Advertisement

ಐಪಿಎಲ್‌ 16 : ಇಂದಿನಿಂದ “ಈ ಸಲ ಕಪ್‌ ನಮ್ದೇ”

07:31 AM Apr 02, 2023 | Team Udayavani |

ಬೆಂಗಳೂರು: ಐಪಿಎಲ್‌ ಇತಿಹಾಸದಲ್ಲೇ ದಾಖಲೆ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿರುವ ತಂಡ, ಕರ್ನಾಟಕದ ಆಟಗಾರರು ಲೆಕ್ಕದ ಭರ್ತಿಗೆಂಬಂತೆ ಇದ್ದರೂ ಅಪ್ಪಟ ಅಭಿಮಾನ ತೋರುತ್ತಲೇ ಇರುವ ಕನ್ನಡಿಗರ ನೆಚ್ಚಿನ ಪಡೆ, ವಿಶ್ವದ ಬಹುತೇಕ ಹಾರ್ಡ್‌ ಹಿಟ್ಟರ್‌ಗಳನ್ನು ಹೊಂದಿಯೂ ಈ 15 ವರ್ಷಗಳಲ್ಲಿ ಕಪ್‌ ಎತ್ತದ ನತದೃಷ್ಟ ತಂಡ, ಆದರೂ ಪ್ರತೀ ವರ್ಷವೂ “ಈ ಸಲ ಕಪ್‌ ನಮ್ದೇ” ಎಂಬ ಅಭಿಮಾನಗಳ ಅಚಲ ನಂಬಿಕೆ ಇಂಥ ಪ್ಲಸ್‌ ಹಾಗೂ ಮೈನಸ್‌ ಪಾಯಿಂಟ್‌ಗಳೆರಡನ್ನೂ ಹೊಂದಿರುವ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಭಾನುವಾರ 16ನೇ ಐಪಿಎಲ್‌ನಲ್ಲಿ ಕಣಕ್ಕಿಳಿಯಲಿದೆ. ಎಂದಿನಂತೆ, ಮರೀಚಿಕೆಯಾಗಿರುವ ಐಪಿಎಲ್‌ ಟ್ರೋಫಿಯನ್ನೆತ್ತುವ ಮತ್ತೂಂದು ಪ್ರಯತ್ನದೊಂದಿಗೆ.

Advertisement

ಬೆಂಗಳೂರಿನ ತವರಿನ ಎಂ.ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಐಪಿಎಲ್‌ನ ಅತ್ಯಂತ ಯಶಸ್ವಿ ತಂಡವಾಗಿರುವ, ಆದರೆ ಕಳೆದ ಸಲ ಪಾತಾಳಕ್ಕೆ ಕುಸಿದಿದ್ದ ಮುಂಬೈ ಇಂಡಿಯನ್ಸ್‌ ತಂಡವನ್ನು ಮೊದಲ ಪಂದ್ಯದಲ್ಲಿ ಎದುರಿಸಲಿದೆ. ಎರಡೂ ತಂಡಗಳಿಗೆ ಗಾಯಾಳುಗಳದ್ದೇ ದೊಡ್ಡ ಸಮಸ್ಯೆ ಆಗಿರುವುದು ವಾಸ್ತವ. ಆರ್‌ಸಿಬಿಯಿಂದಲೇ ಆರಂಭಿಸುವುದಾದರೆ ಜೋಶ್‌ ಹೇಝಲ್‌ವುಡ್‌, ರಜತ್‌ ಪಾಟೀದಾರ್‌, ಗ್ಲೆನ್‌ ಮ್ಯಾಕ್ಸ್‌ವೆಲ್‌ ಅವರೆಲ್ಲ ಗಾಯಾಳುಗಳ ಪಟ್ಟಿಯಲ್ಲಿದ್ದಾರೆ. ಮುಂಬೈ ತಂಡ ಜಸ್‌ಪ್ರೀತ್‌ ಬುಮ್ರಾ, ಜೈ ರಿಚಡ್ಸನ್‌ ಅವರ ಬೌಲಿಂಗ್‌ ಸೇವೆಯಿಂದ ವಂಚಿತವಾಗಲಿದೆ. ಆದರೆ ಮುಂಬೈ ಉತ್ತಮವಾದ ಪರ್ಯಾಯ ವ್ಯವಸ್ಥೆಯನ್ನು ಹೊಂದಿದೆ. ಆರ್‌ಸಿಬಿ ತುಸು ಬಲಹೀನಗೊಂಡಿದೆ.

ದಾಖಲೆ ಕುರಿತು ಹೇಳುವುದಾದರೆ, ಒಟ್ಟು ಪಂದ್ಯಗಳ ಗೆಲುವಿನ ಲೆಕ್ಕಾಚಾರದಲ್ಲಿ ಮುಂಬೈ ಮುಂದಿದೆ. ಆದರೆ ಆರ್‌ಸಿಬಿ 2020ರಿಂದೀಚೆ ಮುಂಬೈಗೆ ಸೋತಿಲ್ಲ. ಈ ಅವಧಿಯಲ್ಲಿ ಆಡಿದ 5 ಪಂದ್ಯಗಳಲ್ಲಿ ನಾಲ್ಕನ್ನು ಗೆದ್ದಿದೆ. ಇದರಲ್ಲೊಂದು ಟೈ ಪಂದ್ಯದಲ್ಲಿ ಸಾಧಿಸಿದ ಜಯವಾದರೆ, ಕೊನೆಯ ಮೂರನ್ನು ಗೆದ್ದು ಹ್ಯಾಟ್ರಿಕ್‌ ಸಾಧಿಸಿದೆ.

ಬ್ರೇಸ್‌ವೆಲ್‌ ಬಲ: ಎಲ್ಲ ಇದ್ದೂ ಅದೃಷ್ಟವನ್ನೇ ಹೊಂದಿರದ ಆರ್‌ಸಿಬಿ ಈ ಬಾರಿ ನ್ಯೂಜಿಲೆಂಡ್‌ನ‌ ಬಿಗ್‌ ಹಿಟ್ಟಿಂಗ್‌ ಆಲ್‌ರೌಂಡರ್‌ ಮೈಕಲ್‌ ಬ್ರೇಸ್‌ವೆಲ್‌ ಅವರನ್ನು ಬದಲಿ ಆಟಗಾರನನ್ನಾಗಿ ಖರೀದಿಸಿ ಒಂದೊಳ್ಳೆಯ ಕೆಲಸ ಮಾಡಿದೆ. ಇವರೊಂದಿಗೆ ಕೆಳ ಕ್ರಮಾಂಕದಲ್ಲಿ ದಿನೇಶ್‌ ಕಾರ್ತಿಕ್‌ ಅವರನ್ನು ನೆಚ್ಚಿಕೊಳ್ಳಬಹುದಾಗಿದೆ.

ಅಗ್ರ ಕ್ರಮಾಂಕದಲ್ಲಿ ನಾಯಕ ಫಾ ಡು ಪ್ಲೆಸಿಸ್‌, ವಿರಾಟ್‌ ಕೊಹ್ಲಿ ಇದ್ದಾರೆ. ಸದ್ಯ ಸಮಸ್ಯೆ ಇರುವುದು ಮಿಡ್ಲ್ ಆರ್ಡರ್‌ನಲ್ಲಿ. ಫಿನ್‌ ಅಲೆನ್‌, ಮಹಿಪಾಲ್‌ ಲೊಮ್ರಾರ್‌, ಸುಯಶ್‌ ಪ್ರಭುದೇಸಾಯಿ ಮೊದಲಾದವರು ಇಲ್ಲಿ ಯಶಸ್ಸು ಕಾಣಬೇಕಿದೆ. ರಜತ್‌ ಪಾಟೀದಾರ್‌ ಕಳೆದ ಸಲ 333 ರನ್‌ ಬಾರಿಸಿದ್ದರು. ಕ್ವಾಲಿಫೈಯರ್‌ ಪಂದ್ಯದಲ್ಲಿ ಅತೀ ವೇಗದ ಶತಕ ಬಾರಿಸಿದ ಭಾರತೀಯಾ ಆಟಗಾರನೆಂಬ ದಾಖಲೆಯನ್ನೂ ಸ್ಥಾಪಿಸಿದ್ದರು. ಇವರ ಗೈರು ಆರ್‌ಸಿಬಿಗೆ ಎದುರಾಗಿರುವ ಭಾರೀ ಹೊಡೆತ. ಹಾಗೆಯೇ ಲಂಕೆಯ ಸ್ಪಿನ್ನರ್‌ ವನಿಂದು ಹಸರಂಗ ರಾಷ್ಟ್ರೀಯ ತಂಡದ ಪರ ಆಡುತ್ತಿದ್ದಾರೆ.

Advertisement

ಆರ್‌ಸಿಬಿ ಬೌಲಿಂಗ್‌ ಮೊದಲಿನಿಂದಲೂ ಘಾತಕವೇನಲ್ಲ. ಸಿರಾಜ್‌, ಹರ್ಷಲ್‌ ಪಟೇಲ್‌, ಎಡಗೈ ಪೇಸರ್‌ ರೀಸ್‌ ಟಾಪ್ಲೆ, ಡೇವಿಡ್‌ ವಿಲ್ಲಿ, ಆಲ್‌ರೌಂಡರ್‌ ಶಹಬಾಜ್‌ ಅಹ್ಮದ್‌ ಅವರೆಲ್ಲ ಎದುರಾಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಎಷ್ಟರ ಮಟ್ಟಿಗೆ ಯಶಸ್ವಿಯಾಗಬಲ್ಲರೆಂಬುದು ಮುಖ್ಯ.

ಮುಂಬೈ ಬ್ಯಾಟಿಂಗ್‌ ಬಲಿಷ್ಠ: ಆರ್‌ಸಿಬಿಗೆ ಹೋಲಿಸಿದರೆ ಮುಂಬೈ ಬ್ಯಾಟಿಂಗ್‌ ಸರದಿ ಹೆಚ್ಚು ಬಲಿಷ್ಠ. ರೋಹಿತ್‌ ಶರ್ಮ, ಸೂರ್ಯಕುಮಾರ್‌, ತಿಲಕ್‌ ವರ್ಮ, ಡೆವಾಲ್ಡ್‌ ಬ್ರೆವಿಸ್‌, ಇಶಾನ್‌ ಕಿಶನ್‌, ಟ್ರಿಸ್ಟನ್‌ ಸ್ಟಬ್ಸ್, ಟಿಮ್‌ ಡೇವಿಡ್‌… ಹೀಗೆ ಸಾಲು ಸಾಲು ಹಿಟ್ಟರ್‌ಗಳಿದ್ದಾರೆ. ಕ್ಯಾಮೆರಾನ್‌ ಗ್ರೀನ್‌ ಸೇರ್ಪಡೆಯಿಂದ ಮತ್ತಷ್ಟು ಶಕ್ತಿಯುತವಾಗಿದೆ. ವಿದೇಶಿ ಕ್ರಿಕೆಟಿಗರ ಆಯ್ಕೆಗೆ ವಿಪುಲ ಅವಕಾಶವಿರುವುದು ಸವಾಲು ಕೂಡ ಆಗಬಹುದು.

ಜೋಫ್ರಾ ಆರ್ಚರ್‌, ಬೆಹ್ರೆಂಡ್ರಾಫ್‌, ಶಮ್ಸ್‌ ಮುಲಾನಿ, ಪೀಯೂಷ್‌ ಚಾವ್ಲಾ, ಕುಮಾರ ಕಾರ್ತಿಕೇಯ ಬೌಲಿಂಗ್‌ನಲ್ಲಿ ಮಿಂಚು ಹರಿಸಬೇಕಿದೆ. ಇವೆಲ್ಲದರ ಜೊತೆಗೆ ಪ್ರಶ್ನೆಯೊಂದು ಉಳಿದಿದೆ… ಅರ್ಜುನ್‌ ತೆಂಡುಲ್ಕರ್‌ ಅವರಿಗೆ ಈ ಸಲವಾದರೂ ಪದಾರ್ಪಣೆಯ ಅವಕಾಶ ಸಿಕ್ಕೀತೇ?!

ಮುಖಾಮುಖಿ
ಒಟ್ಟು ಪಂದ್ಯ 30
ಮುಂಬೈ ಜಯ 17
ಬೆಂಗಳೂರು ಜಯ 13
ಆರಂಭ: ರಾ.7.30

ಇನ್ನೊಂದು ಪಂದ್ಯ
ಹೈದರಾಬಾದ್‌-ರಾಜಸ್ಥಾನ
ಸ್ಥಳ: ಹೈದರಾಬಾದ್‌
ಆರಂಭ: ಮ.3.30
ಮುಖಾಮುಖಿ
ಒಟ್ಟು ಪಂದ್ಯ 16
ಹೈದರಾಬಾದ್‌ ಜಯ 08
ರಾಜಸ್ಥಾನ್‌ ಜಯ 08
ನೇರಪ್ರಸಾರ: ಸ್ಟಾರ್‌ ನ್ಪೋರ್ಟ್ಸ್, ಜಿಯೊ

Advertisement

Udayavani is now on Telegram. Click here to join our channel and stay updated with the latest news.

Next