ಮಹಾರಾಷ್ಟ್ರ: ಐಪಿಎಲ್ ನೋಡುವ ಸಂದರ್ಭದಲ್ಲಿ ಅಭಿಮಾನಿಗಳ ನಡುವೆ ಮಾರಾಮಾರಿ ಉಂಟಾಗಿ ಓರ್ವ ವ್ಯಕ್ತಿ ಜೀವ ಕಳೆದುಕೊಂಡಿರುವ ಘಟನೆ ಮಹಾರಾಷ್ಟ್ರದ ಕೊಲ್ಲಾಪುರದ ಹನ್ಮಂತವಾಡಿ ಪ್ರದೇಶದಲ್ಲಿ ನಡೆದಿರುವುದು ವರದಿಯಾಗಿದೆ.
ಬುಧವಾರ (ಮಾ.27 ರಂದು) ಹೈದರಾಬಾದ್ ಹಾಗೂ ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯಾಟದ ವೇಳೆ ಈ ಘಟನೆ ನಡೆದಿದೆ.
ಬಂಡುಪಂತ್ ತಿಬಿಲೆ, ಬಲವಂತ್ ಝಂಜಗೆ ಮತ್ತು ಸಾಗರ್ ಝಂಜಗೆ ಅವರು ಹೈದರಾಬಾದ್ ಹಾಗೂ ಮುಂಬೈ ನಡುವಿನ ಪಂದ್ಯವನ್ನು ವೀಕ್ಷಿಸುತ್ತಿದ್ದರು. ಬಂಡುಪಂತ್ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಅಭಿಮಾನಿಯಾಗಿದ್ದು, ಬಲವಂತ್ ಝಂಜಗೆ ಮತ್ತು ಸಾಗರ್ ಝಂಜಗೆ ಅವರು ಮುಂಬೈ ಅಭಿಮಾನಿಯಾಗಿದ್ದಾರೆ.
ಪಂದ್ಯ ನಡೆಯುತ್ತಿದ್ದಂತೆ ಮುಂಬೈ ಆಟಗಾರ ರೋಹಿತ್ ಶರ್ಮಾ ಔಟಾಗಿದ್ದಾರೆ. ಈ ವೇಳೆ ಚೆನ್ನೈ ತಂಡದ ಅಭಿಮಾನಿ ಬಂಡುಪಂತ್ ಇದನ್ನು ಸಂಭ್ರಮಿಸಿದ್ದಾನೆ. ಆದರೆ ಇದನ್ನು ನೋಡಿದ ಬಲವಂತ್ ಹಾಗೂ ಸಾಗರ್ ಆಕ್ರೋಶಗೊಂಡು ಬಂಡುಪಂತ್ ಮೇಲೆ ಹಲ್ಲೆ ನಡೆಸಿದ್ದಾರೆ. ಇದರಿಂದ ಎರಡು ಗುಂಪುಗಳ ನಡುವೆ ಜಗಳ ಶುರುವಾಗಿದೆ.
ಬಂಡುಪಂತ್ ಮೇಲೆ ಸಾಗರ್ ಹಾಗೂ ಬಲವಂತ್ ಹಲಗೆ ಮತ್ತು ಕೋಲಿನಿಂದ ಹಲ್ಲೆ ನಡೆಸಿದ್ದಾರೆ. ಇದರಿಂದಾಗಿ ಬಂಡುಪಂತ್ ಗೆ ಮಾರಣಾಂತಿಕ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಿಸದೆ ಬಂಡುಪಂತ್ ಮೃತಪಟ್ಟಿದ್ದಾರೆ.
ಆರೋಪಿಗಳಾದ ಸಾಗರ್ ಬಲವಂತ್ ನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆಗಾಗಿ ನ್ಯಾಯಾಲಯವು ಅವರ ಬಂಧನಕ್ಕೆ ಆದೇಶಿಸಿದೆ.
ಮುಂಬೈ ವಿರುದ್ಧ ಮೊದಲು ಬ್ಯಾಟ್ ಮಾಡಿದ ಹೈದರಾಬಾದ್ 3 ವಿಕೆಟ್ ಕಳೆದುಕೊಂಡು 277 ರನ್ ಪೇರಿಸಿತ್ತು. ಉತ್ತರವಾಗಿ ಮುಂಬೈ 5 ವಿಕೆಟ್ ನಷ್ಟದಲ್ಲಿ 246 ರನ್ ಪೇರಿಸಿತ್ತು.