ಬೆಂಗಳೂರು: 2024ರ ಇಂಡಿಯನ್ ಪ್ರೀಮಿಯರ್ ಲೀಗ್ ಕೊನೆಯ ಹಂತಕ್ಕೆ ಬಂದಿದೆ. 17ನೇ ಸೀಸನ್ ನಲ್ಲಿ ಇನ್ನು ಕೇವಲ ಫೈನಲ್ ಪಂದ್ಯ ಮಾತ್ರ ಬಾಕಿಯಿದೆ. ಲೀಗ್ ಹಂತದ ಪಂದ್ಯಗಳು ಮುಗಿದು, ಕ್ವಾಲಿಫೈಯರ್ ಪಂದ್ಯಗಳ ಬಳಿಕ ಕೋಲ್ಕತ್ತಾ ಮತ್ತು ಹೈದರಾಬಾದ್ ತಂಡಗಳು ಫೈನಲ್ ಟಿಕೆಟ್ ಪಡೆದಿದೆ.
ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ತಂಡಗಳು ರವಿವಾರ ಚೆನ್ನೈನಲ್ಲಿ ನಡೆಯುವ ಫೈನಲ್ ಪಂದ್ಯದಲ್ಲಿ ಮುಖಾಮುಖಿಯಾಗಲಿದೆ.
ಈ ಬಾರಿಯ ಕೂಟದಲ್ಲಿ ಹಲವಾರು ಬ್ಯಾಟರ್ ಗಳು ಮತ್ತು ಬೌಲರ್ ಅಸಾಧಾರಣ ಪ್ರದರ್ಶನ ನೀಡಿದ್ದಾರೆ. ಆರ್ ಸಿಬಿ ಬ್ಯಾಟರ್ ವಿರಾಟ್ ಕೊಹ್ಲಿ ಅವರು ಸದ್ಯ ಆರೆಂಜ್ ಕ್ಯಾಪ್ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಅವರು 15 ಪಂದ್ಯಗಳಿಂದ 741 ರನ್ ಗಳಿಸಿದ್ದಾರೆ. ಫೈನಲ್ ತಲುಪಿರುವ ಹೈದರಾಬಾದ್ ಬ್ಯಾಟರ್ ಟ್ರಾವಿಸ್ ಹೆಡ್ ಈ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದು ಅವರು 567 ರನ್ ಮಾಡಿದ್ದಾರೆ. ವಿರಾಟ್ ಗಿಂತ ಹೆಡ್ 174 ರನ್ ಹಿಂದೆ ಇದ್ದಾರೆ.
ಉಳಿದ ಒಂದು ಪಂದ್ಯದಿಂದ ಹೆಡ್ ಅವರು 175 ರನ್ ಗಳಿಸುವುದು ಕಷ್ಟ. ಪವಾಡ ಸಂಭವಿಸದ ಹೊರತು ವಿರಾಟ್ ಕೊಹ್ಲಿ ಅವರು ಈ ಬಾರಿ ಆರೆಂಜ್ ಕ್ಯಾಪ್ ಗೆಲ್ಲುವುದು ಗ್ಯಾರಂಟಿ.
ಇನ್ನು ಬೌಲರ್ ಗಳ ಪರ್ಪಲ್ ಕ್ಯಾಪ್ ಪಟ್ಟಿಯಲ್ಲಿ ಪಂಜಾಬ್ ಕಿಂಗ್ಸ್ ಬೌಲರ್ ಹರ್ಷಲ್ ಪಟೇಲ್ ಮೊದಲ ಸ್ಥಾನದಲ್ಲಿದ್ದಾರೆ. ಅವರು 14 ಪಂದ್ಯಗಳಿಂದ 24 ವಿಕೆಟ್ ಪಡೆದಿದ್ದಾರೆ. ಫೈನಲ್ ಪ್ರವೇಶಿಸಿದ ಕೆಕೆಆರ್ ಬೌಲರ್ ವರುಣ್ ಚಕ್ರವರ್ತಿ 20 ವಿಕೆಟ್ ಪಡೆದಿದ್ದಾರೆ. ಮತ್ತೊಂದೆಡೆ ಹೈದರಾಬಾದ್ ಬೌಲರ್ ಟಿ ನಟರಾಜ್ ಅವರು 19 ವಿಕೆಟ್ ಪಡೆದಿದ್ದಾರೆ.
ಪರ್ಪಲ್ ಕ್ಯಾಪ್ ಪಟ್ಟಿಯಲ್ಲಿ ಹರ್ಷಲ್ ಪಟೇಲ್ ಅವರನ್ನು ಮೀರಿಸಲು ವರುಣ್ ಮತ್ತು ನಟರಾಜ್ ಅವರಿಗೆ ಕ್ರಮವಾಗಿ 4 ಮತ್ತು 5 ವಿಕೆಟ್ ಗಳ ಅಗತ್ಯವಿದೆ.
ಆರೆಂಜ್ ಕ್ಯಾಪ್- ಪರ್ಪಲ್ ಕ್ಯಾಪ್ ಪಟ್ಟಿ