ನವದೆಹಲಿ: ಐಪಿಎಲ್ 17ನೇ ಆವೃತ್ತಿ ಶುಕ್ರವಾರದಿಂದ ಚೆನ್ನೈನ ಎಂ.ಎ.ಚಿದಂಬರಂ ಅಂಕಣದಲ್ಲಿ ಆರಂಭವಾಗಲಿದೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ವಿಶ್ವಕಪ್‌ಗಿರುವಷ್ಟೇ ಪ್ರಾಮುಖ್ಯತೆ, ಲೀಗ್ ಮಾದರಿಯಲ್ಲಿ ಐಪಿಎಲ್‌ಗಿದೆ. ಹಣದ ಹೊಳೆಯನ್ನೇ ಹರಿಸುವ, ರೋಮಾಂಚಕತೆ, ತೀವ್ರ ಕೌತುಕತೆಗಳಿಗೆಲ್ಲ ಸಾಕ್ಷಿಯಾಗುವ ಐಪಿಎಲ್‌ಗಾಗಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಮಾ.22ರಂದು ಶುರುವಾಗುವ ಈ ಬೃಹತ್ ಕೂಟ, ಮೇ 26ಕ್ಕೆ ಮುಗಿಯುವ ಸಾಧ್ಯತೆಯಿದೆ. ಸದ್ಯ ಏ.7ರವರೆಗಿನ ವೇಳಾಪಟ್ಟಿ ಮಾತ್ರ ಪ್ರಕಟವಾಗಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು, ಚೆನ್ನೈ ಸೂಪರ್ ಕಿಂಗ್ಸ್, ಮುಂಬೈ ಇಂಡಿಯನ್ಸ್, ಕೋಲ್ಕತ ನೈಟ್‌ರೈಡರ್ಸ್, ಪಂಜಾಬ್ ಕಿಂಗ್ಸ್, ಡೆಲ್ಲಿ ಕ್ಯಾಪಿಟಲ್ಸ್, ರಾಜಸ್ಥಾನ್ ರಾಯಲ್ಸ್, ಸನ್‌ರೈಸರ್ಸ್ ಹೈದ್ರಾಬಾದ್, ಲಕ್ನೋ ಸೂಪರ್ ಜೈಂಟ್ಸ್ ಗುಜರಾತ್ ಟೈಟಾನ್ಸ್ ತಂಡಗಳು ಪ್ರಶಸ್ತಿಗಾಗಿ ಸೆಣೆಸಲಿವೆ. ಪ್ರತೀ ತಂಡವೂ ತಮ್ಮದೇ ಇತಿಹಾಸ, ವಿಶೇಷತೆ ಹೊಂದಿವೆ.
ಉದ್ಘಾಟನಾ ಪಂದ್ಯದಲ್ಲಿ ಆಡುವ ತಂಡಗಳನ್ನು ನಿರ್ಧರಿಸಲು, ಬಿಸಿಸಿಐ ಒಂದು ಸಿದ್ಧಸೂತ್ರವನ್ನು ಅನುಸರಿಸುತ್ತಿತ್ತು. ಈ ಬಾರಿ ಆ ಕ್ರಮವನ್ನು ಬಿಡಲಾಗಿದೆ. ಸಾಮಾನ್ಯವಾಗಿ ಹಿಂದಿನ ಬಾರಿಯ ಚಾಂಪಿಯನ್ ಮತ್ತು ರನ್ನರ್ ಅಪ್ ತಂಡಗಳ ನಡುವೆ, ಮುಂದಿನ ಐಪಿಎಲ್‌ನ ಉದ್ಘಾಟನಾ ಪಂದ್ಯ ನಡೆಯುತ್ತದೆ. ಈ ಬಾರಿ ಹಿಂದಿನ ಬಾರಿಯ ಚಾಂಪಿಯನ್ ಚೆನ್ನೈ ಮೊದಲ ಪಂದ್ಯ ಆಡಲಿದ್ದರೂ, ರನ್ನರ್ ಅಪ್ ಗುಜರಾತ್ ಟೈಟಾನ್ಸ್ ಆಡುತ್ತಿಲ್ಲ. ಅದರ ಬದಲು ಫಾ ಡು ಪ್ಲೆಸಿಸ್ ನಾಯಕತ್ವದ ಆರ್‌ಸಿಬಿ ಮೈದಾನಕ್ಕಿಳಿಯಲಿದೆ. ಆರ್‌ಸಿಬಿಯಲ್ಲಿ ವಿರಾಟ್ ಕೊಹ್ಲಿ, ಮ್ಯಾಕ್ಸ್‌ವೆಲ್‌ರಂತಹ ತಾರೆಯರಿದ್ದರೆ, ಚೆನ್ನೈನಲ್ಲಿ ಎಂ.ಎಸ್. ಧೋನಿಯಂತಹ ಮಿನುಗುತಾರೆಯಿದ್ದಾರೆ.
ಈ ಬಾರಿ ಒಟ್ಟು 74 ಪಂದ್ಯಗಳು ನಡೆಯಲಿವೆ. ಪಂದ್ಯಗಳ ಸಂಖ್ಯೆಯನ್ನು ಕಡಿಮೆ ಮಾಡಲು ಹಿಂದಿನ ಆವೃತ್ತಿಯ ಮಾದರಿಯನ್ನೇ ಉಳಿಸಿಕೊಳ್ಳಲಾಗಿದೆ. ಅಂದರೆ 10 ತಂಡಗಳನ್ನು ಎರಡು ಗುಂಪುಗಳನ್ನಾಗಿ ವಿಭಾಗಿಸಿ, ಆಡಿಸಲಾಗುತ್ತದೆ. ಹಲವು ಹೊಸ ನಿಯಮಗಳನ್ನು ಅಳವಡಿಸಿಕೊಳ್ಳಲಾಗಿದೆ. ಮುಖ್ಯವಾಗಿ ಒಬ್ಬ ವೇಗದ ಬೌಲರ್ ಒಂದು ಓವರ್‌ನಲ್ಲಿ ಎರಡು ಬೌನ್ಸರ್ ಎಸೆಯಬಹುದು! ಇದು ಪಂದ್ಯವನ್ನು ರೋಚಕಗೊಳಿಸಲಿದೆ.
ತಾರೆಯರ ಸಮರ: ಬಹುತೇಕ ಎಂ.ಎಸ್.ಧೋನಿಗೆ ಇದು ವಿದಾಯದ ಕೂಟ ಎಂದೇ ಹೇಳಲಾಗಿದೆ. ಈಗಾಗಲೇ ಅವರು ತಂಡದ ನಾಯಕತ್ವವನ್ನು 27 ವರ್ಷದ ಋತುರಾಜ್ ಗಾಯಕ್ವಾಡ್‌ಗೆ ಹಸ್ತಾಂತರಿಸಿದ್ದಾರೆ. ಧೋನಿ ಸಹಜವಾಗಿಯೇ ಮುಖ್ಯ ಆಕರ್ಷಣೆ. ಇನ್ನು ಒಮ್ಮೆಯೂ ಐಪಿಎಲ್ ಪ್ರಶಸ್ತಿ ಗೆಲ್ಲದ ವಿರಾಟ್ ಕೊಹ್ಲಿಗೆ ಈ ಬಾರಿಯಾದರೂ, ಕಿರೀಟ ಗೆಲ್ಲಬೇಕೆಂಬ ತವಕವಿದೆ. ಮುಂಬೈ ಇಂಡಿಯನ್ಸ್ ಈ ಬಾರಿ ಹಾರ್ದಿಕ್ ಪಾಂಡ್ಯ ನೂತನ ನಾಯಕರಾಗಿದ್ದಾರೆ. ಸೂಪರ್‌ಸ್ಟಾರ್ ರೋಹಿತ್ ಶರ್ಮ ಮಾಮೂಲಿ ಆಟಗಾರನಾಗಿ ಕಾಣಿಸಿಕೊಳ್ಳಲಿದ್ದಾರೆ. ಗುಜರಾತ್ ಟೈಟಾನ್ಸ್ ತಂಡವನ್ನು ಶುಭಮನ್ ಗಿಲ್ ಮುನ್ನಡೆಸಲಿದ್ದಾರೆ. ಹೈದ್ರಾಬಾದ್ ಸಾರಥ್ಯ ಸಂಜು ಸ್ಯಾಮ್ಸನ್ ಹೆಗಲೇರಿದೆ. ಡೆಲ್ಲಿ ಕ್ಯಾಪಿಟಲ್ಸ್ ಪರ ರಿಷಭ್ ಪಂತ್ ಮತ್ತೆ ಕಣಕ್ಕಿಳಿಯಲಿದ್ದಾರೆ. ಲಕ್ನೋ ಜೈಂಟ್ಸ್ ತಂಡವನ್ನು ಕೆ.ಎಲ್.ರಾಹುಲ್ ಮುನ್ನಡೆಸಲಿದ್ದಾರೆ.
ಟಿ20 ವಿಶ್ವಕಪ್ ಹಿನ್ನೆಲೆಯಲ್ಲಿ ಮುಖ್ಯ: ಈ ಬಾರಿ ಐಪಿಎಲ್‌ನಲ್ಲಿ ಉತ್ತಮವಾಗಿ ಆಡುವ ಆಟಗಾರರನ್ನು, ಟಿ20 ವಿಶ್ವಕಪ್ ತಂಡಗಳಿಗೆ ಪರಿಗಣಿಸಲಾಗುತ್ತದೆ. ವಿಶ್ವಕಪ್‌ನಲ್ಲಿ ಸ್ಥಾನ ಪಡೆಯಲು ಹಪಹಪಿಸುತ್ತಿರುವ ಆಟಗಾರರು, ಈ ಕೂಟದಲ್ಲಿ ಮಿಂಚಲು ಕಾಯುತ್ತಿರುತ್ತಾರೆ. ಮುಖ್ಯವಾಗಿ ವಿರಾಟ್ ಕೊಹ್ಲಿ ಮೇಲೆ ಭಾರೀ ನಿರೀಕ್ಷೆಯಿದೆ. ಈ ಬಾರಿ ವಿಶ್ವಕಪ್
ತಂಡದಲ್ಲಿ ಅವರಿಗೆ ಸ್ಥಾನ ಸಿಗುವುದಿಲ್ಲ ಎಂಬ ಸುದ್ದಿಯಿರುವುದರಿಂದ, ಕೊಹ್ಲಿಗೆ ಉತ್ತಮ ಪ್ರದರ್ಶನ ನೀಡುವುದು ಅನಿವಾರ್ಯವೂ ಹೌದು.
ನಟ ಅಕ್ಷಯ್ ಕುಮಾರ್, ಟೈಗರ್ ಶ್ರಾಫ್ ನರ್ತನ, ರೆಹ್ಮಾನ್, ಸೋನು ಗಾಯನ:
ಈ ಬಾರಿಯ ಐಪಿಎಲ್‌ನ ಉದ್ಘಾ ಟನಾ ಪಂದ್ಯ, ಉದ್ಘಾಟನಾ ಸಮಾ ರಂಭ ದೊಂದಿಗೆ ಝಗಮಗಿಸಲಿದೆ. ಎಂ.ಎ.ಚಿದಂಬರಂ ಮೈದಾನದಲ್ಲಿ ಸಂಜೆ 6.30ರಿಂದ ಶುರುವಾಗುವ ಸಮಾರಂಭ, 7ಕ್ಕೆ ಮುಗಿಯಲಿದೆ ಎಂದು ಮೂಲಗಳು ಹೇಳಿವೆ. ಬಾಲಿವುಡ್ ತಾರೆಯರಾದ ಅಕ್ಷಯ್ ಕುಮಾರ್, ಟೈಗರ್ ಶ್ರಾಫ್ ನರ್ತಿಸಲಿ ದ್ದಾರೆ. ಆಸ್ಕರ್ ವಿಜೇತ ಎ.ಆರ್.ರೆಹ್ಮಾನ್, ಖ್ಯಾತ ಗಾಯಕ ಸೋನು ನಿಗಮ್ ದೇಶಭಕ್ತಿ ಗೀತೆಗಳನ್ನು ಹಾಡಿ, ಪ್ರೇಕ್ಷಕರನ್ನು ಹುಚ್ಚೆಬ್ಬಿಸಲಿದ್ದಾರೆ. ಸ್ವೀಡನ್‌ನ ಡಿಜೆ, ಆಕ್ಸ್‌ವೆಲ್ ಪಾಪ್ ಗಾಯನ, ನರ್ತನದೊಂದಿಗೆ ಮಿನುಗ ಲಿದ್ದಾರೆ. ಎಲ್ಲದರ ಜೊತೆಗೆ ಝಗ ಮಗಿಸುವ ಡಿಜಿಟಲ್ ಜಗತ್ತು ಅನಾವರಣ ಗೊಳ್ಳಲಿದೆ. ಆಗೆ¾ಂಟೆಡ್ ರಿಯಾಲಿಟಿ ತಂತ್ರಜ್ಞಾನ ಬಳಸಲಾಗುತ್ತದೆ.
ಕೂಟದ ಮಾದರಿ ಹೇಗಿದೆ?:
ಈ ಬಾರಿ ಐಪಿಎಲ್ ಪಂದ್ಯಾವಳಿಯಲ್ಲಿ ಒಟ್ಟು 10 ತಂಡಗಳು ಭಾಗಿಯಾಗಿದ್ದು, ತಲಾ 5 ತಂಡಗಳಂತೆ 2 ಗುಂಪುಗಳಾಗಿ ವಿಂಗಡಿಸಲಾಗಿದೆ. ಒಂದು ಗುಂಪಿನಲ್ಲಿರುವ ಪ್ರತಿ ತಂಡವೂ, ಮತ್ತೂಂದು ಗುಂಪಿನಲ್ಲಿರುವ ತಂಡಗಳ ಜೊತೆ ತಲಾ ಎರಡು ಪಂದ್ಯಗಳನ್ನು ಆಡಲಿದೆ. ಇದರಲ್ಲಿ ಒಂದು ಪಂದ್ಯವನ್ನು ತನ್ನದೇ ನೆಲದಲ್ಲಿ, ಮತ್ತೂಂದು ಪಂದ್ಯವನ್ನು ಎದುರಾಳಿ ನೆಲದಲ್ಲಿ ಆಡಲಿದೆ. ಇದಲ್ಲದೇ ಪ್ರತಿ ತಂಡವು ತಮ್ಮ ಗುಂಪಿನಲ್ಲಿರುವ ಇತರ 4 ತಂಡಗಳ ಜೊತೆ ತಲಾ 1 ಪಂದ್ಯ ಆಡಲಿದೆ. ಅಂಕಪಟ್ಟಿಯಲ್ಲಿ ಮೊದಲ 4 ಸ್ಥಾನಗಳನ್ನು ಪಡೆಯುವ ತಂಡಗಳು ಪ್ಲೇಆಫ್ಗೆ ಸ್ಥಾನ ಪಡೆದುಕೊಳ್ಳಲಿವೆ. ಮೊದಲ 2 ಸ್ಥಾನದಲ್ಲಿರುವ ತಂಡಗಳು ಮೊದಲ ಕ್ವಾಲಿಫೈಯರ್ ಆಡಲಿದ್ದು, ಗೆದ್ದ ತಂಡ ಫೈನಲ್‌ಗೆ ಅರ್ಹತೆ ಪಡೆದುಕೊಳ್ಳಲಿದೆ. 3 ಮತ್ತು 4ನೇ ಸ್ಥಾನಗಳಲ್ಲಿರುವ ತಂಡಗಳು ಎಲಿಮಿನೇಟರ್‌ನಲ್ಲಿ ಪಾಲ್ಗೊಳ್ಳಲಿದ್ದು, ಇದರಲ್ಲಿ ಗೆದ್ದ ತಂಡ, ಮೊದಲ ಪ್ಲೇಆಫ್ನಲ್ಲಿ ಸೋತ ತಂಡದೊಂದಿಗೆ 2ನೇ ಕ್ವಾಲಿಫೈಯರ್‌ನಲ್ಲಿ ಆಡಲಿದೆ. 2ನೇ ಪ್ಲೇಆಫ್ನಲ್ಲಿ ಗೆದ್ದ ತಂಡ ಫೈನಲ್‌ಗೆ ಅರ್ಹತೆ ಪಡೆದುಕೊಳ್ಳಲಿದೆ.
ಹೊಸ ನಿಯಮಗಳೇನು?:
- ವೇಗದ ಬೌಲರ್‌ಗೆ ಒಂದೇ ಒವರ್‌ನಲ್ಲಿ 2 ಬೌನ್ಸರ್ ಎಸೆಯಲು ಅವಕಾಶ.
- ಬೌನ್ಸರ್ ಬ್ಯಾಟರ್‌ನ ತಲೆ ಮೇಲೆ ಹೋದರೆ ವೈಡ್ ಎಂದು ನಿರ್ಧಾರ, 3ನೇ ಬೌನ್ಸರ್ ನೋ ಬಾಲ್.
- ಒಂದೇ ಪಂದ್ಯದಲ್ಲಿ ಒಬ್ಬ ಬೌಲರ್ 2ನೇ ಬಾರಿ, 3 ಬೌನ್ಸರ್ ಎಸೆದರೆ, ಬೌಲರನ್ನು ಅನರ್ಹಗೊಳಿಸಬಹುದು
- ಇತ್ತೀಚೆಗೆ ಐಸಿಸಿ ಜಾರಿ ಮಾಡಿರುವ ಸ್ಟಾಪ್‌ಕ್ಲಾಕ್ ನಿಯಮ ಈ ಐಪಿಎಲ್‌ನಲ್ಲಿ ಜಾರಿಯಾಗಲ್ಲ.
ವೇಳಾಪಟ್ಟಿ :
ದಿನಾಂಕ ಮುಖಾಮುಖಿ/ ಸ್ಥಳ/ ಸಮಯ
ಮಾ.22 ಆರ್‌ಸಿಬಿ VS ಚೆನ್ನೈ – ಚೆನ್ನೈ – ರಾ.8
ಮಾ.23 ಪಂಜಾಬ್ VS ದೆಹಲಿ – ಮೊಹಾಲಿ ಮ. 3.30
ಮಾ.23 ಕೋಲ್ಕತ VS ಹೈದಾರಾಬಾದ್ – ಕೋಲ್ಕತ ರಾ.7.30
ಮಾ.24 ರಾಜಸ್ಥಾನ VS ಲಕ್ನೋ – ಜೈಪುರ – ಮ.3.30
ಮಾ.24 ಗುಜರಾತ್ VS ಮುಂಬೈ – ಅಹ್ಮದಾಬಾದ್ – ರಾ.7.30
ಮಾ.25 ಆರ್‌ಸಿಬಿ VS ಪಂಜಾಬ್ – ಬೆಂಗಳೂರು – ರಾ.7.30
ಮಾ.26 ಚೆನ್ನೈ VS ಗುಜರಾತ್ – ಚೆನ್ನೈ – ರಾ.7.30
ಮಾ.27 ಹೈದ್ರಾಬಾದ್ VS ಮುಂಬೈ – ಹೈದ್ರಾಬಾದ್ – ರಾ.7.30
ಮಾ.28 ರಾಜಸ್ಥಾನ VS ದೆಹಲಿ – ಜೈಪುರ – ರಾ.7.30
ಮಾ.29 ಆರ್‌ಸಿಬಿ VS ಕೋಲ್ಕತ – ಬೆಂಗಳೂರು – ರಾ.7.30
ಮಾ.30 ಲಕ್ನೋ VS ಪಂಜಾಬ್ – ಲಕ್ನೋ – ರಾ.7.30
ಮಾ.31 ಗುಜರಾತ್ VS ಹೈದ್ರಾಬಾದ್ – ಅಹ್ಮದಾಬಾದ್ – ಮ.3.30
ಮಾ.31 ದೆಹಲಿ VS ಚೆನ್ನೈ ವಿಶಾಖಪಟ್ಟಣ – ರಾ.7.30
ಏ.1 ಮುಂಬೈVS ರಾಜಸ್ಥಾನ – ಮುಂಬೈ ರಾ.7.30
ಏ.2 ಆರ್‌ಸಿಬಿ ಲಕ್ನೋ – ಬೆಂಗಳೂರು ರಾ.7.30
ಏ.3 ದೆಹಲಿ VS ಕೋಲ್ಕತ – ವಿಶಾಖಪಟ್ಟಂ – ರಾ.7.30
ಏ.4 ಗುಜರಾತ್ VS ಪಂಜಾಬ್ ಅಹ್ಮದಾಬಾದ್ – ರಾ.7.30
ಏ.5 ಹೈದ್ರಾಬಾದ್ VS ಚೆನ್ನೈ ಹೈದ್ರಾಬಾದ್ ರಾ.7.30
ಏ.6 ಆರ್‌ಸಿಬಿ VS ರಾಜಸ್ಥಾನ – ಜೈಪುರ – ರಾ.7.30
ಏ.7 ಮುಂಬೈ VS ದೆಹಲಿ – ಮುಂಬೈ – ಮ.3.30
ಏ.7 ಲಕ್ನೋ VS ಗುಜರಾತ್ – ಲಕ್ನೋ – ರಾ.7.30