ಮುಂಬೈ: 17ನೇ ಸೀಸನ್ ನ ಐಪಿಎಲ್ ಆರಂಭಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿದೆ. ಇದೀಗ ಆಟಗಾರರ ಬಗ್ಗೆ ಬಿಸಿಸಿಐ ಮಹತ್ವದ ಅಪ್ಡೇಟ್ ನೀಡಿದೆ. 2022ರ ಡಿಸೆಂಬರ್ ನಲ್ಲಿ ಅಪಘಾತದಲ್ಲಿ ಗಾಯಗೊಂಡಿದ್ದ ರಿಷಭ್ ಪಂತ್ ಅವರು ಇದೀಗ ಸಂಪೂರ್ಣ ಫಿಟ್ ಆಗಿದ್ದು, ಐಪಿಎಲ್ ನಲ್ಲಿ ಆಡಲಿದ್ದಾರೆ ಎಂದು ಬಿಸಿಸಿಐ ಖಚಿತಪಡಿಸಿದೆ.
2022 ಡಿಸೆಂಬರ್ 30ರಂದು ಉತ್ತರಾಖಂಡ್‌ನ ರೂರ್ಕಿ ಬಳಿ ರಣಾಂತಿಕ ರಸ್ತೆ ಅಪಘಾತದ ನಂತರ ವ್ಯಾಪಕವಾದ 14-ತಿಂಗಳ ಪುನರ್ವಸತಿ ಮತ್ತು ಚೇತರಿಕೆ ಪ್ರಕ್ರಿಯೆಗೆ ಒಳಗಾದ ನಂತರ, ರಿಷಬ್ ಪಂತ್ ಅವರು ಮುಂಬರುವ ಟಾಟಾ ಐಪಿಎಲ್ 2024 ಗಾಗಿ ವಿಕೆಟ್ ಕೀಪರ್ ಬ್ಯಾಟರ್ ಆಗಿ ಫಿಟ್ ಆಗಿದ್ದಾರೆ ಎಂದು ಘೋಷಿಸಲಾಗಿದೆ ಎಂದು ಬಿಸಿಸಿಐ ಪ್ರಕಟಣೆ ತಿಳಿಸಿದೆ.
ಅಲ್ಲದೆ ವೇಗಿ ಪ್ರಸಿಧ್ ಕೃಷ್ಣ ಅವರ ಎಡ ಪ್ರಾಕ್ಸಿಮಲ್ ಕ್ವಾಡ್ರೈಸ್ಪ್ ಸ್ನಾಯುರಜ್ಜು ಶಸ್ತ್ರಚಿಕಿತ್ಸೆಯು ಫೆಬ್ರವರಿ 23 ರಂದು ನಡೆಯಿತು. ಪ್ರಸ್ತುತ ಅವರನ್ನು ಬಿಸಿಸಿಐ ವೈದ್ಯಕೀಯ ತಂಡವು ಮೇಲ್ವಿಚಾರಣೆ ನಡೆಸುತ್ತಿದೆ. ಶೀಘ್ರದಲ್ಲೇ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಗೆ ಆಗಮಿಸಲಿದ್ದಾರೆ. ಮುಂಬರುವ ಐಪಿಎಲ್ ನಲ್ಲಿ ಅವರು ಭಾಗವಹಿಸಲು ಸಾಧ್ಯವಾಗುವುದಿಲ್ಲ.
ವಿಶ್ವಕಪ್ ಬಳಿಕ ಕ್ರಿಕೆಟ್ ಆಡದ ವೇಗದ ಬೌಲರ್ ಮೊಹಮ್ಮದ್ ಶಮಿ ತನ್ನ ಬಲ ಹಿಮ್ಮಡಿ ಸಮಸ್ಯೆಗಾಗಿ ಫೆಬ್ರವರಿ 26 ರಂದು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಅವರು ಪ್ರಸ್ತುತ ಬಿಸಿಸಿಐ ವೈದ್ಯಕೀಯ ತಂಡದಿಂದ ಮೇಲ್ವಿಚಾರಣೆಯಲ್ಲಿದ್ದಾರೆ. ಮುಂಬರುವ ಐಪಿಎಲ್ ನಿಂದ ಹೊರಗುಳಿಯುತ್ತಾರೆ ಎಂದು ಬಿಸಿಸಿಐ ಪ್ರಕಟಣೆ ತಿಳಿಸಿದೆ.
17ನೇ ಸೀಸನ್ ನ ಐಪಿಎಲ್ ಕೂಟವು ಮಾರ್ಚ್ 22ರಂದು ಆರಂಭವಾಗಲಿದೆ. ಮೊದಲ ಪಂದ್ಯವು ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ನಡೆಯಲಿದೆ.