ಸಿಡ್ನಿ: ಕೋವಿಡ್ ಕಾರಣದಿಂದ ಇಂಡಿಯನ್ ಪ್ರೀಮಿಯರ್ ಲೀಗ್ ಅರ್ಧಕ್ಕೆ ಅಮಾನತು ಆದ ಹಿನ್ನೆಲೆಯಲ್ಲಿ ತವರಿಗೆ ತೆರಳಿದ್ದ ಆಸ್ಟ್ರೇಲಿಯಾ ಆಟಗಾರರು ಇಂದು ಕೊನೆಗೂ ತಮ್ಮ ಮನೆಗೆ ತಲುಪಿದ್ದಾರೆ. ಅಂದಹಾಗೆ ಮೇ 4ರಂದು ಐಪಿಎಲ್ ಕೂಟವನ್ನು ಅಮಾನತು ಮಾಡಲಾಗಿತ್ತು.
ಭಾರತದಿಂದ ಆಸ್ಟ್ರೇಲಿಯಾಗೆ ವಿಮಾನ ಪ್ರಯಾಣವನ್ನು ರದ್ದು ಮಾಡಲಾಗಿದ್ದ ಪರಿಣಾಮ ಆಟಗಾರರು ಮಾಲ್ಡೀವ್ಸ್ ಗೆ ತೆರಳಿದ್ದರು. ಅಲ್ಲಿಂದ ಸಿಡ್ನಿಗೆ ತೆರಳಿ ಅಲ್ಲಿಂದ 14 ದಿನಗಳ ಕಾಲ ಕ್ವಾರಂಟೈನ್ ಗೆ ಒಳಗಾಗಿದ್ದರು.
ಸ್ಟೀವ್ ಸ್ಮಿತ್, ಡೇವಿಡ್ ವಾರ್ನರ್, ಪ್ಯಾಟ್ ಕಮಿನ್ಸ್ ಸೇರಿದಂತೆ 38 ಆಟಗಾರರು, ಕೋಚ್ ಗಳು, ಅಧಿಕಾರಿಗಳು ಮತ್ತು ಕಮೆಂಟೇಟರ್ಸ್ ಇಂದು ಕ್ವಾರಂಟೈನ್ ಅವಧಿ ಮುಗಿಸಿ ತಮ್ಮಗಳ ಮನೆಗೆ ತೆರಳಿದ್ದಾರೆ.
ಇದನ್ನೂ ಓದಿ:ವಿಂಡೀಸ್ ಕ್ರಿಕೆಟಿಗರೆಲ್ಲರ ಕೋವಿಡ್ ಫಲಿತಾಂಶ ನೆಗೆಟಿವ್
ವಿಮಾನ ಪ್ರಯಾಣದ ಖರ್ಚು, ಮಾಲ್ಡೀವ್ಸ್ ಮತ್ತು ಸಿಡ್ನಿ ಹೋಟೆಲ್ ಗಳ ಖರ್ಚನ್ನು ಬಿಸಿಸಿಐ ಸ್ವತಃ ಭರಿಸಿದೆ. ಬಹಳ ಸಮಯದ ಬಳಿಕ ಕುಟುಂಬದ ಜೊತೆ ಕಾಲ ಕಳೆಯುವ ಅವಕಾಶ ದೊರೆತಿದ್ದು ಸಂತಸ ನೀಡಿದೆ ಎಂದು ಬೌಲರ್ ಜೇಸನ್ ಬೆಹ್ರಾಂಡಾಫ್ ಹೇಳಿದ್ದಾರೆ.
ಸದ್ಯ ಅಮಾನತಾಗಿರುವ ಐಪಿಎಲ್ ಕೂಟವನ್ನು ಮತ್ತೆ ಮುಂದುವರಿಸಿಲು ಬಿಸಿಸಿಐ ನಿರ್ಧರಿಸಿದೆ. ಸಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳಲ್ಲಿ ಕೂಟವನ್ನು ಯುಎಇ ನಲ್ಲಿ ನಡೆಸಲು ಬಿಸಿಸಿಐ ತೀರ್ಮಾನಿಸಿದೆ.