ಲಂಡನ್: ಐಸಿಸಿ ವಿಶ್ವಕಪ್ ಗಳ ಬಳಿಕ ಭಾರತದ ಐಪಿಎಲ್ ಪಂದ್ಯಾವಳಿ ಕ್ರಿಕೆಟ್ ಜಗತ್ತಿನ ಅತ್ಯುತ್ತಮ ಕೂಟವಾಗಿದೆ ಎಂದು ಇಂಗ್ಲೆಂಡಿನ ಬ್ಯಾಟ್ಸ್‌ಮನ್ ಜಾಸ್ ಬಟ್ಲರ್ ಅಭಿಪ್ರಾಯಪಟ್ಟಿದ್ದಾರೆ. ಇಂಗ್ಲೆಂಡಿನ ಕ್ರಿಕೆಟ್ ಬೆಳವಣಿಗೆಯಲ್ಲೂ ಐಪಿಎಲ್ ಪ್ರಮುಖ ಪಾತ್ರ ವಹಿಸಿದೆ ಎಂದ ಅವರು, ಈ ವರ್ಷ ಐಪಿಎಲ್ ಅನಿಶ್ಚಿತತೆಯಲ್ಲಿ ಸಿಲುಕಿದ್ದಕ್ಕೆ ಬೇಸರವನ್ನೂ ವ್ಯಕ್ತಪಡಿಸಿದರು.
“ಇಂಗ್ಲಿಷ್ ಕ್ರಿಕೆಟಿನ ಬೆಳವಣಿಗೆ ಯಲ್ಲಿ ಐಪಿಎಲ್ ಪ್ರಮುಖ ಪಾತ್ರ ವಹಿಸಿದ್ದರಲ್ಲಿ ಅನುಮಾನವೇ ಇಲ್ಲ. ಇದರಿಂದ ಅದೆಷ್ಟೋ ಮಂದಿ ಕ್ರಿಕೆಟಿಗರು ಅವಕಾಶ ಪಡೆದು ಮಿಂಚುತ್ತಿದ್ದಾರೆ’ ಎಂದು ಬಿಬಿಸಿಯ “ದಿ ದೂಸ್ರಾ’ ಕಾರ್ಯಕ್ರಮದಲ್ಲಿ ಬಟ್ಲರ್ ಹೇಳಿದರು.
“ನಾನು ಐಪಿಎಲ್ ಆಡುವು ದನ್ನು ಯಾವತ್ತೂ ಇಷ್ಟಪಡು ತ್ತೇನೆ. ನನ್ನ ಪ್ರಕಾರ ಇದು ವಿಶ್ವಕಪ್ ಹೊರತುಪಡಿಸಿದರೆ ಜಗತ್ತಿನ ಅತ್ಯುತ್ತಮ ಕ್ರಿಕೆಟ್ ಪಂದ್ಯಾವಳಿ ಯಾಗಿದೆ’ ಎಂದು ವಿಶ್ವಕಪ್ ವಿಜೇತ ಇಂಗ್ಲೆಂಡ್ ತಂಡದ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಆಗಿರುವ ಬಟ್ಲರ್ ಅಭಿಪ್ರಾಯಪಟ್ಟರು. ಜಾಸ್ ಬಟ್ಲರ್ ಈವರೆಗೆ ಐಪಿಎಲ್‌ನಲ್ಲಿ ಎರಡು ಫ್ರಾಂಚೈಸಿಗಳನ್ನು ಪ್ರತಿನಿಧಿಸಿದ್ದಾರೆ. 2016-17ರಲ್ಲಿ ಮುಂಬೈ ಇಂಡಿಯನ್ಸ್ ಹಾಗೂ 2018ರಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಆಡಿದ್ದಾರೆ.
ಐಪಿಎಲ್ ಪಂದ್ಯ ಅಮೋಘ
“ಐಪಿಎಲ್‌ನ ಕೆಲವು ಪಂದ್ಯಗಳು ನಿಜಕ್ಕೂ ಅಮೋಘ. ಕೊಹ್ಲಿ, ಎಬಿಡಿ, ಗೇಲ್ ಅವರನ್ನು ಹೊಂದಿದ್ದ ಆರ್‌ಸಿಬಿ; ಬುಮ್ರಾ, ಸ್ಟೇನ್, ಮಾಲಿಂಗ ಅವರನ್ನು ಹೊಂದಿದ್ದ ಮುಂಬೈ ತಂಡಗಳನ್ನು ಕಲ್ಪಿಸಿಕೊಳ್ಳುವುದೇ ಖುಷಿಯ ಸಂಗತಿ. ಇದೊಂದು ಫ್ಯಾಂಟಸಿ ಕ್ರಿಕೆಟ್ ಇದ್ದಂತೆ. ಬೆಳೆಯುತ್ತಿರುವ ಮಕ್ಕಳು ಇದನ್ನು ಬಹಳ ಆಸಕ್ತಿಯಿಂದ ಗಮನಿಸುತ್ತಾರೆ’ ಎಂದರು ಬಟ್ಲರ್.
“ಐಪಿಎಲ್‌ನಲ್ಲಿ ಪಾಲ್ಗೊಳ್ಳಲು ಇಂಗ್ಲೆಂಡ್ ಕ್ರಿಕೆಟಿಗರಿಗೆ ಪ್ರತ್ಯೇಕ ದಾರಿಯೊಂದನ್ನು ನಿರ್ಮಿಸಿಕೊಡು ವಲ್ಲಿ ಕೆವಿನ್ ಪೀಟರ್‌ಸನ್ ವಹಿಸಿದ ಪಾತ್ರ ಅಮೋಘ’ ಎಂದೂ ಬಟ್ಲರ್ ಈ ಸಂದರ್ಭದಲ್ಲಿ ಪ್ರಶಂಸಿಸಿದರು.