ಮುಂಬಯಿ: ಬಾಲಿವುಡ್ ನಟ, ನಿರ್ಮಾಪಕ ಅರ್ಬಾಜ್ ಖಾನ್‌ನಿಂದ ಶುರುವಾದ ಐಪಿಎಲ್ ಬೆಟ್ಟಿಂಗ್ ಹಗರಣ ಈಗ ಮಹತ್ವದ ತಿರುವು ಪಡೆದುಕೊಂಡಿದೆ. ಪ್ರಕರಣದಲ್ಲಿ ಕುಖ್ಯಾತ ಪಾತಕಿ ಮಂಗಳೂರು ಮೂಲದ ರವಿ ಪೂಜಾರಿ ಹೆಸರು ಕೇಳಿಬಂದಿದೆ. ಬಂಧಿತರಾಗಿರುವ ದೇಶದ ಕುಖ್ಯಾತ ಬುಕ್ಕಿ ಸೋನು ಜಲನ್, ರವಿ ಪೂಜಾರಿಯನ್ನು ಬಳಸಿಕೊಂಡು ಹಣ ವಸೂಲಿ ಮಾಡಲು ಯತ್ನಿಸಿದ್ದ ಎಂದು ಥಾಣೆ ಪೊಲೀಸ್ ವಿಚಾರಣೆ ವೇಳೆ ತಿಳಿದುಬಂದಿದೆ.
ವಸೂಲಿಗೆ ರವಿ ಪೂಜಾರಿ ನೆರವು
ಅರ್ಬಾಜ್ ಖಾನ್, ಸೋನು ಜತೆ ಬೆಟ್ಟಿಂಗ್ ನಡೆಸಿ 2.80 ಕೋಟಿ ರೂ. ಕಳೆದುಕೊಂಡಿದ್ದ. ಆದರೆ ಈ ಹಣವನ್ನು ಅರ್ಬಾಜ್ ಪಾವತಿಸಿರಲಿಲ್ಲ ಎಂದು ಸೋನು ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ. ಈ ಸಂಬಂಧ ಅರ್ಬಾಜ್ ಹೇಳಿಕೆಯನ್ನೂ ಥಾಣೆ ಪೊಲೀಸರು ಪಡೆದುಕೊಂಡಿದ್ದಾರೆ. ಬೆಟ್ಟಿಂಗ್ ಮಾಡಿ ಸೋತವರು ಹಣ ಕೊಡದಿದ್ದರೆ ಅವರಿಂದ ವಸೂಲಿ ಮಾಡಲು ರವಿ ಪೂಜಾರಿ ಸಹಾಯ ಪಡೆದುಕೊಳ್ಳಲಾಗುತ್ತಿತ್ತು ಎಂದು ಸೋನು ಹೇಳಿದ್ದಾನೆ. ಇದು ಪ್ರಕರಣದ ವ್ಯಾಪ್ತಿಯನ್ನು ದೊಡ್ಡದಾಗಿಸಿದೆ.
ಸೋನು ಜಲನ್‌ನನ್ನು ಈ ಹಿಂದೆಯೂ ಮುಂಬಯಿ ಪೊಲೀಸರು ಬಂಧಿಸಿದ್ದರು. ಈ ಬಾರಿ ಅವರ ವಿರುದ್ಧ ಮೋಕಾ ಕಾಯ್ದೆ ಪ್ರಕಾರ ದೂರು ದಾಖಲಿಸಿಕೊಳ್ಳಲಾಗುವುದು. ಹೀಗಾದರೆ ಆರೋಪಿ ಜಾಮೀನು ಪಡೆಯಲು ಸಾಧ್ಯವಾಗುವುದಿಲ್ಲ. ಅಲ್ಲದೇ ಪೊಲೀಸರಿಗೆ ಆರೋಪಪಟ್ಟಿ ಸಲ್ಲಿಸಲು 6 ತಿಂಗಳು ಸಮಯಾವಕಾಶ ಸಿಗಲಿದೆ.