೆ. 2 ಅರ್ಧ ಶತಕ ಒಳಗೊಂಡ 511 ರನ್‌ ಒಟ್ಟುಗೂಡಿಸಿದ್ದಾರೆ.
50 ಲಕ್ಷ ರೂ. ಮೂಲ ಬೆಲೆಯ ಮಾನ್‌ ಕಳೆದ ಹರಾಜಿನಲ್ಲಿ ಮಾರಾಟವಾಗಿರಲಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next