ಬೆಂಗಳೂರು: ವಿರಾಟ್ ಕೊಹ್ಲಿ ಮತ್ತು ನಾಯಕ ಫಾಫ್ ಡು ಪ್ಲೆಸಿಸ್ ಬ್ಯಾಟಿಂಗ್ ಸಹಾಯದಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಗೆಲುವು ಸಾಧಿಸಿದೆ. ಇದರೊಂದಿಗೆ ಪ್ಲೇ ಆಫ್ ಗೆ ಮತ್ತಷ್ಟು ಹತ್ತಿರವಾಗಿದೆ.
14 ಅಂಕಗಳನ್ನು ಪಡೆದಿರುವ ಆರ್ ಸಿಬಿ ಕಳೆದ ಪಂದ್ಯದ ಜಯದ ಕಾರಣದಿಂದ ನಾಲ್ಕನೇ ಸ್ಥಾನಕ್ಕೇರಿದೆ. ಮುಂಬೈ ಇಂಡಿಯನ್ಸ್ ಕೂಡಾ 14 ಅಂಕ ಹೊಂದಿದ್ದು, ಕಳಪೆ ರನ್ ರೇಟ್ ಕಾರಣದಿಂದ (-0.128) ಐದನೇ ಸ್ಥಾನದಲ್ಲಿದೆ. ಬೆಂಗಳೂರು ತಂಡವು +0.180 ರನ್ ರೇಟ್ ಹೊಂದಿದೆ.
ಆರ್ ಸಿಬಿಯ ಗೆಲುವು ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಪಂಜಾಬ್ ಕಿಂಗ್ಸ್ ಗೆ ಕೆಟ್ಟ ಸುದ್ದಿಯಾಗಿದ್ದು, ಎರಡೂ ತಂಡಗಳು ತಮ್ಮ ಕೊನೆಯ ಪಂದ್ಯ ಗೆದ್ದರೆ ಕೇವಲ 14 ಅಂಕಗಳನ್ನು ತಲುಪಬಹುದು. ಆದರೆ ಅವರ ನೆಟ್ ರನ್ ರೇಟ್ ಆರ್ ಸಿಬಿಗಿಂತ ಗಮನಾರ್ಹವಾಗಿ ಕಡಿಮೆಯಿದೆ. ಹೀಗಾಗಿ ಪವಾಡದ ಹೊರತು ಇವೆರಡು ತಂಡಗಳು ಪ್ಲೇ ಆಫ್ ತಲುಪುದು ಕಷ್ಟಕರ. ಆದರೆ ಮುಂಬೈ ಮತ್ತು ರಾಜಸ್ಥಾನ್ ರಾಯಲ್ಸ್ ಇನ್ನೂ ಅವಕಾಶ ಹೊಂದಿದೆ.
ರಾಜಸ್ಥಾನ ರಾಯಲ್ಸ್ ತಂಡವು ಶುಕ್ರವಾರದ ಪಂದ್ಯದಲ್ಲಿ ಪಂಜಾಬ್ ತಂಡವನ್ನು ಎದುರಿಸುತ್ತದೆ. ಎರಡೂ ತಂಡಗಳಿಗೂ ಇದು ಕೊನೆಯ ಲೀಗ್ ಪಂದ್ಯ. ಸೋತ ತಂಡ ಕೂಟದಿಂದ ಹೊರಬೀಳಲಿದೆ. ಪಂಜಾಬ್ ಗೆದ್ದರೂ ರೇಸ್ ನಲ್ಲಿ ಉಳಿಯಬೇಕಾದರೆ ರನ್ ರೇಟ್ ನಲ್ಲಿ ಭಾರೀ ಸುಧಾರಣೆ ಅಗತ್ಯ. ಆರ್ ಸಿಬಿ ಅಥವಾ ಮುಂಬೈ ತಮ್ಮ ಕೊನೆಯ ಪಂದ್ಯದಲ್ಲಿ ಸೋತರೆ ಕೇವಲ 14 ಅಂಕಗಳನ್ನು ತಲುಪಬಹುದು, ಆಗ ಪ್ಲೇ ಆಫ್ ತಲುಪಲು ಅವರಿಗೆ ಕಷ್ಟವಾಗಬಹುದು. ಉತ್ತಮ ರನ್ ರೇಟ್ ಹೊಂದಿರುವ ರಾಜಸ್ಥಾನ ಆಗ ಲೆಕ್ಕಾಚಾರಕ್ಕೆ ಬರಲಿದೆ.
ಗುಜರಾತ್ ಟೈಟಾನ್ಸ್ ಮಾತ್ರ ಇಲ್ಲಿಯವರೆಗೆ ಅರ್ಹತೆ ಪಡೆದಿರುವ ತಂಡವಾಗಿದ್ದು, ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ಎರಡೂ 15 ಅಂಕಗಳೊಂದಿಗೆ ಇವೆ. ಸಿಎಸ್ ಕೆ ಕೊನೆಯ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಎದುರಿಸಲಿದೆ. ಈ ಪಂದ್ಯದಲ್ಲಿ ಗೆದ್ದರೆ ಪ್ಲೇ ಆಫ್ ಸ್ಥಾನ ಭದ್ರವಾಗಲಿದೆ. ಒಂದು ವೇಳೆ ಸಿಎಸ್ ಕೆ ಸೋತರೆ ಆಗ ಆರ್ ಸಿಬಿ ಅಥವಾ ಮುಂಬೈ ತಂಡಗಳು ಟಾಪ್ 2ಕ್ಕೆ ತಲುಪಲು ಅವಕಾಶವಿದೆ.