ಬೆಂಗಳೂರು: 17ನೇ ಸೀಸನ್ ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಸೋಮವಾರ ತನ್ನ ಮೊದಲ ಗೆಲುವು ಸಾಧಿಸಿದೆ. ಪಂಜಾಬ್ ಕಿಂಗ್ಸ್ ವಿರುದ್ಧ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಆರ್ ಸಿಬಿ ನಾಲ್ಕು ವಿಕೆಟ್ ಅಂತರದ ಗೆಲುವು ಸಾಧಿಸಿದೆ.
ಈ ಪಂದ್ಯದಲ್ಲಿ ಆರ್ ಸಿಬಿ ಆಟಗಾರ ಯಶ್ ದಯಾಳ್ ಬಗ್ಗೆ ಕಾಮೆಂಟೇಟರ್ ಮುರಳಿ ಕಾರ್ತಿಕ್ ಆಡಿದ ಮಾತು ವಿವಾದಕ್ಕೆ ಕಾರಣವಾಗಿದೆ. ಉತ್ತಮ ಬೌಲಿಂಗ್ ಮಾಡುತ್ತಿದ್ದ ಯಶ್ ಬಗ್ಗೆ ಉಲ್ಲೇಖಿಸಿದ ಮುರಳಿ ಕಾರ್ತಿಕ್, “ಯಾರದೋ ಕಸ, ಯಾರದೋ ನಿಧಿ’ (Someone’s trash is someone’s treasure) ಎಂದಿದ್ದರು.
ದಯಾಳ್ ಅವರು ಕಳೆದೆರಡು ಸೀಸನ್ ಗಳಲ್ಲಿ ಗುಜರಾತ್ ಟೈಟಾನ್ಸ್ ಪರವಾಗಿ ಆಡಿದ್ದರು. ಉತ್ತಮ ಪ್ರದರ್ಶನ ನೀಡುತ್ತಿದ್ದ ಅವರು ಕೆಕೆಆರ್ ವಿರುದ್ದದ ಪಂದ್ಯದಲ್ಲಿ ಕೊನೆಯ ಓವರ್ ನಲ್ಲಿ ಐದು ಸಿಕ್ಸರ್ ಬಿಟ್ಟುಕೊಟ್ಟು ದುಬಾರಿಯಾಗಿದ್ದರು. ಈ ಸೀಸನ್ ನಲ್ಲಿ ದಯಾಳ್ ಅವರನ್ನು ಆರ್ ಸಿಬಿ 5 ಕೋಟಿ ರೂ ನೀಡಿ ಖರೀದಿ ಮಾಡಿತ್ತು.
ಮುರಳಿ ಕಾರ್ತಿಕ್ ಮಾತಿಗೆ ಕಿಡಿಕಾರಿರುವ ಆರ್ ಸಿಬಿ ಇನ್ ಸೈಡರ್ ಹೋಸ್ಟ್ ಡ್ಯಾನಿಶ್ ಸೇಟ್, “ಯಾರೊಬ್ಬರ ಕಸವನ್ನು ಇನ್ನೊಬ್ಬರ ನಿಧಿ ಎಂದು ನೀವು ಹೇಗೆ ಹೇಳುತ್ತೀರಿ? ನೀವು ಈಗಷ್ಟೇ ಯಶ್ ದಯಾಳ್ ಕಸ ಎಂದು ನೇರಪ್ರಸಾರದಲ್ಲಿ ಹೇಳಿದ್ರಾ” ಎಂದು ಟ್ವೀಟ್ ಮಾಡಿದ್ದಾರೆ.
ಕಾರ್ತಿಕ್ ಅವರ ಹೇಳಿಕೆಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯೂ ಸಾಮಾಜಿಕ ಮಾಧ್ಯಮದಲ್ಲಿ ಸೂಕ್ತವಾದ ಪ್ರತಿಕ್ರಿಯೆ ನೀಡಿದೆ.
ಯಶ್ ದಯಾಳ್ ಅವರು ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ನಾಲ್ಕು ಓವರ್ ನಲ್ಲಿ ಕೇವಲ 23 ರನ್ ನೀಡಿ ಒಂದು ವಿಕೆಟ್ ಪಡೆದಿದ್ದರು.