Advertisement

IPL 2023: ಗುಜರಾತ್‌ಗೆ ಸತತ ಎರಡನೇ ಜಯ

12:22 AM Apr 05, 2023 | Team Udayavani |

ಹೊಸದಿಲ್ಲಿ: ಸಾಯಿ ಸುದರ್ಶನ್‌ ಅವರ ಅಬ್ಬರದ ಬ್ಯಾಟಿಂಗ್‌ ನೆರವಿನಿಂದ ಹಾಲಿ ಚಾಂಪಿಯನ್‌ ಗುಜರಾತ್‌ ಟೈಟಾನ್ಸ್‌ ಇಲ್ಲಿ ಮಂಗಳವಾರ ನಡೆದ ಐಪಿಎಲ್‌ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ 6 ವಿಕೆಟ್‌ಗಳ ಗೆಲುವು ಸಾಧಿಸಿತು. ಇದು ಗುಜರಾತ್‌ನ ಸತತ ಎರಡನೇ ಜಯ.
ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಡೆಲ್ಲಿ 8 ವಿಕೆಟಿಗೆ 162 ರನ್‌ ಗಳಿಸಿ ದರೆ, ಗುಜರಾತ್‌ 18.1 ಓವರ್‌ಗಳಲ್ಲಿ ನಾಲ್ಕು ವಿಕೆಟ್‌ಗೆ 163 ರನ್‌ ಸೇರಿಸಿ ಜಯಭೇರಿ ಬಾರಿಸಿತು.

Advertisement

ಗುಜರಾತ್‌ ಅಬ್ಬರದಿಂದಲೇ ಚೇಸಿಂಗ್‌ಗೆ ಮುಂದಾ ಯಿತು. ಪವರ್‌ ಪ್ಲೇಯಲ್ಲಿ 54 ರನ್‌ ಗಳಿಸಿತು. ಆದರೆ ಡೆಲ್ಲಿ 3 ವಿಕೆಟ್‌ ಉರುಳಿಸಿ ತಿರುಗೇಟು ನೀಡಿತು. ಸಾಹಾ, ಗಿಲ್‌ (ತಲಾ 14), ನಾಯಕ ಪಾಂಡ್ಯ (5) ಪೆವಿಲಿಯನ್‌ ಸೇರಿಕೊಂಡರು. ಈ ಹಂತದಲ್ಲಿ ಸಾಯಿ ಸುದರ್ಶನ್‌ ಅವರನ್ನು ಸೇರಿಕೊಂಡ ವಿಜಯ್‌ ಶಂಕರ್‌ ಜೋಡಿ ನಾಲ್ಕನೇ ವಿಕೆಟ್‌ಗೆ 53 ರನ್‌ ಸೇರಿಸುವ ಮೂಲಕ ತಂಡವನ್ನು ಆರಂಭಿಕ ಕುಸಿತದಿಂದ ಪಾರು ಮಾಡಿದರು. ವಿಜಯ್‌ ಶಂಕರ್‌ (29) ನಿರ್ಗಮಿಸಿದ ಬಳಿಕ ಸಾಯಿ ಮತ್ತು ಡೇವಿಡ್‌ ಮಿಲ್ಲರ್‌ (ಔಟಾಗದೆ 16 ಎಸೆತಗಳಲ್ಲಿ 31 ರನ್‌) ಮುರಿಯದ ಐದನೇ ವಿಕೆಟ್‌ಗೆ 56 ರನ್‌ ಸೇರಿಸಿ ತಂಡಕ್ಕೆ ಗೆಲುವು ಒದಗಿಸಿದರು. ಸಾಯಿ ಅವರು 48 ಎಸೆತಗಳನ್ನು ಎದುರಿಸಿ ನಾಲ್ಕು ಬೌಂಡರಿ ಮತ್ತು ಎರಡು ಸಿಕ್ಸರ್‌ಗಳೊಂದಿಗೆ 62 ರನ್‌ ಗಳಿಸಿ ಅಜೇಯರಾಗಿ ಉಳಿದರು. ಸಾಯಿ ಅರ್ಹವಾಗಿಯೇ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಉತ್ತಮ ಮೊತ್ತ ಸೇರಿಸಲು ಡೆಲ್ಲಿ ವಿಫ‌ಲ
ಡೆಲ್ಲಿ ಮತ್ತೆ ಆರಂಭಿಕ ವೈಫ‌ಲ್ಯಕ್ಕೆ ಸಿಲುಕಿತು. ಅಲ್ಜಾರಿ ಜೋಸೆಫ್, ಮೊಹಮ್ಮದ್‌ ಶಮಿ, ರಶೀದ್‌ ಖಾನ್‌ ಸೇರಿಕೊಂಡು ಗುಜರಾತ್‌ಗೆ ಸ್ಪಷ್ಟ ಮೇಲುಗೈ ಒದಗಿಸಿದರು. ಪೃಥ್ವಿ ಶಾ (7), ಮಿಚೆಲ್‌ ಮಾರ್ಷ್‌ (4) ಪುನಃ ಕೈಕೊಟ್ಟದ್ದು ಡೆಲ್ಲಿಗೆ ಭಾರೀ ಹಿನ್ನಡೆಯಾಗಿ ಪರಿಣಮಿಸಿತು. ಮತ್ತೋರ್ವ ಟಿ20 ಸ್ಪೆಷಲಿಸ್ಟ್‌ ರಿಲೀ ರೋಸ್ಯೂ (0) ಗೋಲ್ಡನ್‌ ಡಕ್‌ ಸಂಕಟಕ್ಕೆ ಸಿಲುಕಿದರು. ಒಂದೆಡೆ ಕ್ರೀಸ್‌ ಆಕ್ರಮಿಸಿಕೊಂಡು ನಿಂತಿದ್ದ ಡೇವಿಡ್‌ ವಾರ್ನರ್‌ ಮತ್ತು ರಿಲೀ ರೋಸ್ಯೂ ಅವರನ್ನು ಜೋಸೆಫ್ ಸತತ ಎಸೆತಗಳಲ್ಲಿ ಕೆಡವಿ ಡೆಲ್ಲಿ ಸಂಕಟವನ್ನು ಬಿಗಡಾಯಿಸುವಂತೆ ಮಾಡಿದರು.

ವಾರ್ನರ್‌ 37 ರನ್‌ ಹೊಡೆದರು. 32 ಎಸೆತಗಳ ಈ ಬ್ಯಾಟಿಂಗ್‌ 7 ಬೌಂಡರಿ ಒಳಗೊಂಡಿತ್ತು. ವಾರ್ನರ್‌ ಬಳಿಕ ತಂಡವನ್ನು ಆಧರಿಸಿದವರೆಂದರೆ ಸರ್ಫರಾಜ್‌ , ಅಭಿಷೇಕ್‌ ಪೊರೆಲ್‌ ಮತ್ತು ಅಕ್ಷರ್‌ ಪಟೇಲ್‌. ಪಂತ್‌ ಬದಲು ತಂಡವನ್ನು ಸೇರಿಕೊಂಡ ಕೀಪರ್‌ ಪೊರೆಲ್‌ ಆಕ್ರಮಣದ ಸೂಚನೆ ನೀಡಿದರೂ ಇನ್ನಿಂಗ್ಸ್‌ ಬೆಳೆಸಲು ವಿಫ‌ಲರಾದರು. ಇವರ ಗಳಿಕೆ 11 ಎಸೆತಗಳಿಂದ 20 ರನ್‌ (2 ಸಿಕ್ಸರ್‌). ಸರ್ಫರಾಜ್‌ 30 ರನ್‌ ಮಾಡಿದರೂ ಇದಕ್ಕೆ 34 ಎಸೆತ ತೆಗೆದು ಕೊಂಡರು. ಹೊಡೆದದ್ದು ಎರಡೇ ಬೌಂಡರಿ. ಅಕ್ಷರ್‌ ಪಟೇಲ್‌ ಆಟ ಬಿರುಸಿನಿಂದ ಕೂಡಿತ್ತು. ಅವರು 22 ಎಸೆತಗಳಿಂದ 36 ರನ್‌ ಬಾರಿಸಿದರು. ಸಿಡಿಸಿದ್ದು 2 ಬೌಂಡರಿ, 3 ಸಿಕ್ಸರ್‌. ಅಕ್ಷರ್‌ ಸಾಹಸದಿಂದಾಗಿ ಡೆಲ್ಲಿ ಮೊತ್ತ 160ರ ಗಡಿ ದಾಟಿತು.

Advertisement

Udayavani is now on Telegram. Click here to join our channel and stay updated with the latest news.

Next