ಮುಂಬೈ: ಐಪಿಎಲ್ 2024 ರ ಸೀಸನ್‌ಗೆ ಮೊದಲು ಹಲವು ಅಚ್ಚರಿಯ ಘಟನೆಗಳು ನಡೆಯುತ್ತಿದೆ. ಹಾರ್ದಿಕ್ ಪಾಂಡ್ಯ ಅವರು ಗುಜರಾತ್ ತೊರೆದು ಮುಂಬೈ ತಂಡಕ್ಕೆ ಬಂದಿರುವುದೇ ಅಚ್ಚರಿಯಾದರೆ, ಬಳಿಕ ಅವರಿಗೆ ಎಂಐ ನಾಯಕತ್ವ ನೀಡಿದ್ದು ದೊಡ್ಡ ಅಚ್ಚರಿಗೆ ಕಾರಣವಾಗಿದೆ.
ಇದೀಗ ಮುಂಬೈ ಇಂಡಿಯನ್ಸ್ ತಂಡಕ್ಕೆ ಐದು ಬಾರಿ ಕಪ್ ಗೆಲ್ಲಿಸಿಕೊಟ್ಟ ನಾಯಕ ರೋಹಿತ್ ಶರ್ಮಾ ಅವರನ್ನು ಖರೀದಿಸಲು ಡೆಲ್ಲಿ ಕ್ಯಾಪಿಟಲ್ಸ್ ಮುಂದಾಗಿತ್ತು ಎಂಬ ಸುದ್ದಿ ಹೊರಬಿದ್ದಿದೆ.
ರೋಹಿತ್ ಶರ್ಮಾ ಅವರನ್ನು ತನ್ನತ್ತ ಸೆಳೆಯಲು ಕ್ಯಾಪಿಟಲ್ಸ್ ಮುಂದಾಗಿತ್ತು. ಈ ಬಗ್ಗೆ ಚರ್ಚೆಯೂ ನಡೆದಿತ್ತು ಎಂದು ವರದಿಯಾಗಿದೆ. ಆದರೆ ಅಂತಿಮವಾಗಿ ಈ ಚರ್ಚೆ ಯಾವುದೇ ಫಲಿತಾಂಶ ನೀಡಲಿಲ್ಲ ಎನ್ನಲಾಗಿದೆ.
ಕೆಲವೇ ದಿನಗಳ ಹಿಂದೆ ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯು ಹಾರ್ದಿಕ್ ಪಾಂಡ್ಯ ಅವರನ್ನು ನೂತನ ನಾಯಕರನ್ನಾಗಿ ಘೋಷಿಸಿತ್ತು. 2013ರಲ್ಲಿ ತಂಡದ ನಾಯಕತ್ವ ವಹಿಸಿದ್ದ ರೋಹಿತ್ ಐದು ಬಾರಿ ಕಪ್ ಗೆದ್ದಿದ್ದರು. ಈ ಹಿಂದೆ ಮುಂಬೈನಲ್ಲಿದ್ದ ಹಾರ್ದಿಕ್ ಕಳೆದೆರಡು ಸೀಸನ್ ಗಳಲ್ಲಿ ಗುಜರಾತ್ ಪರ ಆಡಿ ಎರಡೂ ಬಾರಿ ಫೈನಲ್ ತಲುಪಿ ಒಂದು ಬಾರಿ ಕಪ್ ಗೆದ್ದಿದ್ದರು.
ಡೆಲ್ಲಿ ಕ್ಯಾಪಿಟಲ್ಸ್‌ನ ಪ್ರಯತ್ನಗಳ ಹೊರತಾಗಿಯೂ, ಮುಂಬೈ ಇಂಡಿಯನ್ಸ್ ತಮ್ಮ ಐಕಾನ್ ಆಟಗಾರನನ್ನು ಉಳಿಸಿಕೊಳ್ಳಲು ನಿರ್ಧರಿಸುವ ಮೂಲಕ ಪ್ರಸ್ತಾಪವನ್ನು ನಿರಾಕರಿಸಿತು.