ಬೆಂಗಳೂರು: ಈ ಬಾರಿಯ ಐಪಿಎಲ್ ನಲ್ಲಿ ಪ್ಲೇ ಆಫ್ ಸ್ಥಾನದ ಸೆಣಸಾಟ ಮುಂದುವರಿದಿದೆ. ಬಹುತೇಕ ಲೀಗ್ ಆಟಗಳು ಮುಗಿಯುವ ಹಂತ ಬಂದರೂ ಗುಜರಾತ್ ಹೊರತುಪಡಿಸಿ ಯಾವುದೇ ತಂಡಗಳು ಸ್ಥಾನ ಭದ್ರ ಪಡಿಸಿಕೊಂಡಿಲ್ಲ.
ಇನ್ನೂ ಎರಡು ಪಂದ್ಯಗಳು ಬಾಕಿ ಉಳಿದಿರುವಂತೆಯೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಪ್ಲೇಆಫ್‌ಗೆ ಅರ್ಹತೆ ಪಡೆಯುವ ಯೋಗ್ಯ ಅವಕಾಶವನ್ನು ಹೊಂದಿದೆ. ಇಂದು ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಪಂದ್ಯವಾಡಲಿದೆ.
12 ಪಂದ್ಯಗಳಿಂದ 12 ಅಂಕಗಳೊಂದಿಗೆ ಆರ್ ಸಿಬಿ ಅಂಕಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ. ಗುರುವಾರ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಗೆಲುವು ಸಾಧಿಸಿದರೆ ಪ್ಲೇಆಫ್ ಸ್ಥಾನಗಳಿಗೆ ತೀವ್ರ ಸ್ಪರ್ಧಿಯಾಗಿ ನಿಲ್ಲುತ್ತದೆ.
ಇನ್ನು ಎರಡು ಪಂದ್ಯಗಳು ಬಾಕಿ ಉಳಿದಿರುವ ಆರ್‌ಸಿಬಿಯು ಹೈದರಾಬಾದ್ ಮತ್ತು ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ತಂಡವನ್ನು ಸೋಲಿಸಿದರೆ 16 ಅಂಕಗಳ ಪಡೆಯಲಿದೆ. ಬುಧವಾರದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಡೆಲ್ಲಿ ಕ್ಯಾಪಿಟಲ್ಸ್ ಸೋಲಿಸಿದ ನಂತರ ಅವರಿಗೆ ಅರ್ಹತೆ ಪಡೆಯಲು ಎರಡು ಗೆಲುವುಗಳು ಸಾಕಾಗಬೇಕು.
ಇದೀಗ, ಆರ್ ಸಿಬಿ ಎದುರಿಸುತ್ತಿರುವ ಏಕೈಕ ಸ್ಪರ್ಧೆಯೆಂದರೆ ಮುಂಬೈ ಇಂಡಿಯನ್ಸ್. ಮುಂಬೈಗೂ 16 ಪಾಯಿಂಟ್ ಗಳನ್ನು ಗಳಿಸುವ ಅವಕಾಶವಿದೆ. ಆದರೆ ಆರ್ ಸಿಬಿ ಉತ್ತಮ ರನ್ ರೇಟ್ ಹೊಂದಿದೆ.
ಆದರೆ ಕೊನೆಯ ಎರಡು ಪಂದ್ಯಗಳಲ್ಲಿ ಒಂದನ್ನು ಸೋತರೆ ಆರ್ ಸಿಬಿ ಭಾರೀ ಸಂಕಷ್ಟಕ್ಕೆ ಸಿಲುಕಲಿದೆ. ಆಗ ಕೇವಲ 14 ಅಂಕಗಳನ್ನು ತಲುಪಲು ಸಾಧ್ಯವಾಗುತ್ತದೆ. ಇದು ರಾಜಸ್ಥಾನ್ ರಾಯಲ್ಸ್, ಪಂಜಾಬ್ ಕಿಂಗ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ಕನಸುಗಳನ್ನು ಜೀವಂತವಾಗಿರಿಸಲು ಅನುವು ಮಾಡಿಕೊಡುತ್ತದೆ. ಆ ಸಂದರ್ಭದಲ್ಲಿ, ನಿವ್ವಳ ರನ್ ರೇಟ್ ಅಂತಿಮ ನಿರ್ಧಾರಕವಾಗಿರುತ್ತದೆ.