ಮೊಹಾಲಿ: ಸತತ ಎರಡು ಪಂದ್ಯಗಳನ್ನು ಗೆದ್ದು ಭರ್ಜರಿಯಾಗಿ ಐಪಿಎಲ್ ಸೀಸನ್ ಆರಂಭಿಸಿರುವ ಪಂಜಾಬ್ ಕಿಂಗ್ಸ್ ತಂಡವನ್ನು ಮುಂದಿನ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ಎದುರಿಸಲಿದೆ. ಆದರೆ ತಂಡದ ಸ್ಫೋಟಕ ಆಟಗಾರ ಲಿಯಾಮ್ ಲಿವಿಂಗ್ ಸ್ಟೋನ್ ಅವರು ಇನ್ನೂ ತಂಡ ಕೂಡಿಕೊಂಡಿಲ್ಲ.
ಬುಧವಾರ ಪಂಜಾಬ್ ಕಿಂಗ್ಸ್ ತಂಡವು ಗುವಾಹಟಿಯಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು ಎದುರಿಸುತ್ತಿದ್ದರೆ, ಅತ್ತ ಓಲ್ಡ್ ಟ್ರಾಫರ್ಡ್ ನ ನೆಟ್ಸ್ ನಲ್ಲಿ ಲಿಯಾಮ್ ಲಿವಿಂಗ್ ಸ್ಟೋನ್ ಅವರು ಅಭ್ಯಾಸ ನಡೆಸುತ್ತಿದ್ದರು.
ಐಪಿಎಲ್ ಗಾಗಿ ಭಾರತಕ್ಕೆ ಅವರ ಬರುವುದು ವಿಳಂಬವಾಗುತ್ತಿದ್ದು, ಅದು ಇನ್ನೂ ಹೆಚ್ಚು ಸಮಯ ತೆಗೆದುಕೊಳ್ಳಬಹುದು ಎಂದು ತೋರುತ್ತದೆ. ಪಂಜಾಬ್ ಕಿಂಗ್ಸ್ ತಂಡಕ್ಕೂ ನಿಖರವಾಗಿ ಯಾವಾಗ ಅವರು ತಂಡವನ್ನು ಸೇರುತ್ತಾರೆ ಎಂಬುದು ತಿಳಿದಿಲ್ಲ. “ಅವರು ಮುಂದಿನ ವಾರ ಇಲ್ಲಿಗೆ ಬರುತ್ತಾರೆ” ಎಂದು ಕಿಂಗ್ಸ್ ಅಧಿಕಾರಿಯೊಬ್ಬರು ರಾಜಸ್ಥಾನ್ ರಾಯಲ್ಸ್ ವಿರುದ್ಧ ತಂಡದ ಗೆಲುವಿನ ನಂತರ ಹೇಳಿದರು.
ಇದನ್ನೂ ಓದಿ:ಸಿಯೋನಿಯಿಂದ ವಾಂಖೆಡೆವರೆಗೆ; ಯಾರಿದು ಮುಂಬೈ ಇಂಡಿಯನ್ಸ್ ಹೊಸ ಭರವಸೆ ಅರ್ಶದ್ ಖಾನ್?
“ಲಿವಿಂಗ್ ಸ್ಟೋನ್ ಅವರು ಏಪ್ರಿಲ್ ಮಧ್ಯದಲ್ಲಿ ಭಾರತಕ್ಕೆ ಆಗಮಿಸಲಿದ್ದಾರೆ” ಎಂದು ಇಸಿಬಿ ಅಧಿಕಾರಿಯೊಬ್ಬರು ಹೇಳಿರುವುದನ್ನು ಕ್ರಿಕ್‌ಬಜ್ ವರದಿ ಮಾಡಿದೆ. ಲಿವಿಂಗ್ ಸ್ಟೋನ್ ಇನ್ನೂ ಶೇಕಡಾ 100 ಫಿಟ್ ಆಗಿಲ್ಲ ಲ್ಯಾಂಕಶೈರ್ ತಂಡದ ಸಹ ಆಟಗಾರರೊಂದಿಗೆ ತನ್ನ ಫಿಟ್ ನೆಸ್ ಗಾಗಿ ಕೆಲಸ ಮಾಡುತ್ತಿದ್ದಾರೆ. ಅವರು ಪಾದದ ಮತ್ತು ಮೊಣಕಾಲಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಡಿಸೆಂಬರ್ ಬಳಿಕ ಯಾವುದೇ ಸ್ಪರ್ಧಾತ್ಮಕ ಕ್ರಿಕೆಟ್ ಆಡಲಿಲ್ಲ.
“ಅವರು ಇನ್ನೂ ಗಾಯದಿಂದ ಗುಣಮುಖರಾಗುತ್ತಿದ್ದಾರೆ. ಅವರು ಪ್ರಸ್ತುತ ಓಲ್ಡ್ ಟ್ರಾಫರ್ಡ್ ನಲ್ಲಿದ್ದಾರೆ. ಅವರು ಏಪ್ರಿಲ್ 15 ರ ಸುಮಾರಿಗೆ ಭಾರತದಲ್ಲಿರುತ್ತಾರೆ” ಎಂದು ಇಸಿಬಿ ಅಧಿಕಾರಿ ಹೇಳಿದರು. ಈ ಸಮಯದಲ್ಲಿ ಏಪ್ರಿಲ್ 15 ರ ಹೊತ್ತಿಗೆ, ಪಂಜಾಬ್ ಕಿಂಗ್ಸ್ ತನ್ನ ಮೊದಲ 14 ಪಂದ್ಯಗಳನ್ನು ಆಡಲಿದೆ.