ಎರಡೂ ತಂಡಗಳು ತಮ್ಮ ಕೊನೆಯ ಪಂದ್ಯದಲ್ಲಿ ಸೋಲನುಭವಿಸಿವೆ. ಪಂಜಾಬ್ ಒಂದು ದಿನದ ಹಿಂದಷ್ಟೇ ಲಕ್ನೋಗೆ 257 ರನ್ ಬಿಟ್ಟುಕೊಟ್ಟು ಚಚ್ಚಿಸಿಕೊಂಡರೆ, ಚೆನ್ನೈ ಜೈಪುರದ ಮೇಲಾಟದಲ್ಲಿ ರಾಜಸ್ಥಾನ್ ವಿರುದ್ಧ 32 ರನ್ನುಗಳ ಹಿನ್ನಡೆ ಕಂಡಿತ್ತು. ಹೀಗಾಗಿ ಎರಡೂ ತಂಡಗಳು ಗೆಲುವಿನ ಹಾದಿಗೆ ಮರಳುವ ಕಾತರದಲ್ಲಿವೆ. ತವರಿನ ಪಂದ್ಯವಾದ್ದರಿಂದ ಚೆನ್ನೈ ಇಲ್ಲಿನ ನೆಚ್ಚಿನ ತಂಡವೆಂಬುದರಲ್ಲಿ ಅನುಮಾನವಿಲ್ಲ.
Advertisement
ಡೇವನ್ ಕಾನ್ವೇ, ರುತುರಾಜ್ ಗಾಯಕ್ವಾಡ್, ಅಜಿಂಕ್ಯ ರಹಾನೆ, ಶಿವಂ ದುಬೆ ಅವರನ್ನೊಳಗೊಂಡ ಚೆನ್ನೈ ಬ್ಯಾಟಿಂಗ್ ಸರದಿ ಸಾಕಷ್ಟು ಬಲಿಷ್ಠವೇ. ಆದರೆ ರಾಜಸ್ಥಾನ್ ವಿರುದ್ಧ 202 ರನ್ ಚೇಸ್ ಮಾಡುವಾಗ ಕಾನ್ವೇ, ರಹಾನೆ ಅಪರೂಪದ ವೈಫಲ್ಯ ಕಂಡಿದ್ದರು. ರಾಯುಡು ಸೊನ್ನೆ ಸುತ್ತಿ ವಾಪಸಾಗಿದ್ದರು. ಗಾಯಕ್ವಾಡ್, ದುಬೆ ಅವರ ಬ್ಯಾಟಿಂಗ್ ಹೋರಾಟದಿಂದ ಯಾವುದೇ ಪ್ರಯೋಜನವಾಗಲಿಲ್ಲ. ಚೆನ್ನೈ ಮೇಲುಗೈಗೆ ಅಗ್ರ ಕ್ರಮಾಂಕದ ಯಶಸ್ಸು ಅಗತ್ಯ ಎಂಬುದು ಇದರಿಂದ ಸಾಬೀತಾಗುತ್ತದೆ. ಬೆನ್ ಸ್ಟೋಕ್ಸ್ ಇನ್ನೂ ಚೇತರಿಸದಿರುವುದು ತಂಡಕ್ಕೆ ಎದುರಾದ ದೊಡ್ಡ ಹಿನ್ನಡೆ.
ಇತ್ತ ಪಂಜಾಬ್ ಕಿಂಗ್ಸ್‌ಗೆ ನಾಯಕ ಶಿಖರ್ ಧವನ್ ಅವರ ಮರು ಪ್ರವೇಶವಾದರೂ ಲಾಭವಾಗಲಿಲ್ಲ. ಲಕ್ನೋಗೆ ತವರಿನ ಮೊಹಾಲಿ ಅಂಗಳದಲ್ಲೇ ಇನ್ನೂರೈವತ್ತಕ್ಕೂ ಹೆಚ್ಚು ರನ್ ಬಿಟ್ಟುಕೊಟ್ಟು ಪೆಟ್ಟು ತಿಂದಿತು. ಬೌಲರ್‌ಗಳಿಂದ ಚೆನ್ನೈಯಲ್ಲಿ ಪ್ರಾಯಶ್ಚಿತ್ತ ಸಾಧ್ಯವೇ ಎಂಬುದೊಂದು ಪ್ರಶ್ನೆ.
ಬೃಹತ್ ಮೊತ್ತದ ಚೇಸಿಂಗ್ ವೇಳೆ ಧವನ್ ಒಂದೇ ರನ್ನಿಗೆ ಆಟ ಮುಗಿಸಿ ತೆರಳಿದ್ದರು. ಪ್ರಭ್‌ಸಿಮ್ರಾನ್ ಕೂಡ ಸಿಡಿದು ನಿಲ್ಲಲಿಲ್ಲ. ಅಥರ್ವ ಟೈಡೆ, ಸಿಕಂದರ್ ರಝ, ಲಿವಿಂಗ್‌ಸ್ಟೋನ್, ಸ್ಯಾಮ್ ಕರನ್, ಶಾರುಖ್ ಖಾನ್ ಅವರೆಲ್ಲ ಚೆನ್ನೈ ದಾಳಿಯನ್ನು ಎದುರಿಸಿ ನಿಂತರೆ ಪಂದ್ಯ ಹೆಚ್ಚಿನ ಪೈಪೋಟಿ ಕಾಣಲಿದೆ.